Advertisement

ಸಮಸ್ಯೆ ನೂರಾರು: ಗೋಳು ಕೇಳ್ಳೋರ್ಯಾರು…?

10:40 PM Jul 23, 2019 | Team Udayavani |

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

Advertisement

ಮೋರಿ ಕುಸಿತದ ಆತಂಕ: ಸ್ಪಂದನೆ ಇಲ್ಲ
ಜಪ್ಪಿನಮೊಗರು ಜೆಪ್ಪು ಕುಡುಪಾಡಿ ರಸ್ತೆಯ ಶ್ರೀ ಜನಾರ್ದನ ಭಜನ ಮಂದಿರಕ್ಕೆ ಹೋಗುವಲ್ಲಿ ತೋಡಿಗೆ ಅಡ್ಡಲಾಗಿ ಹಾಕಿರುವ ಕಾಂಕ್ರಿಟ್‌ ಮೋರಿ ಯಾವುದೇ ಸಂದರ್ಭದಲ್ಲಿಯೂ ಬೀಳುವ ಸ್ಥಿತಿಯಲ್ಲಿದೆ. ಈ ಬಗ್ಗೆ ಹಿಂದೆಯೂ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿತ್ತು. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ತತ್‌ಕ್ಷಣ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸದಿದ್ದಲ್ಲಿ ಮೋರಿ ಸ್ಲ್ಯಾಬ್‌ ಕುಸಿದು ಅನಾಹುತವಾಗುವ ಸಂಭವವಿದೆ.
-ಅರುಣ್‌ಕುಮಾರ್‌, ಸ್ಥಳೀಯರು

ರಸ್ತೆ ಅಗೆದು ತಿಂಗಳಾದರೂ ಸರಿ ಪಡಿಸಿಲ್ಲ
ನಂತೂರು ವೃತ್ತದ ಬಳಿ ರಸ್ತೆಯನ್ನು ಅಗೆದು ಹಾಕಿ ತಿಂಗಳಾಯಿತು. ಆದರೆ ಸರಿ ಮಾಡುವ ಕೆಲಸ ಇದುವರೆಗೆ ನಡೆದಿಲ್ಲ. ಇದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗಿ ತಾಸುಗಟ್ಟಲೆ ವಾಹನಗಳು ಕಾಯಬೇಕಾಗಿ ಬಂದಿದೆ. ಮಳೆ ಇದ್ದರಂತೂ ಪರಿಸ್ಥಿತಿ ಹೇಳತೀರದಾಗಿದೆ. ಈ ಬಗ್ಗೆ “ಸುದಿನ’ ಈ ಹಿಂದೆಯೂ ಪಾಲಿಕೆಯ ಗಮನಕ್ಕೆ ತಂದಿತ್ತಾದರೂ ಯಾವುದೇ ಕ್ರಮ ಈವರೆಗೆ ಆಗಿಲ್ಲ.
-ವಿಶಾಲ್‌,ಸ್ಥಳೀಯರು

ಸ್ಲ್ಯಾಬ್‌ ಕುಸಿತ; ಸವಾರರಿಗೆ ಸಂಕಷ್ಟ
ನಗರದ ಮುಖ್ಯ ರಸ್ತೆಗಳಲ್ಲಿ ಕೇಬಲ್‌ ಗುಂಡಿಗಳಿಗೆ ಮುಚ್ಚಲಾದ ಸ್ಲ್ಯಾಬ್‌ಗಳು ಕುಸಿದು ಹೋಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ತೀರಾ ಸಮಸ್ಯೆಯಾಗಿ ಪರಿಣಮಿಸಿದೆ. ಮುಂಭಾಗದಲ್ಲಿ ಬಸ್‌, ಕಾರು ಮುಂತಾದ ವಾಹನಗಳಿದ್ದರೆ, ಹಿಂಭಾಗದಲ್ಲಿ ಬರುವ ದ್ವಿಚಕ್ರ ವಾಹನ ಸವಾರರಿಗೆ ಗುಂಡಿ ತಿಳಿಯದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಕೊಡಿಯಾಲಬೈಲ್‌, ಜ್ಯೋತಿ, ಹಂಪನಕಟ್ಟೆ ಸಹಿತ ಬಹುತೇಕ ಮುಖ್ಯ ರಸ್ತೆಗಳಲ್ಲಿ ಕೇಬಲ್‌ ಗುಂಡಿಗೆ ಮುಚ್ಚಲಾದ ಸ್ಲ್ಯಾಬ್‌ಗಳು ಆಳಕ್ಕಿಳಿದು ಸಮಸ್ಯೆ ಸೃಷ್ಟಿಸುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಅತೀ ಅವಶ್ಯವಾಗಿ ಗಮನ ಹರಿಸಬೇಕಿದೆ.
– ಗೋವಿಂದರಾಯ ಪ್ರಭು ಜಿ., ಹೊಗೆಬೈಲ್‌

