Advertisement

ಬಿರುಗಾಳಿ ಮಳೆಗೆ ನೂರಾರು ಪಕ್ಷಿಗಳು ಬಲಿ

03:02 PM May 03, 2018 | |

ಶ್ರೀರಂಗಪಟ್ಟಣ: ವಿಶ್ವವಿಖ್ಯಾತ ಪ್ರವಾಸಿ ತಾಣ ಕೆಆರ್‌ಎಸ್‌ ಬೃಂದಾವನದ ಬಳಿ ಮಂಗಳವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ ಮಳೆಯಿಂದ ಹಲವಾರು ಮರಗಳು ಧರಶಾಹಿಯಾಗಿವೆ. ಇದರೊಂದಿಗೆ ಮರದಲ್ಲಿ ಆಶ್ರಯ ಪಡೆದಿದ್ದ ನೂರಾರು ಪಕ್ಷಿಗಳು ಸತ್ತು, ಹಲವಾರು ಪಕ್ಷಿಗಳು ಗಾಯಗೊಂಡಿವೆ. ಆದರೂ, ಯಾರ ರಕ್ಷಣೆಯೂ ಇಲ್ಲದೆ ನೋವಿನಲ್ಲೇ ನರಳಾಡುತ್ತಿವೆ.

Advertisement

ಮಂಗಳವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ ಯಿಂದ ಅನೇಕ ಮರಗಳು ನೆಲಕ್ಕುಳಿದ್ದವು. ಈ ಅವಘಡದಲ್ಲಿ ಮೂವರು ಪ್ರವಾಸಿಗರು ಮೃತಪಟ್ಟು ಹತ್ತಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದರು. ಅಷ್ಟೇ ಅಲ್ಲದೆ, ಮರದ ರೆಂಬೆ-ಕೊಂಬೆಗಳಲ್ಲಿ ಆಶ್ರಯ ಪಡೆ ದಿದ್ದ ನೂರಾರು ವಿವಿಧ ಜಾತಿಯ ಪಕ್ಷಿಗಳು ಮರಗಳ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದವು. ಇನ್ನೂ ಅನೇಕ ಪಕ್ಷಿಗಳು ಗಾಯಗೊಂಡು ಮೂಕವೇದನೆ ಅನುಭವಿಸುತ್ತಿದ್ದವು. ಪಕ್ಷಿಗಳ ನರಳಾಟ ನೋಡುಗರ ಮನ ಕಲಕುವಂತಿತ್ತು. ಆದರೂ, ಪಕ್ಷಿಗಳ ರಕ್ಷಣೆಗೆ ಯಾರೊಬ್ಬರೂ ಮುಂದಾಗದೆ ಇದ್ದದ್ದು ದುರಂತದ ಸಂಗತಿಯಾಗಿತ್ತು.

ಬಿರುಗಾಳಿಯಿಂದ ಕೆಆರ್‌ಎಸ್‌ ಸಮೀಪದ ಸುಮಾರು 40 ಕ್ಕೂ ಹೆಚ್ಚು ಮರಗಳು ನೆಲಕಚ್ಚಿವೆ. ಅದರಲ್ಲಿ ಗೂಡು ಕಟ್ಟಿಕೊಂಡು ವಾಸವಿದ್ದ ಪಕ್ಷಿಗಳು ಈಗ ನಿರಾಶ್ರಿತವಾಗಿವೆ. ತಾಯಿಯನ್ನು ಕಳೆದುಕೊಂಡ ಮರಿ ಪಕ್ಷಿಗಳು ಅನಾಥವಾಗಿ ಚೀರಾಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಒಂದೆಡೆ ಮರದ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ ಪಕ್ಷಿಗಳ ಮೃತ ದೇಹಗಳು ಅನಾಥವಾಗಿ ಬಿದ್ದಿದ್ದರೆ, ಇನ್ನೊಂದೆಡೆ ಹಲವಾರು ಪಕ್ಷಿಗಳು ರೆಕ್ಕೆ, ಕಾಲು ಮುರಿದುಕೊಂಡು ನರಳಾಡುತ್ತಿವೆ. ಇನ್ನೂ ಹಲವು ಪಕ್ಷಿಗಳು ಆಶ್ರಯ ವಿಲ್ಲದೆ, ಆಹಾರವೂ ಇಲ್ಲದೆ ಮೂಕವಾಗಿ ರೋಧಿ ಸುತ್ತಿದ್ದವು. ಕೆಳಗೆ ಬಿದ್ದು ಗಾಯ ಗೊಂಡ ಪಕ್ಷಿಗಳ ಸಂಕಟ ನೋಡಲಾಗದ ಸಾರ್ವಜನಿಕರು ಪಕ್ಷಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದರು.

