Advertisement

ಕೋವಿಡ್-19: ಜನ ಜೀವನದ ಮೇಲೆ ಕರಿನೆರಳು

11:20 AM Mar 22, 2020 | mahesh |

ಉಡುಪಿ: ಕೋವಿಡ್-19 ವೈರಸ್‌ ಇದೀಗ ನೂರಾರು ಸಣ್ಣ ಸಣ್ಣ ವ್ಯಾಪಾರಸ್ಥರ ಹಾಗೂ ವಾಹನ ಚಾಲಕರ ಬದುಕಿನ ಮೇಲೂ ಪ್ರಹಾರ ನಡೆಸಿದೆ. ಕೋವಿಡ್-19 ಭೀತಿಯಿಂದಾಗಿ ಪ್ರಯಾಣಿಕರ ಸಂಖ್ಯೆ ತೀರಾ ಇಳಿದಿದೆ. ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬರುವ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. ಇದರಿಂದ ವಾಹನ ಚಾಲಕರು ಹೈರಾಣಾಗಿದ್ದಾರೆ. ದಿನಕ್ಕೆ ಕನಿಷ್ಠವೆಂದರೂ 100 ಟ್ರಿಪ್‌ನಲ್ಲಿ ಪ್ರವಾಸಿಗರನ್ನು ವಿವಿಧ ಕಡೆಗಳಿಗೆ ಕರೆದೊಯ್ಯುತ್ತಿದ್ದ ರಿಕ್ಷಾ, ಟ್ಯಾಕ್ಸಿಗಳು 10 ಟ್ರಿಪ್‌ಗ್ೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಪ್ರವಾಸದ ಪ್ಯಾಕೇಜ್‌ ಬುಕ್ಕಿಂಗ್‌ಗಳೆಲ್ಲವನ್ನೂ ಪ್ರವಾಸಿಗರು ರದ್ದು ಮಾಡಿದ್ದಾರೆ.

Advertisement

ನಿತ್ಯದ ಕೂಳಿಗೂ ಕನ್ನ
ಪ್ರವಾಸಿ ಸ್ಥಳಗಳು ಬಂದ್‌ ಆಗಿವೆ. ಇದನ್ನೇ ಹೊಟ್ಟೆಪಾಡಿಗಾಗಿ ನಂಬಿದವರಿಗೆ ದಿಕ್ಕೇ ತೋಚದಂತಾಗಿದೆ. ಉಡುಪಿ , ಮಣಿಪಾಲ, ಮಲ್ಪೆ ಬೀಚ್‌ ಸುತ್ತಮುತ್ತ ಸೇರಿದಂತೆ ಅನೇಕ ಕಡೆ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದರು. ಪ್ರವಾಸಿಗರು ಇಲ್ಲದೇ ಇವರ ಸಂಪಾದನೆ ಶೂನ್ಯವಾಗಿದೆ. ಮುಖ್ಯವಾಗಿ ಹಣ್ಣಿನ ವ್ಯಾಪಾರ, ಕರಕುಶಲ ವಸ್ತುಗಳ ವ್ಯಾಪಾರ, ಆಟಿಕೆಗಳನ್ನು ಮಾರಾಟ ಮಾಡುವವರು ಹೈರಣಾಗಿದ್ದಾರೆ.

ಮಲ್ಪೆ ಬೀಚ್‌ 5 ಲ.ರೂ. ನಷ್ಟ!
ಉಡುಪಿ ಕೇಂದ್ರ ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್‌ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಇದರಿಂದಾಗಿ ನಿತ್ಯ ಸುಮಾರು 5 ಲ.ರೂ. ನಷ್ಟವಾಗುತ್ತಿದೆ. ಈ ಬೀಚ್‌ಗೆ ಹೊಂದಿಕೊಂಡು ಸುಮಾರು 50ಕ್ಕೂ ಅಧಿಕ ಗೂಡು ಅಂಗಡಿ ಹಾಗೂ 130ಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿದ್ದವು. ನಿತ್ಯ 1,000 ಅಧಿಕ ಮಂದಿ ಮಲ್ಪೆಗೆ ಭೇಟಿ ನೀಡುತ್ತಿದ್ದರು, ವಾರದ ಕೊನೆಯಲ್ಲಿ 5000ಕ್ಕೂ ಅಧಿಕ ಮಂದಿ ಮಲ್ಪೆಗೆ ಬೀಚ್‌ಗೆ ಭೇಟಿ ನೀಡುತ್ತಿದ್ದರು.

