ಕೋಲ್ಕತಾ: ಕೋವಿಡ್ 19 ಮಹಾಮಾರಿಗೆ ಜಗತ್ತು ತತ್ತರಿಸಿ ಹೋಗಿದೆ. ಕೋವಿಡ್ 19 ವೈರಸ್ ಭಯದಿಂದ ಕಳೆದ 5 ದಿನಗಳಿಂದ ಹೌರಾ ರೈಲ್ವೆ ನಿಲ್ದಾಣದಲ್ಲಿರುವ ನೂರಾರು ವಲಸಿಗ ಕಾರ್ಮಿಕರ ರಕ್ಷಣೆಗೆ ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ವರದಿ ತಿಳಿಸಿದೆ.
ನೂರಾರು ವಲಸೆ ಕಾರ್ಮಿಕರು ಕೋಲ್ಕತಾದ ಹೌರಾ ನಿಲ್ದಾಣದಲ್ಲಿ ರಕ್ಷಣೆಗಾಗಿ ಕಾಯುತ್ತಿದ್ದಾರೆ. ಇವರಲ್ಲಿ ಕೆಲವರು ಬಿಹಾರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಿಗೆ ತೆರಳುವ ಕಾರ್ಮಿಕರಾಗಿದ್ದಾರೆ.
ಎಲ್ಲಾ ರೈಲು ಹಾಗೂ ಬಸ್ ಸಂಚಾರವನ್ನು ರದ್ದುಗೊಳಿಸಿದ್ದರಿಂದ ವಲಸೆ ಕಾರ್ಮಿಕರು ರೈಲ್ವೆ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಗಿದೆ. ಊಟ, ಚಹಾ, ತಿಂಡಿಯೂ ಇಲ್ಲ, ಕೈಯಲ್ಲಿ ಹಣವೂ ಇಲ್ಲ, ವಾಪಸ್ ಊರಿಗೆ ಹೋಗಲು ಆಗದಂತಹ ಪರಿಸ್ಥಿತಿ ಕಾರ್ಮಿಕರದ್ದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವಾಗಲಿ ಅಥವಾ ಪಶ್ಚಿಮ ಬಂಗಾಳ ಸರ್ಕಾರ ವಲಸೆ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 536ಕ್ಕೆ ಏರಿದೆ. 11 ಮಂದಿ ಸಾವನ್ನಪ್ಪಿದ್ದು, ಸುಮಾರು 40 ಜನರು ಗುಣಮುಖರಾಗಿದ್ದಾಎ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಡಾಟಾ ದಾಖಲೆ ವಿವರಿಸಿದೆ.