Advertisement

ಶಿಕ್ಷಣ ವಂಚಿತರಾಗುತ್ತಿದ್ದಾರೆ ಕಾನನದ ನೂರಾರು ಮಕ್ಕಳು

06:00 AM Nov 22, 2018 | Team Udayavani |

ಬೆಂಗಳೂರು: ಅಡವಿದೇವಿಯ ಹಿರಿಯ ಮಕ್ಕಳು ಹಾಗೂ ಕಾಡಿನ ಸಂರಕ್ಷಣೆ ಹೊಣೆ ಹೊತ್ತ ಅರಣ್ಯ ಇಲಾಖೆ ನಡುವಿನ ಸಂಘರ್ಷದಲ್ಲಿ ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

Advertisement

ಶಾಲೆಗಳಿಗೆ ಹೋಗಲು ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದ ಕಾರಣ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ದೊಡ್ಡಾಣೆ, ಪಡಸನಾಥ, ಇಂಡಿಗನಾಥ, ಪೊನ್ನಾಚಿ,ತುಳಸಿಕೆರೆ, ಚಂಗಡಿ, ಕಬಗಟ್ಟಿ, ಕೊಕಬರೆ, ತೋಕರೆ,ಹನೂರು, ಮರೂರು, ಮೆದಗಾಣೆ, ದಂಟಳ್ಳಿ ಗ್ರಾಮಗಳಲ್ಲಿ ಮಕ್ಕಳು ನಗರ ಪ್ರದೇಶಗಳಿಗೆ ಕೆಲಸಕ್ಕೆ ಗುಳೆ ಹೋಗುವುದು, ಸುತ್ತಮುತ್ತಲ ಹೊಲಗಳಲ್ಲಿ ಕೂಲಿಗೆ ಹೋಗುತ್ತಿದ್ದಾರೆ.

ಶಿಕ್ಷಣ ಇಲಾಖೆ ಅಂಕಿ-ಅಂಶಗಳ ಪ್ರಕಾರ ಕಳೆದ 2 ವರ್ಷಗಳಲ್ಲಿಯೇ 150ಕ್ಕೂ ಹೆಚ್ಚು ಮಕ್ಕಳು ಶಾಲೆ ಬಿಟ್ಟಿದ್ದಾರೆ. ಗ್ರಾಮಗಳಿಗೆ ಸಮೀಪವಿರುವ ಶಾಲೆಗಳಲ್ಲಿ ಕೇವಲ 4ನೇ ತರಗತಿಯವರೆಗೆ ಮಾತ್ರ ಕಲಿಸಲಾಗುತ್ತದೆ. 5ನೇ ತರಗತಿಗೆ ಸೇರಬೇಕೆಂದರೆ ಕನಿಷ್ಠ 10 ಕಿ.ಮೀ. ಕಾಡಿನಲ್ಲಿ ನಡೆದು ಹೋಗಬೇಕು. ಈ ವೇಳೆ ಮಕ್ಕಳ ಮೇಲೆ ವನ್ಯಜೀವಿಗಳು ದಾಳಿ ಮಾಡುವ ಸಾಧ್ಯತೆಯಿದೆ ಎಂಬ ಭಯದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಚಾಮರಾಜನಗರದ ವಿವಿಧ ಅರಣ್ಯಗಳಲ್ಲಿ ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಘರ್ಷ ತಪ್ಪಿಸಲು ಅಲ್ಲಿನ ಕಾಡಿನಲ್ಲಿ ವಾಸವಾಗಿರುವ ಗ್ರಾಮದ ಜನರನ್ನು ಕಾಡು ಬಿಟ್ಟು ಬರುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಹಿರಿಯ ಜೀವಿಗಳು ಕಾಡು ತೊರೆಯಲು ಒಪ್ಪುತ್ತಿಲ್ಲ. ಇದರ ನಡುವೆ ಇಲ್ಲಿನ ಹತ್ತಾರು ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ.

ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಕಾಡಂಚಿನ 10 ಗ್ರಾಮಗಳು ಇಂದಿಗೂ ರಸ್ತೆ, ಕುಡಿಯುವ ನೀರು, ವಿದ್ಯುತ್‌, ಶಾಲೆ, ಆರೋಗ್ಯ ಕೇಂದ್ರಗಳಂತಹ ಕನಿಷ್ಠ ಸೌಲಭ್ಯಗಳು ಇಲ್ಲದೆ ನಲುಗುತ್ತಿವೆ. ಸೌಕರ್ಯಗಳನ್ನು ಒದಗಿಸುವಂತೆ ಅರಣ್ಯ ಇಲಾಖೆಯನ್ನು ಕೋರಿದರೆ, ಕಾಡಿನಲ್ಲಿ ರಸ್ತೆ, ವಿದ್ಯುತ್‌ ನೀಡಿದರೆ ವನ್ಯಜೀವಿಗಳಿಗೆ ತೊಂದರೆಯಾಗುವ ಜತೆಗೆ, ಪ್ರಾಣಿ ದಾಳಿ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುವ ಸಾಧ್ಯತೆಯಿದೆ. ನೀವು ಕಾಡಿನಿಂದ ಹೊರ ಬನ್ನಿ ನಿಮಗೆ ಪುನರ್ವಸತಿ ಕಲ್ಪಿಸುತ್ತೇವೆ ಎಂದು ಮನವೊಲಿಸುತ್ತಿದ್ದಾರೆ. ಜನರು ಮಾತ್ರ ಕಾಡು ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದಾರೆ.

