Advertisement

ರೈಲು ಯೋಜನೆಗೆ ನೂರಾರು ಕೋಟಿ

06:15 AM Feb 02, 2019 | Team Udayavani |

ಬೆಂಗಳೂರು: ನಗರದ ರೈಲ್ವೆ ಯೋಜನೆಗಳ ಮಟ್ಟಿಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹಣದ ಹೊಳೆ ಹರಿದಿದೆ. ನೇರ ಮತ್ತು ಪರೋಕ್ಷವಾಗಿ ನಗರಕ್ಕೆ ಸುಮಾರು 350 ಕೋಟಿ ರೂ. ನೀಡಲಾಗಿದೆ.

Advertisement

ಹೊಸ ಯೋಜನೆಗಳಿಗೆ ಆಸಕ್ತಿ ತೋರಿಸಿಲ್ಲವಾದರೂ ಈಗಾಗಲೇ ಕೈಗೆತ್ತಿಕೊಂಡ ಯೋಜನೆಗಳಿಗೆ ನಿರೀಕ್ಷಿತ ಅನುದಾನ ನೀಡಲಾಗಿದೆ. ಅದರಲ್ಲಿ ನಗರದ ಮಹತ್ವಾಕಾಂಕ್ಷಿ ಉಪನಗರ ಯೋಜನೆ, ಬೈಯಪ್ಪನಹಳ್ಳಿ ಕೋಚಿಂಗ್‌ ಟರ್ಮಿನಲ್‌ ಕೂಡ ಸೇರಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಇದರಿಂದ ರೈಲು ಸೇವೆಗಳು ಹಾಗೂ ಸಂಪರ್ಕ ಜಾಲ ವಿಸ್ತರಣೆಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. 

ಬೈಯಪ್ಪನಹಳ್ಳಿ ಟರ್ಮಿನಲ್‌ ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ತ್ವರಿತ ಗತಿಯಲ್ಲಿ ಮಾಡಿಮುಗಿಸಲು 20 ಕೋಟಿ ರೂ. ಮೀಸಲಿಡಲಾಗಿದೆ. ಬಹುತೇಕ ಜೂನ್‌-ಜುಲೈಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇದರಿಂದ ಆ ಮಾರ್ಗದಿಂದ ಈಗಿರುವ ನಿಲ್ದಾಣಗಳ ಮೇಲೆ ಒತ್ತಡ ಕಡಿಮೆ ಆಗಲಿದ್ದು, ನಿಗದಿತ ಅವಧಿಯಲ್ಲಿ ರೈಲುಗಳ ಆಗಮನ-ನಿರ್ಗಮನಕ್ಕೆ ನೆರವಾಗಲಿದೆ. ರೈಲುಗಳ ನಿಲುಗಡೆ ಮತ್ತು ನಿರ್ವಹಣೆ ಕೂಡ ಇಲ್ಲಿ ಆಗಲಿದೆ. 

ಅದೇ ರೀತಿ, ಕಳೆದ ಬಾರಿ ಉಪನಗರ ರೈಲು ಯೋಜನೆಗೆ ಕೇವಲ ಒಂದು ಕೋಟಿ ರೂ. ನೀಡಲಾಗಿತ್ತು. ಈ ಸಲ ಇದನ್ನು ಹತ್ತು ಕೋಟಿಗೆ ಹೆಚ್ಚಿಸಲಾಗಿದೆ. ಮತ್ತೂಂದೆಗೆ ಈಗಾಗಲೇ ಯೋಜನೆಗೆ ರಾಜ್ಯ ಸಚಿವ ಸಂಪುಟ ಈಚೆಗೆ ಅನುಮೋದನೆ ನೀಡಿದೆ. ಈ ಎಲ್ಲ ಬೆಳವಣಿಗೆಗಳು ಯೋಜನೆ ಪ್ರಗತಿಗೆ ಪೂರಕ ಕ್ರಮಗಳಾಗಲಿವೆ. ಸುಮಾರು 160 ಕಿ.ಮೀ. ಉದ್ದದ ಸಂಪರ್ಕ ಜಾಲವನ್ನು ಇದು ಸಂಪರ್ಕಿಸಲಿದೆ. 

ಸಾಮರ್ಥ್ಯ ದುಪ್ಪಟ್ಟಾಗಲಿದೆ: ಅಲ್ಲದೆ, ಕಂಟೋನ್‌ಮೆಂಟ್‌ನಿಂದ ವೈಟ್‌ಫೀಲ್ಡ್‌ ನಡುವಿನ 21 ಕಿ.ಮೀ. ಉದ್ದದ ಚತುಷ್ಪಥ ಮಾರ್ಗ ನಿರ್ಮಾಣಕ್ಕೆ 51 ಕೋಟಿ ರೂ. ಬೈಯಪ್ಪನಹಳ್ಳಿ-ಹೊಸೂರು-ಒಮಲೂರು ಮಾರ್ಗದ ವಿದ್ಯುದ್ದೀಕರಣಕ್ಕೆ 70 ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಗುಂದಕಲ್‌, ಚೆನ್ನೈ, ಕೊಯಿಮತ್ತೂರು ಮತ್ತಿತರ ಕಡೆಗಳಿಂದ ಹೆಚ್ಚು ರೈಲುಗಳ ಕಾರ್ಯಾಚರಣೆಗೆ ಅನುಕೂಲ ಆಗಲಿದೆ.

