ಮುಂಬೈ:ಮುಂಬೈ ಮಹಾನಗರಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಥಾಣಾ ಜಿಲ್ಲೆಯ ಬದ್ಲಾಪುರ್ ನಲ್ಲಿ ಶುಕ್ರವಾರ ರಾತ್ರಿಯಿಂದ ನೀರಿನ ಮಧ್ಯೆ ಮುಂಬೈ-ಕೊಲ್ಲಾಪುರ್ ಎಕ್ಸ್ ಪ್ರೆಸ್ ರೈಲು ಸಿಲುಕಿಕೊಂಡಿದ್ದು, ಎಲ್ಲಾ 700 ಮಂದಿ ಪ್ರಯಾಣಿಕರನ್ನು ಸತತ 5ಗಂಟೆಗಳ ರಕ್ಷಣಾ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ರಕ್ಷಿಸುವಲ್ಲಿ ಎನ್ ಡಿಆರ್ ಎಫ್ ಯಶಸ್ವಿಯಾಗಿದೆ.
ಥಾಣೆಯ ಬದ್ಲಾಪುರ್ ನಲ್ಲಿ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ನೀರಿನಲ್ಲಿ ಸಿಲುಕಿಕೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು. ಇದೀಗ 700 ಮಂದಿ ಪ್ರಯಾಣಿಕರನ್ನು ಕಲ್ಯಾಣ್ ನಿಂದ ಕೊಲ್ಲಾಪುರಕ್ಕೆ ವಿಶೇಷ ರೈಲಿನಲ್ಲಿ ಕಳುಹಿಸಲುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮನ್ನು ಹೇಗಾದರೂ ಮಾಡಿ ಕಾಪಾಡಿ ಎಂದು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ರೈಲಿನೊಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರು ವಿಡಿಯೋವನ್ನು ಹರಿಯಬಿಡುವ ಮೂಲಕ ಮನವಿ ಮಾಡಿಕೊಂಡಿದ್ದರು.
ಪ್ರಯಾಣಿಕರನ್ನು ರಕ್ಷಿಸಲು ಎನ್ ಡಿಆರ್ ಎಫ್ ಪಡೆ, ಹೆಲಿಕಾಪ್ಟರ್ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಐಎಎನ್ ಎಸ್ ಜತೆ ಮಾತನಾಡಿರುವ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ನಲ್ಲಿರುವ ಪ್ರಯಾಣಿಕರು, ಕಳೆದ 15 ಗಂಟೆಗಳಿಂದ ರೈಲಿನೊಳಗೆ ಬಂಧಿಯಾಗಿದ್ದವೆ. ರೈಲಿನಿಂದ ಹೊರಹೋಗಲು ಯಾವುದೇ ಮಾರ್ಗ ಇಲ್ಲದಂತಾಗಿದೆ. ಐದರಿಂದ ಆರು ಅಡಿ ನೀರು ರೈಲಿನ ಸುತ್ತಲೂ ತುಂಬಿಕೊಂಡಿದೆ. ಕುಡಿಯಲು ನೀರೂ ಕೂಡಾ ಇಲ್ಲ ಎಂದು ಅಳಲು ತೋಡಿಕೊಂಡಿದ್ದರು.
ಅಲ್ಲದೇ ಯಾವುದೇ ಕಾರಣಕ್ಕೆ ರೈಲಿನಿಂದ ಹೊರಬರಲು ಪ್ರಯತ್ನಿಸಬೇಡಿ ಎಂದು ರೈಲ್ವೆ ಇಲಾಖೆ ಪ್ರಯಾಣಿಕರೆಗೆ ಎಚ್ಚರಿಕೆ ನೀಡಿತ್ತು. ಯಾಕೆಂದರೆ ರೈಲಿನ ಹೊರಭಾಗದಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಪ್ರಾಣಕ್ಕೆ ತೊಂದರೆಯಾಗಬಹುದು ಎಂದು ತಿಳಿಸಿದೆ. ಶೀಘ್ರವೇ ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿತ್ತು.