ವರ್ಗಾವಣೆ ಕೇಳುವ ಶಿಕ್ಷಕರು: ಕೆಲ ಗ್ರಾಮಗಳಿಗೆ ವಾಹನ, ಸುಸಜ್ಜಿತ ಕಟ್ಟಡಗಳಿಲ್ಲ. ಜತೆಗೆ ಒಮ್ಮೊಮ್ಮೆ ಕಾಡು ಪ್ರಾಣಿಗಳು ಎದುರಾಗುತ್ತವೆ ಎಂಬ ಕಾರಣದಿಂದ ಶಿಕ್ಷಕರು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಶಿಕ್ಷಕರು ವರ್ಗಾವಣೆ ಕೇಳುತ್ತಿದ್ದರೆ, ಪಡಸನಾಥ ಗ್ರಾಮಕ್ಕೆ ನೇಮಕವಾಗಿದ್ದ ಶಿಕ್ಷಕಿಯೊಬ್ಬರು ರಾಜೀನಾಮೆಯನ್ನೇ ನೀಡಿದ್ದಾರೆ. ಇನ್ನು ಹೊಲಗಳಿಗೆ ಕೆಲಸಕ್ಕೆ ಹೋಗುವ ಮಕ್ಕಳು ಶಾಲೆ ಕಡೆ ಬರುತ್ತಿಲ್ಲ, ಈ ಬಾರಿಯೂ ಸಾಕಷ್ಟು ಮಕ್ಕಳು ಶಾಲೆ ಬಿಟ್ಟಿದ್ದು, ಖುದ್ದು ಅಧಿಕಾರಿಗಳೇ ಪೋಷಕರ ಬಳಿಹೋಗಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಕೇಳಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಶಿಕ್ಷಣಾಧಿಕಾರಿಯೊಬ್ಬರು.

Advertisement

ಮಂಚವೇ ಆ್ಯಂಬುಲೆನ್ಸ್‌
ಇಲ್ಲಿ ಸೂಕ್ತ ರಸ್ತೆ ಹಾಗೂ ವಾಹನ ಸೇವೆಯಿಲ್ಲ. ದೊಡ್ಡಾಣೆ, ಪಡಸನಾಥ, ಇಂಡಿಗನಾಥ ಸೇರಿದಂತೆ ಕೆಲ ಗ್ರಾಮಗಳಲ್ಲಿ ಇಂದಿಗೂ ಕತ್ತೆ ಮೇಲೆಯೇ ಸರಕು-ಸಾಮಾನು ಸಾಗಿಸುತ್ತಾರೆ. ಇನ್ನು ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಹತ್ತಾರು ಕಿ.ಮೀ ದೂರದ ಪ್ರಾಥಮಿಕ ಕೇಂದ್ರಗಳಿಗೆ ಹಣವಂತರು ತೊಟ್ಟಿಲು ಮಾಡಿಕೊಂಡು ಹೋದರೆ, ಬಡವರು ಮಂಚದಲ್ಲಿ ಹೊತ್ತೂಯ್ಯುತ್ತಾರೆ.

ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಶಾಲೆಗಳು ಸರಿಯಾಗಿ ನಡೆಯುವುದಿಲ್ಲ. ಜತೆಗೆ ಇಲ್ಲಿನ ಜನರು ಗುಳೆ ಹೋಗುವುದರಿಂದ ಮಕ್ಕಳು ಶಾಲೆಯನ್ನು ಬಿಡುತ್ತಾರೆ. ವರ್ಷದಿಂದ ವರ್ಷಕ್ಕೆ ಶಾಲೆ ಬಿಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಕುರಿತು ಮೂಲಸೌಕರ್ಯಕ್ಕೆ ಅರಣ್ಯ ಇಲಾಖೆಗೆ ಮನವಿ ಮಾಡಿದರೆ ಅವರು ಕಾಡು ಬಿಟ್ಟು ಬನ್ನಿ ಎನ್ನುತ್ತಿದ್ದಾರೆ.
– ಹೊನ್ನೂರು ಪ್ರಕಾಶ್‌, ರೈತ ಮುಖಂಡ.

– ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next