Advertisement
ದೋಸೆ ಕ್ಯಾಂಪ್‌ಗ್ಳ ಹೆಸರನ್ನು ಎಲ್ಲರೂ ಕೇಳಿರಬಹುದು. ಅದರಲ್ಲೂ ಬೆಂಗಳೂರಿನಲ್ಲಿರುವ ಮಂದಿಯ ಕಿವಿಯ ಮೇಲಂತೂ ಬಿದ್ದೇ ಇರುತ್ತದೆ. ಅದರಲ್ಲೂ ಕೆಲವರಿಗೆ ವಾರಕ್ಕೆ ಎರಡು ಬಾರಿಯಾದರೂ ಈ ಕ್ಯಾಂಪ್‌ಗ್ಳಿಗೆ ಭೇಟಿ ನೀಡಬೇಕೆಂಬ ತವಕ ಇದ್ದೇ ಇರುತ್ತದೆ. ಶನಿವಾರ ಮತ್ತು ರವಿವಾರದ ಸಂಜೆಯೆಂದರೆ ಕ್ಯಾಂಪ್‌ಗ್ಳಿಗೆ ಹಬ್ಬ. ಬಹುತೇಕ ಕುಟುಂಬಗಳು ತಮ್ಮ ತಮ್ಮ ಬಡಾವಣೆಯ ಹತ್ತಿರದ ದೋಸೆ ಕ್ಯಾಂಪ್‌ಗ್ಳ ಎದುರು ಸಾಲು ನಿಂತಿರುತ್ತಾರೆ.
ನಿಜ, ನಮ್ಮ ದೋಸೆಗಳ ವೈವಿಧ್ಯಕ್ಕೂ ನಗರೀಕರಣಕ್ಕೂ ಸಂಬಂಧವಿದೆ. ಆರಂಭದಲ್ಲಿ ವಿಚಿತ್ರ ಎನಿಸಬಹುದು. ಆದರೆ ನಗರದಲ್ಲಿರುವ ನಮ್ಮ ನಾಲಗೆಯ ರುಚಿಯೇ ಬೇರೆ. ಹಳ್ಳಿಯಲ್ಲಿದ್ದಾಗಿನ ನಮ್ಮ ನಾಲಗೆಯೇ ಬೇರೆ. ವಾಸ್ತವವಾಗಿ ಈ ನಗರೀಕರಣ ನಿಂತಿರುವುದೇ ಆ ರುಚಿಯ ಮೇಲೆ. ಅದಕ್ಕಾಗಿಯೇ ನಮಗೆ ಮಸಾಲೆ ದೋಸೆ ಎಂದರೆ ಇಷ್ಟವಾಗುವುದು, ಪಾನಿಪೂರಿ ಎಂದರೆ ಬಾಯಲ್ಲಿ ನೀರು ಬರುವುದು.
Related Articles
Advertisement
ನಗರೀಕರಣ ಹೆಚ್ಚಾಗುತ್ತಿದ್ದಂತೆ ಹಳ್ಳಿಯಿಂದ ಲಕ್ಷಾಂತರ ಲೆಕ್ಕದಲ್ಲಿ ನಗರಗಳಿಗೆ ವಲಸೆ ಬಂದರು. ಅದಕ್ಕೆ ತಕ್ಕಂತೆ ಹೊಟೇಲ್‌ಗಳು ಆರಂಭವಾದವು. ಹಳೆ ಮಾದರಿಯ ಪರಿಕಲ್ಪನೆಗೆ ಹೊಸ ರೂಪ ನೀಡಲಾಯಿತು. ದರ್ಶಿನಿ ಎಂಬ ಅವತಾರವೂ ಆಗಲೇ ಬಂದಿದ್ದು. ಅಲ್ಲಿ ಹಿಂದಿನಂತೆಯೇ ಒಂದೆರಡು ತಿಂಡಿ ಇಟ್ಟರೆ ಸಾಕಾಗಲಿಲ್ಲ. ಹಾಗಾಗಿ ಪ್ರಯೋಗ ಆರಂಭವಾಯಿತು. ಅದರ ಪರಿಣಾಮವಾಗಿಯೇ ರೂಪುಗೊಂಡಿದ್ದು ದೋಸೆ ಕ್ಯಾಂಪ್.
