Advertisement

ಹಸಿವಿನ ಸೂಚ್ಯಂಕ: ಭಾರತಕ್ಕೆ ಕಳಂಕ ತರುವ ಷಡ್ಯಂತ್ರ

10:35 PM Oct 16, 2022 | Team Udayavani |

ಐರ್ಲೆಂಡ್‌ ಮತ್ತು ಜರ್ಮನಿಯ ಸರಕಾರೇತರ ಸಂಸ್ಥೆಗಳು ಜಂಟಿಯಾಗಿ ಶನಿವಾರದಂದು ಬಿಡುಗಡೆ ಮಾಡಿರುವ ಜಾಗತಿಕ ಹಸಿವಿನ ಸೂಚ್ಯಂಕ-2022ರ ಯಾದಿಯಲ್ಲಿ ಭಾರತದ ರ್‍ಯಾಂಕಿಂಗ್‌ 107ಕ್ಕೆ ಕುಸಿದಿದೆ. ವಿದೇಶಿ ಎನ್‌ಜಿಒಗಳು ಬಿಡುಗಡೆ ಮಾಡಿರುವ ಈ ಸೂಚ್ಯಂಕ ಇದೀಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದನ್ನು ಸಿದ್ಧಪಡಿಸಿ, ಬಿಡುಗಡೆ ಮಾಡಿದ ಸಂಸ್ಥೆಗಳ ಅಧಿಕೃತ ಮಾನ್ಯತೆ ಮತ್ತು ವಿಶ್ವಾಸಾರ್ಹತೆಯ ಬಗೆಗೆ ಭಾರೀ ಅನುಮಾನಗಳನ್ನು ಮೂಡಿಸಿದೆ. ಭಾರತದ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದಲೇ ಇಂತಹ ಕಾರ್ಯದಲ್ಲಿ ಈ ಸಂಸ್ಥೆಗಳು ನಿರತವಾಗಿವೆ ಎಂದು ಕೇಂದ್ರ ಸರಕಾರ, ದೇಶದಲ್ಲಿನ ಹಲವಾರು ಸರಕಾರೇತರ ಸಂಸ್ಥೆಗಳು ಮತ್ತು ಸಂಘಟನೆಗಳು ಕಿಡಿ ಕಾರಿವೆ.

Advertisement

ಈ ಎನ್‌ಜಿಒಗಳು ವಿಶ್ವದ ಒಟ್ಟಾರೆ 121 ರಾಷ್ಟ್ರಗಳನ್ನು ಪರಿಗಣಿಸಿ ಜಾಗತಿಕ ಹಸಿವಿನ ಸೂಚ್ಯಂಕ ಯಾದಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಭಾರತಕ್ಕೆ 107ನೇ ಸ್ಥಾನ ಲಭಿಸಿರುವುದು ಕೇವಲ ಭಾರತ ಮಾತ್ರವಲ್ಲದೆ ಇಡೀ ಜಾಗತಿಕ ಸಮುದಾಯದ ಅಚ್ಚರಿಗೆ ಕಾರಣವಾಗಿದೆ. ಈ ಸಂಸ್ಥೆಗಳು ಯಾವ ಮಾನದಂಡದಲ್ಲಿ ಈ ಸೂಚ್ಯಂಕವನ್ನು ಸಿದ್ಧಪಡಿಸಿವೆ ಎಂಬ ಬಗೆಗೆ ಸ್ಪಷ್ಟ ಹೇಳಿಕೆ ನೀಡಿಲ್ಲವಾಗಿದ್ದು, ಸಹಜವಾಗಿಯೇ ಈ ಸಂಸ್ಥೆಗಳ ಉದ್ದೇಶ ಮತ್ತು ಇದರ ಹಿಂದೆ ಷಡ್ಯಂತ್ರವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರ ಹಿಂದೆ ಕುತಂತ್ರ ಅಡಗಿದೆಯೇ ಎಂಬ ಬಗೆಗೆ ಸಂಶಯಗಳು ಕೇವಲ ಸರಕಾರ ಮಾತ್ರವಲ್ಲದೆ ದೇಶದ ಜನತೆಯನ್ನೂ ಕಾಡತೊಡಗಿದೆ.