ಅಪಾಯಕಾರಿ ವಿದ್ಯುತ್‌ ಕಂಬ
ಕಾಟಿಪಳ್ಳ ಪೆಡ್ಡಿ ಅಂಗಡಿ ಬಳಿ ವಿದ್ಯುತ್‌ ಕಂಬವು ರಸ್ತೆಗೆ ವಾಲಿಕೊಂಡಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಆರು ತಿಂಗಳಿನಿಂದ ಈ ಕಂಬವು ಇದೇ ಸ್ಥಿತಿಯಲ್ಲಿದ್ದು, ಸಂಬಂಧಪಟ್ಟವರಿಗೆ ಹೇಳಿದರೆ ಸರಿ ಮಾಡಲು ಮುಂದಾಗುತ್ತಿಲ್ಲ. ಗಾಳಿ ಬೀಸಿದರೆ ಈ ಕಂಬ ರಸ್ತೆಗೆ ಉರುಳುವ ಆತಂಕವಿದೆ. ಕಂಬದ ಅಡಿಭಾಗದಲ್ಲೇ ಓಡಾಡುವ ಸ್ಥಳೀಯರು, ವಾಹನ ಸವಾರರಿಗೆ ಈ ಕಂಬದಿಂದಾಗಿ ಭಯ ಉಂಟಾಗಿದೆ. ಸಂಬಂಧಪಟ್ಟವರು ತತ್‌ಕ್ಷಣ ಗಮನ ಹರಿಸಿ ಕಂಬವನ್ನು ಸುಸ್ಥಿತಿಯಲ್ಲಿಡುವಂತೆ ನೋಡಿಕೊಳ್ಳಬೇಕು.
-ವೆಂಕಟೇಶ್‌, ಪೌಲ್‌ ಡಿ’ಸೋಜಾ, ಜೇಮ್ಸ್‌ ಡಿ’ಸೋಜಾ, ದಾಮೋದರ ಅಂಚನ್‌, ದೋಗಪ್ಪ ದೇವಾಡಿಗ,, ಸ್ಥಳೀಯರು

Advertisement

ಹೊಸ ಮೀಟರ್‌ ಬಾಕ್ಸ್‌ ಅಳವಡಿಕೆ
ಮುಲ್ಲಕಾಡು 4ನೇ ಮುಖ್ಯರಸ್ತೆಯ ಕೋಡªಬ್ಬು ದೈವಸ್ಥಾನ ಬಳಿ ತೆರೆದ ಸ್ಥಿತಿಯಲ್ಲಿರುವ ಬೀದಿದೀಪದ ಮೀಟರ್‌ ಬಾಕ್ಸ್‌ನ ಅಪಾಯದ ಬಗ್ಗೆ “ಉದಯವಾಣಿ’ ಜನದನಿ ವಿಭಾಗದಲ್ಲಿ ಪ್ರಕಟವಾದ ವರದಿಗೆ ಮೆಸ್ಕಾಂ ಸ್ಪಂದಿಸಿದ್ದು, ವರದಿ ಪ್ರಕಟವಾದ ಮರುದಿನವೇ ಹೊಸ ಮೀಟರ್‌ ಬಾಕ್ಸ್‌ನ್ನು ಅಳವಡಿಸಿದೆ.

ಕೆಲವು ವರ್ಷಗಳಿಂದ ಮೀಟರ್‌ ಬೋರ್ಡ್‌ ತೆರೆದ ಸ್ಥಿತಿಯಲ್ಲಿದ್ದು, ಅಪಾಯಕಾರಿಯಾಗಿ ಪರಿಣಮಿಸಿತ್ತು. ಪಕ್ಕದಲ್ಲಿ ಅಂಗನವಾಡಿ ಕೇಂದ್ರವೂ ಇರುವುದರಿಂದ ಮಕ್ಕಳು ತಿಳಿಯದೇ ಕೈ ಹಾಕಿ ಅಪಾಯವಾಗುವ ಸಂಭವಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ತತ್‌ಕ್ಷಣ ಸ್ಪಂದಿಸಬೇಕೆಂದು ಉಮಾನಾಥ್‌ ಮುಲ್ಲಕಾಡು ಅವರು “ಸುದಿನ’ದ ಮೂಲಕ ಮೆಸ್ಕಾಂ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಜು. 17ರಂದು ವರದಿ ಪ್ರಕಟವಾಗಿದ್ದು, 18ರಂದೇ ಹೊಸ ಮೀಟರ್‌ ಬಾಕ್ಸ್‌ನ್ನು ಅಳವಡಿಕೆ ಮಾಡಲಾಗಿದೆ.