Advertisement

ಯಶವಂತಪುರ-ಹೊಸೂರು ನಡುವೆ 60 ಕಿ.ಮೀ. ಉದ್ದದ ಜೋಡಿ ಮಾರ್ಗ ನಿರ್ಮಾಣಕ್ಕೆ 124 ಕೋಟಿ ಹಾಗೂ ಯಲಹಂಕ-ಪೆನಕೊಂಡ ಜೋಡಿ ಮಾರ್ಗಕ್ಕೆ ನೂರು ಕೋಟಿ ರೂ. ನೀಡಲಾಗಿದೆ. ಪ್ರಸ್ತುತ ಇಲ್ಲಿ ನಿತ್ಯ 15-20 ರೈಲುಗಳು ಸಂಚರಿಸುತ್ತವೆ. ಸಾಮರ್ಥ್ಯ ದುಪ್ಪಟ್ಟಾದಾಗ, ಸಹಜವಾಗಿಯೇ ರೈಲುಗಳ ಸಂಖ್ಯೆ ಹೆಚ್ಚಲಿದೆ. ಉಪನಗರ ರೈಲುಗಳನ್ನು ಓಡಿಸಲಿಕ್ಕೂ ಇದು ಅನುಕೂಲ ಆಗಲಿದೆ ಎಂದು ಪ್ರಜಾಸಂಸ್ಥೆಯ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ. 

ಆದರೆ, ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆ (ಆರ್‌ಯುಬಿ/ ಆರ್‌ಒಬಿ) ನಿರ್ಮಿಸುವ ಮೂಲಕ ಲೆವೆಲ್‌ ಕ್ರಾಸಿಂಗ್‌ ಸಮಸ್ಯೆಯಿಂದ ಮುಕ್ತಿ ನೀಡಬೇಕು ಹಾಗೂ ನಗರದ 400 ಕಿ.ಮೀ. ರೈಲು ಸಂಪರ್ಕ ಜಾಲಕ್ಕೆ ಅಟೋಮೆಟಿಕ್‌ ಸಿಗ್ನಲಿಂಗ್‌ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆ ಆಗಿತ್ತು. ಇದಕ್ಕೆ ಒತ್ತುನೀಡಿಲ್ಲ. ಈ ನಿಟ್ಟಿನಲ್ಲಿ ಬಜೆಟ್‌ ಕೊಂಚ ನಿರಾಸೆ ಮೂಡಿಸಿದೆ. ಸಮಗ್ರವಾಗಿ ಹೇಳುವುದಾದರೆ, ಹಿಂದೆಂದಿಗಿಂತ ಹಣ ನೀಡಲಾಗಿದೆ. ಇದು ಚುನಾವಣಾ ಗಿಮಿಕ್‌ ಆಗಿರಲೂಬಹುದು. ಆದರೆ, ರೈಲ್ವೆ ಯೋಜನೆಗಳ ದೃಷ್ಟಿಯಿಂದ ಇದು ಸ್ವಾಗತರ್ಹ ಎಂದು ರೈಲ್ವೆ ತಜ್ಞರು ಹೇಳುತ್ತಾರೆ. 

ಪ್ರಮುಖ ಯೋಜನೆಗಳಿಗೆ ಬಂದ ಅನುದಾನ (ನೇರ, ಪರೋಕ್ಷ)
ಯೋಜನೆ    ಅನುದಾನ (ರೂ.ಗಳಲ್ಲಿ)

-ಯಶವಂತಪುರ-ಹೊಸೂರು ಜೋಡಿ ಮಾರ್ಗ    124 ಕೋಟಿ  
-ಯಶವಂತಪುರ-ಪೆನಕೊಂಡ    100 ಕೋಟಿ
-ಬೈಯಪ್ಪನಹಳ್ಳಿ-ಹೊಸೂರು-ಒಮಲೂರು    70 ಕೋಟಿ
-ಕಂಟೋನ್‌ಮೆಂಟ್‌-ವೈಟ್‌ಫೀಲ್ಡ್‌ ಚತುಷ್ಪಥ ಮಾರ್ಗ    51 ಕೋಟಿ
-ಬೈಯಪ್ಪನಹಳ್ಳಿ ಕೋಚಿಂಗ್‌ ಟರ್ಮಿನಲ್‌    20 ಕೋಟಿ 
-ಉಪನಗರ ರೈಲು ಯೋಜನೆ    10 ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next