Advertisement

ಶತಮಾನ ಕಂಡ ನ್ಪೋರ್ಟ್ಸ್ ಕ್ಲಬ್‌ ಅವಸಾನದತ್ತ

12:13 PM May 23, 2019 | Team Udayavani |

ಲಿಂಗಸುಗೂರು: ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಿದ ಅಧಿಕಾರಿಗಳ ನ್ಪೋರ್ಟ್ಸ್ ಕ್ಲಬ್‌ ಇಂದು ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡು ಅವಸಾನದತ್ತ ಸಾಗಿದೆ.

Advertisement

ಪಟ್ಟಣದ ಕರಡಕಲ್ ಕೆರೆ ತಟದಲ್ಲಿರುವ ಅಧಿಕಾರಿಗಳ ನ್ಪೋರ್ಟ್ಸ್ ಕ್ಲಬ್‌ ಕಟ್ಟಡಕ್ಕೆ ಸುಮಾರು 135ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಆಡಳಿತದಲ್ಲಿ ಈಗಿನ ಲಿಂಗಸುಗೂರು ಅಂದು ಛಾವಣಿ ಎಂದು ಕರೆಯಲಾಗುತ್ತಿದ್ದರು. ಛಾವಣಿ ಸೈನಿಕರ ನೆಲೆಯಾಗಿತ್ತು. ಅಂದಿನ ಆಡಳಿತದಲ್ಲಿ ನಿರ್ಮಿಸಿದ ಕಟ್ಟಡಗಳಲ್ಲಿ ಕೆಲವು ಇಂದಿಗೂ ಗಟ್ಟಿಮುಟ್ಟಾಗಿವೆ. ಇನ್ನೂ ಕೆಲವು ಶಿಥಿಲಾವಸ್ಥೆ ತಲುಪಿವೆ. ಅದರಲ್ಲಿ ನ್ಪೋರ್ಟ್ಸ್ ಕ್ಲಬ್‌ ಕೂಡಾ ಒಂದಾಗಿದೆ.

ಕರಡಕಲ್ ಕೆರೆ ಸುಮಾರು 315 ಎಕರೆ ವಿಶಾಲವಾಗಿದೆ. ಇದರ ದಡದಲ್ಲಿ ಬ್ರಿಟಿಷ್‌ ಅಧಿಕಾರಿಗಳು ತಮಗೆ ವಿಶ್ರಾಂತಿಗಾಗಿ ಹಾಗೂ ಮನರಂಜನೆಗಾಗಿ ನ್ಪೋರ್ಟ್ಸ್ ಕ್ಲಬ್‌ ನಿರ್ಮಿಸಿದ್ದರು. ಈಗಲೂ ಇದನ್ನು ನ್ಪೋರ್ಟ್ಸ್ ಕ್ಲಬ್‌ನ್ನಾಗಿ ಬಳಕೆ ಮಾಡಲಾಗುತ್ತಿದೆ. ಇದರ ಆವರಣದಲ್ಲಿ ಟೆನ್ನಿಸ್‌ ಕೋರ್ಟ್‌ ಇದ್ದು ಪಟ್ಟಣದ ಗಣ್ಯರು, ಕೆಲ ಅಧಿಕಾರಿಗಳು ಇಲ್ಲಿ ನಿತ್ಯವೂ ಟೆನ್ನಿಸ್‌ ಆಡುತ್ತಾರೆ. ಆಗಾಗ ಪಂದ್ಯಾವಳಿ ಏರ್ಪಡಿಸುತ್ತಾರೆ.

