Advertisement

ವಿಪಕ್ಷ ನಾಯಕ ಸ್ಥಾನಕ್ಕೆ ನೂರಾರು ಕೋಟಿ ರೂ.: ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯ

01:13 PM Jul 08, 2023 | Team Udayavani |

ವಿಜಯಪುರ: ನಮ್ಮ ಸರ್ಕಾರ ರಚನೆಯಾಗಿ ತಿಂಗಳಾದರೂ ಬಿಜೆಪಿ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿ ಸರಕಾರ ಇದ್ದಾಗ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ನಿಗದಿಯಾಗಿತ್ತು. ಈಗ ವಿಪಕ್ಷ ನಾಯಕನ ಸ್ಥಾನಕ್ಕೂ ಬಿಜೆಪಿ ನೂರಾರು ಕೋಟಿ ರೂ. ಕೊಡಬೇಕಾದ ಪರಿಸ್ಥಿತಿ ಇರಬಹುದೇನೋ ಎಂದು ಕೈಗಾರಿಕೆ, ಮೂಲಭೂತ ಸೌಕರ್ಯಗಳ ಸಚಿವ ಎಂ.ಬಿ.ಪಾಟೀಲ ಲೇವಡಿ ಮಾಡಿದರು.

Advertisement

ಶನಿವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿರುವುದು ಅವರ ಘನತೆಗೆ ತಕ್ಕುದಾಗಿಲ್ಲ. ಕೇಂದ್ರ ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿರು ಅವರು ಬಡವರ ಹಸಿವು ನೀಗುವ ಯೋಜನೆ ಬಗ್ಗೆ ಹೀಗೆಲ್ಲ ಹಗುರವಾಗಿ ಮಾತನಾಡಬಾರದು ಎಂದು ಆಕ್ಷೇಪಿಸಿದರು.

ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಇವೆಲ್ಲ ಬಡವರ ಒಳಿತಿಗಾಗಿ ಇರುವ ಯೋಜನೆಗಳೇ ಹೊರತು ಶ್ರೀಮಂತರಿಗಲ್ಲ. ಇದನ್ನು ಕೇಂದ್ರ ಸಚಿವ ಜೋಶಿ ಅರಿಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದಂತೆ ಪ್ರಸಕ್ತ ವರ್ಷವೇ ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲು ಬಾಕಿ ಕಾಮಗಾರಿಗಳಿಗೆ ಅಗತ್ಯವಿರುವ 70 ಕೋಟಿ ರೂ. ಹಣ ಶೀಘ್ರವೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ನಿಯಮಗಳ ಪ್ರಕಾರ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಟೆಂಡರ್ ಕರೆಯಬೇಕಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರ ಲೋಕೋಪಯೋಗಿ ಇಲಾಖೆಗೆ ವಹಿಸಿ ಲೋಪ ಮಾಡಿದೆ. ಈ ವಿಷಯವನ್ನು ನಾನು ಬೆಳೆಸಲು ಹೋಗುವುದಿಲ್ಲ. ವಿಮಾನ ನಿಲ್ದಾಣ ಕಾಮಗಾರಿಗೆ ಯಾವುದೇ ಅಡೆತಡೆ ಇಲ್ಲದಂತೆ ನೋಡಿಕೊಳ್ಳುವುದಾಗಿ ಹೇಳಿದರು.

Advertisement

ಅಗತ್ಯವಿರುವ ಅನುದಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಡತ ಸಿದ್ಧಪಡಿಸಿ ಮುಂದಿನ ಹಂತಕ್ಕೆ ಕಳಿಸಲಾಗಿದೆ ಎಂದರು.

ವಿಜಯಪುರ ಜಿಲ್ಲೆಯನ್ನು ಉತ್ಪಾದಕಾ ವಲಯದ ಕೈಗಾರಿಕೆ ವೃತ್ತವಾಗಿ ಅಭಿವೃದ್ಧಿ ಮಾಡುವ ಗುರಿ ಹೊಂದಲಾವಿದೆ. ಇದೇ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ‌. ಜಿಲ್ಲೆಗೆ ವೈನ್‌ ಪಾರ್ಕ, ಫುಡ್‌ ಪಾರ್ಕ್ ಎರಡೂ ಮಂಜೂರಾಗಿದೆ. ಇವುಗಳಲ್ಲಿ ಶೀತಲಗೃಹ ಸೇರಿದಂತೆ ಒಂದೇ ರೀತಿ ಸೌಲಭ್ಯಗಳಿವೆ. ಇವುಗಳನ್ನು ಸಮನ್ವಯಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ವಿತ್ತೀಯ ಕೊರತೆಯ ಬಜೆಟ್‌ ಮಂಡಿಸುವ ಸ್ಥಿತಿ ಬಂದಿದೆ. ಹಿಂದಿನ ಸರಕಾರ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿ ನೀರಾವರಿ, ಲೋಕೋಪಯೋಗಿ ಮುಂತಾದ ಇಲಾಖೆಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡು ಟೆಂಡರ್ ಕರೆದಿದ್ದೇ ಇದಕ್ಕೆ ಕಾರಣ ಎಂದು ದೂರಿದರು.

ಆದರೂ ರಾಜ್ಯದ ಬೊಕ್ಕ ತುಂಬಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಕ್ರಮಗಳನ್ನು ಪ್ರಕಟಿಸಿದ್ದಾರೆ. ಇದರ ಜತೆಗೆ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂ. ಕೊಡಲಾಗಿದೆ. ಇದರಲ್ಲಿ ಪ್ರಸ್ತುತ ಆರ್ಥಿಕ ವರ್ಷದ ಬಾಕಿ ಅವಧಿಗೆ 36 ಸಾವಿರ ಕೋಟಿ ರೂ. ಅಗತ್ಯದ ಅನುದಾನ ನೀಡುವುದಾಗಿ ಹೇಳಿದರು.

ಬಿಜೆಪಿ ಸರಕಾರ ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಅನಾಹುತ ಮಾಡಿತ್ತು. ಆಗ ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಹಲವು ಯಡವಟ್ಟು ಮಾಡಿದ್ದನ್ನು ಕಾಂಗ್ರೆಸ್ ಸರಕಾರ ಸರಿಪಡಿಸಲಿದೆ. ಪಠ್ಯಗಳಲ್ಲಿ ಬಸವಾದಿ ಶರಣರು ಸೇರಿದಂತೆ ಮಹಾತ್ಮ ಗಾಂಧೀಜಿ, ಸುಭಾಷಚಂದ್ರ ಬೋಸ್‌, ಭಗತಸಿಂಗ್‌, ಅಂಬೇಡ್ಕರ್, ಆದಿಚುಂಚನಗಿರಿ, ಸಿದ್ಧಗಂಗಾ ಶ್ರೀಗಳು, ಸಿದ್ಧೇಶ್ವರಶ್ರೀ, ಕುವೆಂಪು ಹೀಗೆ ಎಲ್ಲರ ಬಗ್ಗೆಯೂ ಪಾಠ ಕೊಡಲಿದೆ. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಸೂಕ್ತ ಆದೇಶ ಹೊರಡಿಸಲಿದ್ದಾರೆ ಎಂದು ಎಂ.ಬಿ‌.ಪಾಟೀಲ ಹೇಳಿದರು..

Advertisement

Udayavani is now on Telegram. Click here to join our channel and stay updated with the latest news.

Next