ಗೂಡಂಗಡಿ ಬಂದ್‌
ಮಣಿಪಾಲ ಸೇರಿದಂತೆ ವಿವಿಧ ಕಡೆಯಲ್ಲಿ ಚಾಟ್ಸ್‌ ಅಂಗಡಿಗಳನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ಬಂದ್‌ ಮಾಡಲಾಗಿದೆ. ರಸ್ತೆ ಬದಿಯ ಕಲ್ಲಂಗಡಿ ಹಣ್ಣು, ತಾಳೆ ಹಣ್ಣಿನ ಮಾರಾಟ ಸಹ ನಿಂತು ಹೋಗಿದೆ. ಹಣ್ಣಿನ ಅಂಗಡಿ, ಹೂವಿನ ಅಂಗಡಿಗಳಲ್ಲಿ ವ್ಯಾಪಾರ ಸ್ಥಗಿತಗೊಂಡಿದೆ. ಹೊಟೇಲ್‌ಗ‌ಳಲ್ಲಿ ವ್ಯಾಪಾರ ಅಷ್ಟಕ್ಕಷ್ಟೆ ಆಗಿದೆ.

ಛಾಯಾಚಿತ್ರಗ್ರಹಣಕ್ಕೆ ಕೊರೊನಾ ಬಿಸಿ
ಕೋವಿಡ್-19 ಭೀತಿ ಹಿನ್ನೆಲೆ ಜಿಲ್ಲೆಯಲ್ಲಿ ನೇಮ, ನಿಶ್ಚಿತಾರ್ಥ, ಮದುವೆಗಳು ರದ್ದಾಗಿವೆ. ಈಗಾಗಲೇ ಬುಕ್‌ ಆಗಿರುವ ಫೋಟೋ ಗ್ರಫಿ ಹಾಗೂ ವೀಡಿಯೋಗ್ರಫಿ ರದ್ದಾಗಿದ್ದು, ಛಾಯಾ ಚಿತ್ರಕಾರರು ಆತಂಕ ಕ್ಕೀಡಾಗಿದ್ದಾರೆ. ಸ್ಟುಡಿಯೋ ಖರ್ಚನ್ನೂ ನಿಭಾಯಿಸಬೇಕಾಗಿದೆ ಎನ್ನುತ್ತಾರೆ ಛಾಯಾಚಿತ್ರಗ್ರಾಹಕ ಸುಂದರ್‌ ನಿಟ್ಟೂರು.

Advertisement

2 ಟ್ರಿಪ್‌ ಸಿಗೋದೆ ಹೆಚ್ಚು
ಮಲ್ಪೆ ಬೀಚ್‌ನಿಂದ ವಿವಿಧ ಕಡೆಗಳಿಗೆ ನಿತ್ಯ 50ಕ್ಕೂ ಅಧಿಕ ಟ್ರಿಪ್‌ ಆಗುತ್ತಿತ್ತು. ಆದರೆ ಕೊರೊನಾ ಭೀತಿ ಎದುರಾಗುತ್ತಿದಂತೆ ದಿನಕ್ಕೆ 2 ಟ್ರಿಪ್‌ ಸಿಗೋದೆ ಹೆಚ್ಚು.
-ಶರತ್‌, ರಿಕ್ಷಾ ಚಾಲಕ.

ಗಡಿ ಭಾಗದಲ್ಲಿ ಚೆಕ್‌ ಪೋಸ್ಟ್‌
ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ. ಮುಂದಿನ ದಿನಗಳ‌ಲ್ಲಿ ಅಗತ್ಯ ಬಿದ್ದರೆ ಜಿಲ್ಲೆಗೆ ಬರುವ ಪ್ರವಾಸಿಗರನ್ನು ತಡೆಯಲು ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗುತ್ತದೆ.
-ಜಿ.ಜಗದೀಶ್‌, ಜಿಲ್ಲಾಧಿಕಾರಿ

ಮುದ್ರಣ, ಶಾಮಿಯಾನ, ಹೊಟೇಲ್‌ ಉದ್ಯಮ ಕಂಗಾಲು
ಮಲ್ಪೆ: ಕೊರೊನಾ ವೈರಸ್‌ ಹಾವಳಿಯಿಂದಾಗಿ ಸಭೆ ಮದುವೆಗಳು ರದ್ದಾದ್ದ ರಿಂದ ಅದರ ಪರಿಣಾಮ ಮುದ್ರಣ, ಶಾಮಿ ಯಾನ, ಹೊಟೇಲ್‌ ಉದ್ಯಮದ ಮೇಲಾಗಿದೆ.