ಕಟ್ಟಡ ಶಿಥಿಲ: ಗತಕಾಲದ ವೈಭವವನ್ನು ಸಾರಿ ಹೇಳುತ್ತಿರುವ ಕ್ಲಬ್‌ನ ಕಟ್ಟಡದ ಎಡಭಾಗದ ಕೊಠಡಿಯ ಗೋಡೆ, ಛತ್ತು ಸಂಪೂರ್ಣ ಬಿರುಕು ಬಿಟ್ಟಿದೆ. ಕಟ್ಟಡ ಯಾವಾಗ ಕುಸಿದು ಬೀಳುತ್ತದೆ ಎಂಬುದು ಹೇಳತೀರದಾಗಿದೆ. ಕಟ್ಟಡದ ಕಾಂಪೌಂಡ್‌ ಗೋಡೆ ಕೂಡಾ ಅಲ್ಲಲ್ಲಿ ಕುಸಿದಿದೆ. ಐತಿಹಾಸಿಕ ಕಟ್ಟಡ ಇಂದು ನಿರ್ವಹಣೆ ಕೊರತೆಯಿಂದಾಗಿ ಅವಸಾನದಂಚಿಗೆ ತಲುಪಿದೆ. ಕ್ರೀಡಾ ಅಧಿಕಾರಿಗಳು ಇದಕ್ಕೆ ಆಸಕ್ತಿ ತೋರಿ ದುರಸ್ತಿ ಮಾಡಬೇಕಾಗಿತ್ತು. ನ್ಪೋರ್ಟ್ಸ್ ಕ್ಲಬ್‌ಗ ಸಹಾಯಕ ಆಯುಕ್ತರೇ ಅಧ್ಯಕ್ಷರಾಗಿರುತ್ತಾರೆ. ಈ ಹಿಂದೆ ಇಲ್ಲಿ ಸಹಾಯಕ ಆಯುಕ್ತರಾಗಿದ್ದ ಭರತ್‌ಲಾಲ್ ಮೀನಾ ಹಾಗೂ ನಾಯಕ್‌ ಅವರು ಆಸಕ್ತಿ ತೋರಿ ಇದನ್ನು ದುರಸ್ತಿ ಮಾಡಿಸಿ ನಿರ್ವಹಣೆ ಮಾಡಿದ್ದರು. ಇದಕ್ಕಾಗಿ ಎರಡು ಬ್ಲಾಕ್‌ಗಳಿಗೆ ಅವರಿಬ್ಬರ ಹೆಸರಿಡಲಾಗಿದೆ. ನಂತರದಲ್ಲಿ ಯಾರೂ ಈ ಕಟ್ಟಡದತ್ತ ಕಾಳಜಿ ತೋರದ ಹಿನ್ನಲೆಯಲ್ಲಿ ಕಟ್ಟಡ ದುಸ್ಥಿತಿಗೆ ತಲುಪಿದೆ.

ಟೆನ್ನಿಸ್‌ ಕೋರ್ಟ್‌ ಅಭಿವೃದ್ಧಿಗೆ ಮಾತ್ರ ಆಸಕ್ತಿ: ಕ್ಲಬ್‌ ಆವರಣದ ಟೆನ್ನಿಸ್‌ ಕೋರ್ಟ್‌ನಲ್ಲಿ ನಿತ್ಯ ಬೆಳಗ್ಗೆ ಪಟ್ಟಣದ ಗಣ್ಯರು, ಅಧಿಕಾರಿಗಳು ಟೆನ್ನಿಸ್‌ ಆಡುತ್ತಾರೆ. ಅವರೆಲ್ಲರೂ ಪ್ರಯತ್ನಪಟ್ಟು ಪುರಸಭೆಯಿಂದ ಅನುದಾನ ಪಡೆದು ಟೆನ್ನಿಸ್‌ ಕೋರ್ಟ್‌ ಅಭಿವೃದ್ಧಿಪಡಿಸಿದ್ದಾರೆ. ಆದರೆ ಕ್ಲಬ್‌ ಕಟ್ಟಡ ದುರಸ್ತಿಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ನಯನ ಮನೋಹರ: ವಿಶಾಲವಾದ ಕರಡಕಲ್ ಕೆರೆಯಲ್ಲಿ ಯಾವಾಗಲೂ ನೀರಿನಿಂದ ಭರ್ತಿಯಾಗಿರುತ್ತಿದೆ. ಸಂಜೆ ವೇಳೆ ಕ್ಲಬ್‌ನಲ್ಲಿ ನಿಂತು ಕೆರೆ ವೀಕ್ಷಣೆ ಮಾಡುವುದೇ ಅದ್ಭುತ ಅನುಭವವಾಗಿದೆ. ಇಂತಹ ಕೆರೆ ಮತ್ತು ನ್ಪೋರ್ಟ್ಸ್ ಕ್ಲಬ್‌ ಅಭಿವೃದ್ಧಿಪಡಿಸಿ ಪಟ್ಟಣದ ನಾಗರಿಕರಿಗೆ ಪ್ರವಾಸಿ ತಾಣವನ್ನಾಗಿ ಮಾಡಲು ಇಲ್ಲಿನ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆಯಿದೆ. ಈ ಹಿಂದೆ ಸಹಾಯಕ ಆಯುಕ್ತರಾಗಿದ್ದ ಎಂ.ಪಿ.ಮಾರುತಿ ಅವರು ಹಟ್ಟಿ ಚಿನ್ನದ ಗಣಿ ಸ್ಥಳೀಯ ಪ್ರದೇಶಾಭಿವೃದ್ಧಿಯಿಂದ 10 ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕಾಗಿ ಶ್ರಮವಹಿಸಿದ್ದರು. ಆದರೆ ಅವರು ವರ್ಗಾವಣೆಯಿಂದಾಗಿ ಅದು ನನೆಗುದಿಗೆ ಬಿದ್ದಿದೆ.

•ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next