ಕಳೆದ ಬಾರಿ ಅಂದರೆ 2021ರ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾದ ಜಾಗತಿಕ ಹಸಿವಿನ ಸೂಚ್ಯಂಕದಲ್ಲೂ ಭಾರತ 101ನೇ ಸ್ಥಾನದಲ್ಲಿತ್ತು. ಆಗಲೇ ಈ ಸೂಚ್ಯಂಕದ ಬಗೆಗೆ ಕೇಂದ್ರ ಸರಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಬಳಿಕ ವಿಶ್ವ ಆಹಾರ ಸಂಸ್ಥೆ ತಪ್ಪುಗಳನ್ನು ಸರಿಪಡಿಸುವ ಭರವಸೆ ನೀಡಿ ವಿವಾದವನ್ನು ತಣ್ಣಗಾಗಿಸಿತ್ತು. ಈ ಸಂಬಂಧ ದೇಶದಲ್ಲಿ ಒಂದಿಷ್ಟು ರಾಜಕೀಯ ಚರ್ಚೆ, ಆರೋಪ-ಪ್ರತ್ಯಾರೋಪಗಳ ವಿನಿಮಯಕ್ಕೆ ಕಾರಣವಾಯಿತೇ ವಿನಾ ಈ ಸೂಚ್ಯಂಕದ ನೈಜತೆ ಅಥವಾ ಇದರ ಹಿಂದಿರುವ ಶಕ್ತಿಗಳನ್ನು ಭೇದಿಸುವ ಪ್ರಯತ್ನ ಸರಕಾರದಿಂದ ನಡೆಯಲಿಲ್ಲ. ಈಗ ಮತ್ತೆ ಇದೇ ಸಂಸ್ಥೆಗಳು ಸೂಚ್ಯಂಕವನ್ನು ಬಿಡುಗಡೆ ಮಾಡಿ ಭಾರತದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಸಿರುವಂತೆ ಕಂಡುಬರುತ್ತಿದೆ.

ಈ ಬಾರಿಯೂ ಕೇಂದ್ರ ಸರಕಾರ ಜಾಗತಿಕ ಹಸಿವಿನ ಸೂಚ್ಯಂಕದ ಬಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಇದನ್ನು ಅವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದ್ದು ಮಾನದಂಡಗಳು ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದೇ ವೇಳೆ ವಿಪಕ್ಷಗಳು ಜಾಗತಿಕ ಹಸಿವಿನ ಸೂಚ್ಯಂಕವನ್ನು ಅಸ್ತ್ರವನ್ನಾಗಿಸಿಕೊಂಡು ಕೇಂದ್ರ ಸರಕಾರದ ವಿರುದ್ಧ ಮುಗಿಬೀಳ ಲಾರಂಭಿಸಿವೆ. ಇಂಥ ವಿಚಾರಗಳಲ್ಲಿ ರಾಜಕೀಯ ನಡೆಸದೆ ಎಲ್ಲರೂ ವಿದೇಶಿ ಷಡ್ಯಂತ್ರವನ್ನು ಬಯಲಿಗೆಳೆಯಲು ಸರಕಾರದೊಂದಿಗೆ ಕೈಜೋಡಿಸಬೇಕಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಮತ್ತು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಆಹಾರ ಭದ್ರತಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ದೇಶದ ವಿರುದ್ಧ ಇಂಥ ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಇದಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಈ ಬಾರಿ ಈ ಸೂಚ್ಯಂಕವನ್ನು ಸಿದ್ಧಪಡಿಸಿದ ವಿದೇಶಿ ಸಂಸ್ಥೆಗಳ ವಿರುದ್ಧ ಅಂತಾರಾಷ್ಟ್ರೀಯ ಕಾನೂನು ನಿಯಮಾವಳಿಗಳಿಗನುಸಾರವಾಗಿ ಕ್ರಮ ಕೈಗೊಂಡು ದೇಶದ ವರ್ಚಸ್ಸು, ಘನತೆಯನ್ನು ಎತ್ತಿಹಿಡಿಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next