ಜೆಪ್ಪು – ಕುಡುಪಾಡಿ ರಸ್ತೆಯ ದುರವಸ್ಥೆ
ಜಪ್ಪಿನಮೊಗರು ಗ್ರಾಮದ ಜೆಪ್ಪು – ಕುಡುಪಾಡಿ ರಸ್ತೆಯ ದುರಾವಸ್ಥೆ ಇದು. ಸಂಪೂರ್ಣ ಡಾಮರು ಎದ್ದು ಹೋಗಿ ಜನರಿಗೆ, ವಾಹನಗಳಿಗೆ ಇಲ್ಲಿ ಓಡಾಡುವುದೇ ಕಷ್ಟವಾಗಿದೆ. ಸಮೀಪದಲ್ಲಿ ಖಾಸಗಿ ಕಟ್ಟಡದವರು ಡ್ರೈನೇಜ್‌ ಸಂಪರ್ಕಕ್ಕಾಗಿ ತೆಗೆದ ಗುಂಡಿಯನ್ನು ಸಮರ್ಪಕ ರೀತಿಯಲ್ಲಿ ಮುಚ್ಚದೇ ಇರುವುದರಿಂದಾಗಿ ರಸ್ತೆಗೆ ಈ ಪರಿಸ್ಥಿತಿ ಬಂದಿದೆ. ಸಂಬಂಧಪಟ್ಟವರು ಈ ಬಗ್ಗೆ ತತ್‌ಕ್ಷಣ ಗಮನಹರಿಸಿ.
-ಅರುಣ್‌ಕುಮಾರ್‌ ಸುವರ್ಣ, ಸ್ಥಳೀಯರು

ಗುಂಡಿ ಬಿದ್ದ ಕಾಂಕ್ರೀಟ್‌ ರಸ್ತೆ
ಕೊಚ್ಚಾಡಿ, ಕೊಪ್ಪಲಕಾಡು, ಶಾಸ್ತ್ರಿ ಕಾಂಪೌಂಡ್‌ ತನಕ ಮೂರು ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ನಡೆಸಿದ ಒಳಚರಂಡಿ ಕಾಮಗಾರಿಯಿಂದ ಕಾಂಕ್ರೀಟ್‌ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಪ್ರಸ್ತುತ ಒಳಚರಂಡಿಯಲ್ಲಿ ಶೇಖರಣೆಗೊಂಡಿರುವ ಕೊಳಚೆ ನೀರು ಹಾಗೂ ಕಲ್ಮಶಗಳು ಡ್ರೈನೇಜ್‌ ಚೇಂಬರ್‌ಗಳಿಂದ ರಭಸವಾಗಿ ಮೇಲಕ್ಕೆ ಬಂದು ರಸ್ತೆಯುದ್ದಕ್ಕೂ ಗುಂಡಿಗಳಲ್ಲಿ ಸೇರುವ ಸಾಧ್ಯತೆಗಳಿವೆ. ಡೆಂಗ್ಯೂ ಜ್ವರ ಬಾಧೆಯು ನಗರದಲ್ಲಿ ವ್ಯಾಪಕವಾಗಿದ್ದು, ಇಲ್ಲಿನ ಅವ್ಯವಸ್ಥೆಯಿಂದಾಗಿ ಜನರು ಆತಂಕಿತರಾಗಿದ್ದಾರೆ. ತತ್‌ಕ್ಷಣ ಸಂಬಂಧಪಟ್ಟವರು ಗಮನ ಹರಿಸಿ ಡ್ರೈನೇಜ್‌ ಚೇಂಬರ್‌ಗಳಿಂದ ನೀರು ಮೇಲೆ ಬಾರದಂತೆ ತಡೆಯಬೇಕು.
-ದಯಾನಂದ, ಕೊಪ್ಪಲಕಾಡು

ಇಲ್ಲಿಗೆ ಕಳುಹಿಸಿ
“ಸುದಿನ-ಜನದನಿ’ ವಿಭಾಗ, ಉದಯವಾಣಿ, ಮಾನಸ ಟವರ್‌, ಮೊದಲ ಮಹಡಿ, ಎಂಜಿ ರಸ್ತೆ, ಪಿವಿಎಸ್‌ ವೃತ್ತ ಸಮೀಪ, ಕೊಡಿಯಾಲಬೈಲ್‌, ಮಂಗಳೂರು-575003. ವಾಟ್ಸಪ್‌ ನಂಬರ್‌-9900567000. ಇ-ಮೇಲ್‌: mlr.sudina@udayavani.com

Advertisement

Udayavani is now on Telegram. Click here to join our channel and stay updated with the latest news.

Next