ಆರಂಭದಲ್ಲಿ ದೋಸೆ ಕ್ಯಾಂಪ್ ಇರಲಿಲ್ಲ. ಬೀದಿ ಬದಿಯ ತಿಂಡಿ ಗಾಡಿಗಳಲ್ಲಿ ಆರಂಭದಲ್ಲಿ ಬಹಳ ಜನಪ್ರಿಯವಾಗಿದ್ದು ಇಡ್ಲಿ, ಚಟ್ನಿ. ಅದರಲ್ಲೂ ಕಾಂಬಿನೇಷನ್ ವಿಚಿತ್ರವೆನಿಸಬಹುದು. ಇಡ್ಲಿಯ ಜತೆಗೆ ಉದ್ದಿನವಡೆ ಜನಪ್ರಿಯವಾಗಿದ್ದ ಹೊತ್ತದು. ಆದರೆ ಈ ಬೀದಿ ಬದಿಯ ಪ್ರಯೋಗದಲ್ಲಿ ಇಡ್ಲಿ ಜತೆಗೆ ಮಸಾಲೆ ವಡೆ (ಕಡ್ಲೆಬೇಳೆ ವಡೆ) ಕಾಂಬಿನೇಷನ್ ಆಗಿ ಬಳಸುತ್ತಿದ್ದರು. ಅದೊಂದು ಬಗೆಯಲ್ಲಿ ವಿಚಿತ್ರವಾದ ರುಚಿಯನ್ನು ಕೊಟ್ಟಿದ್ದು ಸುಳ್ಳಲ್ಲ. ನಗರ ಕಲ್ಪನೆಗಳಿಗೆ ಹೊಂದಿಕೊಂಡ ನಮ್ಮ ನಾಲಗೆ ಅದನ್ನು ಒಪ್ಪಿಕೊಂಡಿತ್ತು.
ಇನ್ನೊಂದು ವಿಚಿತ್ರವಾದ ಪರಿಕಲ್ಪನೆ ಹೇಳುವೆ. ಚಿತ್ರಾನ್ನ ಮಸಾಲೆದೋಸೆ. ಮಸಾಲೆ ದೋಸೆಯನ್ನೂ ಕೇಳಿದ್ದೇವೆ, ಚಿತ್ರಾನ್ನವನ್ನೂ ಸವಿದ ತಲೆಮಾರದು. ಹೀಗಿರುವಾಗ ಚಿತ್ರಾನ್ನ ಮಸಾಲೆ ದೋಸೆ ಹೇಗಿರಬಹುದು ಎಂಬ ಕುತೂಹಲವೂ ಇತ್ತು. ಹಾಗೆಯೇ ಇದೆಂಥದ್ದು ಎಂಬ ಉಡಾಫೆಯೂ ಇತ್ತು. ಆದರೆ ಅದು ನನ್ನೆದುರು ಬಂದಾಗ ಗಹಗಹಿಸಿ ನಕ್ಕು ಬಿಟ್ಟಿದ್ದೆ. ದೋಸೆಗೆ ಸಾಕಷ್ಟು ಎಣ್ಣೆ ಹಾಕಿ, ಖಡಕ್ ಮಾಡಿ, ಅದರೊಳಗೆ ಆಲೂಗೆಡ್ಡೆ-ಈರುಳ್ಳಿಯ ಬದಲು ಒಂದು ಮುಷ್ಟಿ ಈರುಳ್ಳಿ ಹಾಕಿ ಮಾಡಿದ ಚಿತ್ರಾನ್ನ ಇಟ್ಟು ದೋಸೆಯನ್ನು ಸುತ್ತಿ ಕೊಟ್ಟ ಅಂಗಡಿಯವ. ಅದನ್ನು ಕಂಡು ವಿಚಿತ್ರವೆನಿಸಿದರೂ ತಿಂದೆ. ಈ ಪ್ರಯೋಗ ಅಷ್ಟೊಂದು ರುಚಿಸಲಿಲ್ಲ. ಆದರೆ ಬಹಳಷ್ಟು ಜನ ಆನಂದದಲ್ಲಿ ಸವಿಯುತ್ತಿದ್ದರು.