ಮುದ್ರಣ ಸ್ಥಗಿತ
ಉಡುಪಿ ಜಿಲ್ಲೆಯಲ್ಲಿ ಸುಮಾರು 180 ಪ್ರಿಂಟಿಂಗ್‌ ಪ್ರಸ್‌ಗಳಿವೆ. ಕಳೆದ ಎರಡು ವಾರಗಳಿಂದ ಶೇ.60ರಷ್ಟು ವ್ಯವಹಾರಗಳು ಕುಸಿದಿವೆ. ಸಾಮಾನ್ಯವಾಗಿ ಮುದ್ರಕರು ಯಾವುದೇ ಧಾರ್ಮಿಕ ಕೇಂದ್ರಗಳ ಅಥವಾ ಇನ್ನಿತರ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯ ಮುದ್ರಣದ ವೆಚ್ಚವನ್ನು ಮುಂಗಡವಾಗಿ ಭರಿಸಿ ಮುದ್ರಿಸಿಕೊಟ್ಟ ಬಳಿಕ ಮೊತ್ತವನ್ನು ಸ್ವೀಕರಿಸುವುದು. ಇದೀಗ ಬಹುತೇಕ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದ್ದರಿಂದ ಈಗಾಗಲೇ ಮುದ್ರಣಗೊಂಡಿರುವ ಆಮಂತ್ರಣ ಪತ್ರಿಕೆಗಳು ಮುದ್ರಕರ ಬಳಿಯಲ್ಲೇ ಉಳಿದಿವೆ. ಮುದ್ರಿಸಿದ ಹಣವೂ ಕೈಸೇರದೆ ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ ಎನ್ನುತ್ತಾರೆ ಮುದ್ರಣ ಸಂಸ್ಥೆಯವರು.

ಹೊಟೇಲ್‌, ಲಾಡ್ಜ್ ಗಳು ಖಾಲಿ ಖಾಲಿ
ಉಡುಪಿ-ಮಣಿಪಾಲ-ಮಲ್ಪೆ ಯಲ್ಲಿ 800ರಿಂದ 1,000ಕ್ಕೂ ಸಣ್ಣ ಮತ್ತು ದೊಡ್ಡ ಹೊಟೇಲ್‌ಗ‌ಳಿವೆ. ಕೊರೊನಾದಿಂದಾಗಿ ಸಂಪೂರ್ಣ ಹೊಟೇಲ್‌ ಉದ್ಯಮ ನೆಲಕಚ್ಚಿದೆ. ಇದಕ್ಕೆ ಪೂರಕ ಉದ್ಯಮಗಳಾದ 200ರಿಂದ 300 ಲಾಡ್ಜ್ಗಳು ನಷ್ಟದಲ್ಲಿವೆ. ವಿದ್ಯುತ್‌ ಬಿಲ್‌, ಬಾಡಿಗೆ, ನಿರ್ವಹಣೆ ವೆಚ್ಚ, ನೌಕರರಿಗೆ ವೇತನಕ್ಕೆ ಆದಾಯ ಇಲ್ಲದೆ ಲಕ್ಷಾಂತರ ರೂ., ವೆಚ್ಚ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಮಿಯಾನ ಉದ್ಯಮಕ್ಕೂ ಹೊಡೆತ
ಸಭೆ ಸಮಾರಂಭಗಳು ರದ್ದಾಗಿರುವುದರಿಂದ ಶಾಮಿಯಾನ ಉದ್ಯಮಕ್ಕೂ ನೇರ ಹೊಡೆತ ಬಿದ್ದಿದೆ. ಈ ಸಮಯ ಕಾರ್ಯಕ್ರಮಗಳ ಸೀಸನ್‌. ಉತ್ತಮ ವ್ಯವಹಾರ ನಡೆಯುತ್ತಿತ್ತು. ಕೊರೊನಾ ದಿಂದಾಗಿ ಆರ್ಡರ್‌ಗಳೆಲ್ಲ ರದ್ದಾಗಿವೆ. ಇದ್ದರಿಂದ ಕೆಲಸಗಾರರಿಗೆ ವೇತನ ಕೊಡಲೂ ಕಷ್ಟವಾಗಿದೆ ಎನ್ನುತ್ತಾರೆ ಶಾಮಿಯಾನ ಬಾಡಿಗೆ ವ್ಯವಹಾರ ನಡೆಸುತ್ತಿರುವ ಪ್ರಕಾಶ್‌ ಎಂ. ಕಲ್ಮಾಡಿ ಅವರು.

ಆರ್ಡರ್‌ಗಳು ಬರುತ್ತಿಲ್ಲ
ಸಾಲ ಮಾಡಿ ಮುದ್ರಣಕ್ಕೆ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ ಯಾವುದೇ ಪ್ರಿಂಟಿಂಗ್‌ ಆರ್ಡರ್‌ಗಳು ಬರುತ್ತಿಲ್ಲ. ಮಾರ್ಚ್‌ ಅಂತ್ಯವಾದ್ದರಿಂದ ಬ್ಯಾಂಕುಗಳಿಂದ ಸಾಲ ಮರುಪಾವತಿಯ ಒತ್ತಡ ಬೇರೆ ಇದೆ.
-ಎಂ. ಮಹೇಶ್‌ ಕುಮಾರ್‌, ಅಧ್ಯಕ್ಷರು, ಉಡುಪಿ ಜಿಲ್ಲಾ ಮುದ್ರಣ ಮಾಲಕರ ಸಂಘ

ಆದಾಯ ಶೂನ್ಯ
ಹೊಟೇಲ್‌, ಲಾಡ್ಜೆಂಗ್‌ ಉದ್ಯಮ ಸಂಪೂರ್ಣ ನಷ್ಟದಲ್ಲಿದೆ. ದೊಡ್ಡ ಪ್ರಮಾಣದ ಹೊಟೇಲ್‌ ಉದ್ಯಮವೇ ಸ್ಥಗಿತಗೊಂಡಿರುವುದರಿಂದ ಆದಾಯ ಶೂನ್ಯವಾಗಿದೆ. ನೌಕರರಿಗೆ ವೇತನ, ವಿದ್ಯುತ್‌ ಬಿಲ್‌, ನಿರ್ವಹಣೆ ವೆಚ್ಚ, ಬಾಡಿಗೆ ಸೇರಿದಂತೆ ಲಕ್ಷಾಂತರ ರೂ., ವ್ಯಯಿಸಬೇಕಿದೆ.
-ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಹೊಟೇಲ್‌ ಮಾಲಕರ ಸಂಘ

ಶ್ರೀಕೃಷ್ಣಮಠದಲ್ಲಿ ಕಾರ್ಯಕ್ರಮಗಳು ರದ್ದು
ಉಡುಪಿ: ಕೋವಿಡ್-19 ನಿಯಂತ್ರಣಕ್ಕೆ ಸರಕಾರದ ಸೂಚನೆಯಂತೆ ಶ್ರೀಕೃಷ್ಣಮಠದಲ್ಲಿ ಪೂಜೆಗಳನ್ನುಹೊರತುಪಡಿಸಿ ಜನರು ಸೇರುವ ಪ್ರವಚನವೇ ಮೊದಲಾದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ಜಾಗತೀಕರಣದ ಹಿನ್ನೆಲೆಯಲ್ಲಿ ಪ್ರಕೃತಿಯನ್ನು ಮರೆತು ಮನುಷ್ಯ ವ್ಯವಹರಿಸಿದ್ದರಿಂದ ಚೀನ ದೇಶದ ಕಾಯಿಲೆ ಇಂದು ವಿಶ್ವವ್ಯಾಪಿ ಹಬ್ಬಿದೆ. ಸರಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇಂದು ಜಲ, ಭೂಮಿ ಶುದ್ಧವಾಗಿಡಲು ಸಂಕಲ್ಪ ಮಾಡಬೇಕಿದೆ. ಜನರು ಭಯಗೊಳ್ಳಬಾರದು, ಮಠದಲ್ಲೂ ಸರಕಾರದ ಆದೇಶ ಪಾಲಿಸುತ್ತಿರುವುದಾಗಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next