ಈರುಳ್ಳಿ ದೋಸೆ, ರವೆ ದೋಸೆ ಎನ್ನುವ ವಿಧಗಳೇ ಬೇರೆ. ತೀರಾ ಸಾಂಪ್ರದಾಯಿಕ ಎನಿಸಬಹುದು. ಈ ನಗರೀಕರಣದಿಂದ ಉಂಟಾದ ಸ್ಪರ್ಧೆ ವೆಜಿಟೇಬಲ್ ದೋಸೆಯನ್ನು ಸೃಷ್ಟಿಸಿತು. ಕ್ಯಾಬೇಜ್ ದೋಸೆ, ಸ್ಪ್ರಿಂಗ್ ಆನಿಯನ್ ದೋಸೆ, ಸ್ಪ್ರಿಂಗ್ ದೋಸೆ…ವಿಚಿತ್ರವೆನಿಸುವ ಪರಿಕಲ್ಪನೆಗಳಿಗೆ ಜೀವ ತುಂಬಿತು. ಇಂದೂ ಇವೆಲ್ಲವೂ ಹಲವೆಡೆ ಚಾಲ್ತಿಯಲ್ಲಿವೆ. ಹೈದರಾಬಾದಿನಲ್ಲಿ ಇಂಥದ್ದೇ ಒಂದು ಪ್ರಯೋಗ ಕಂಡೆ. ಮೊಟ್ಟೆ ಮಸಾಲೆ ದೋಸೆ. ಆಮ್ಲೆಟ್ ಮಾದರಿಯಲ್ಲೇ ದೋಸೆ ಹಿಟ್ಟಿಗೆ ಮೊಟ್ಟೆ ಒಡೆದು ಹಾಕಿ, ಕಡೆದು ದೋಸೆಯಾಗಿ ಹೊಯ್ದು ಕೊಡುವುದು. ಇದೂ ಒಂದು ಬಗೆಯ ಪ್ರಯೋಗವಲ್ಲದೇ ಮತ್ತೇನು. ಇದು ಸಿಕ್ಕಾಪಟ್ಟೆ ಜನಪ್ರಿಯ. ಇಲ್ಲಿಯೂ ನಮ್ಮ ನಗರೀಕರಣದ ನಾಲಿಗೆಯೇ ಕೆಲಸ ಮಾಡಿರುವುದು.
ನನಗೆ ಇಂಥದ್ದೇ ಮತ್ತೂಂದು ಕಲ್ಪನೆಯೂ ವಿಚಿತ್ರವೆನಿಸಿದ್ದಿದೆ. ಇದೂ ಸಹ ಈ ಕೋಕೋ ಕೋಲ ಬಂದ ಮೇಲೆ ಹುಟ್ಟಿಕೊಂಡದ್ದು, ಮಧ್ಯಾಹ್ನ ಊಟಕ್ಕೆ ಹೋಟೆಲ್‌ಗೆ ಬಂದ ಗಿರಾಕಿ ಊಟದ ಜತೆಗೆ ಒಂದು ಸೋಡಾವನ್ನೋ, ಕೋಕೋ ಕೋಲಾದ (ಕಾರ್ಬನ್ ಡೈಆಕ್ಸೆ„ಡ್) ಬಾಟಲಿಯನ್ನೋ ಹಿಡಿದುಕೊಂಡಿರುತ್ತಾರೆ. ಊಟದ ತುತ್ತಿನೊಂದಿಗೆ ಒಂದು ಗುಟುಕು ಕೋಲಾ ಬೇಕು. ಸೋಡಾ ಎಂಬುದನ್ನು ನಾವು ಯಾವಾಗಲೂ ಆಹಾರ ಜೀರ್ಣಗೊಳ್ಳಲು ಬಳಸುವಂಥ ಒಂದು ಕೃತಕ ಏಜೆಂಟ್. ಊಟದ ಜತೆಗೆ ಅದನ್ನು ಬಳಸಿದರೆ ಆಹಾರವೆಲ್ಲಾ ಬೇಗ ಕರಗುವುದುಂಟು. ನಗರದ ಜೀವನ ಶೈಲಿಯೇ ಹಾಗೆ, ಎಲ್ಲವೂ ಶರವೇಗ. ಈ ಕಲ್ಪನೆಯೂ ತೀರಾ ವಿಚಿತ್ರವೆನಿಸುತ್ತದೆ. ಆದರೆ ಇದು ಇಂದಿನ ಫ್ಯಾಷನ್.
ಸುಮಾರು ಐದು ವರ್ಷಗಳಿಂದ ಆರಂಭವಾದ ದೋಸೆ ಕ್ಯಾಂಪ್ ಕಲ್ಪನೆಯೂ ಕ್ಷಿಪ್ರ ನಗರೀಕರಣದ ಹೊಡೆತಕ್ಕೆ ನಿಧಾನವಾಗಿ ಬಣ್ಣ ಕಳೆದುಕೊಳ್ಳುತ್ತಿದೆ. ಹಾಗೆಂದು ಸಂಪೂರ್ಣ ಮಸುಕಾಗಿಲ್ಲ. ಈ ಕಾವಲಿಯ ಮೇಲೆ ಮಲಬಾರ್ ಪರೋಟದಂಥ ಪ್ರಯೋಗಗಳು ನಿಧಾನವಾಗಿ ಹರಡಿಕೊಳ್ಳುತ್ತಿವೆ. ಆದರೂ ಇನ್ನಷ್ಟು ದಿನ ದೋಸೆ ಕ್ಯಾಂಪ್‌ಗ್ಳಿಗೆ ಬದುಕಿದೆ ಎನ್ನಲಡ್ಡಿಯಿಲ್ಲ.
ನಗರವೆಂದರೆ ಹೀಗೆಯೇ. ಬಹಳ ವಿರೋಧಾಭಾಸಗಳು ಮತ್ತು ವೈರುಧ್ಯಗಳು ಕಾಣಸಿಗುತ್ತವೆ. ಹಾಗೆಂದು ಈ ಮಾತನ್ನು ನೇತ್ಯಾತ್ಮಕ ನೆಲೆಯಲ್ಲಿ ಬಳಸುತ್ತಿಲ್ಲ, ಬದಲಾಗಿ ಅಲ್ಲಿನ ಲಕ್ಷಣವೆಂದೇ ಗುರುತಿಸುತ್ತಿದ್ದೇನೆ. ಅದೇ ಒಂದು ಬಗೆಯ ವೇಗವನ್ನು ಬದುಕಿಗೆ ಒದಗಿಸುತ್ತದೆ. ಅದಕ್ಕೇ ನಗರವನ್ನು ಬಿಟ್ಟು ಬರೋಣವೆಂದರೂ ಸಾಧ್ಯವಾಗದೇ ಇರುವುದು. ಮಾಯೆ ಎಂದರೂ ಅದೇ ತಾನೆ. ನಗರವೆಂದರೂ ಮಾಯೆಯೇ, ನಗರೀಕರಣವೂ ಮಾಯೆಯೇ.