ಪಕ್ಷಿಗಳತ್ತ ಗಮನಹರಿಸಲಿಲ್ಲ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾದರೇ ವಿನಃ ನೋವಿನಿಂದ ನರಳುತ್ತಿದ್ದ ಪಕ್ಷಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದಕ್ಕೆ ಯಾವುದೇ ವ್ಯವಸ್ಥೆ ಮಾಡಲಿಲ್ಲ. ಇದರಿಂದ ನೋವಿನಿಂದ ನರಳುತ್ತಿದ್ದ ಪಕ್ಷಿಗಳ ವೇದನೆ ಮುಂದುವರಿದಿತ್ತು. ಪಕ್ಷಿಗಳಿಗೆ ಚಿಕಿತ್ಸೆ ಕೊಡಿಸದ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರವಾಸಿಗರ ಸಾವಿಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ಕಾರಣ
ಮೈಸೂರು: ಕೆಆರ್‌ಎಸ್‌ನ ಬೃಂದಾವನ ಗಾರ್ಡನ್‌ನಲ್ಲಿ ಮೇ 1 ರಂದು ಬಾರೀ ಮಳೆಯಿಂದಾಗಿ ಪ್ರವಾಸಿಗರು ಸಾವಿಗೀಡಾಗಲು ಬೃಂದಾವನ ಆಡಳಿತ ಮಂಡಳಿ ವೈಫ‌ಲ್ಯವೇ ಕಾರಣ ಎಂದು ಸಾಲಿಡಾರಿಟಿ ಯೂತ್‌ ಮೂವ್‌ಮೆಂಟ್‌ ರಾಜ್ಯಾಧ್ಯಕ್ಷ ಹಾಗೂ ಪ್ರವಾಸಿಗ ಶಬೀರ್‌ ಅಹ್ಮದ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಮಂಗಳವಾರ ಸಂಜೆ 7.30ಕ್ಕೆ ಸುರಿದ ಬಾರಿ ಮಳೆ ಹಾಗೂ ಗಾಳಿಯಿಂದಾಗಿ ಕೆಆರ್‌ಎಸ್‌ನ ಕಾರಂಜಿ ಬಳಿ ಮರಗಳು ಉರುಳಿ ಮೂವರು ಪ್ರವಾಸಿಗರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ನೆರವಿಗೆ ಬರಲಿಲ್ಲ: ಬಾರೀ ಮಳೆ ಬಿದ್ದ ಸಂದರ್ಭದಲ್ಲಿ ಮರದ ಅಡಿಯಲ್ಲಿ ಸಿಲುಕಿದ್ದ ಕೇರಳ ಮೂಲದ ರಾಜೇಶ್‌(35) ಅವರನ್ನು ರಕ್ಷಿಸಲು ಮನವಿ ಮಾಡಿದರೂ ಅಲ್ಲಿದ್ದ ಬೋಟ್‌ ಚಾಲಕರು ನೆರವಿಗೆ ಧಾವಿಸಲಿಲ್ಲ. ಅಲ್ಲದೆ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್‌ ಲಭ್ಯವಾಗದ ಹಿನ್ನೆಲೆಯಲ್ಲಿ ತಮ್ಮ ವಾಹನದಲ್ಲಿಯೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಒಂದೊಮ್ಮೆ ಅವರಿಗೆ ಸಮಯಕ್ಕೆ ಸರಿಯಾಗಿ ಪ್ರಾಥಮಿಕ ಚಿಕಿತ್ಸೆ ಲಭಿಸಿದ್ದರೆ ಜೀವ ಉಳಿಯುತ್ತಿತ್ತು. ಕೆಆರ್‌ಎಸ್‌ನಲ್ಲಿ ಬೋಟಿಂಗ್‌ ವ್ಯವಸ್ಥೆ ಇದ್ದರೂ, ಲೈಪ್‌ ಜಾಕೆಟ್‌ಗಳಿಲ್ಲ ಎಂದು ಆಸಮಾಧಾನ ವ್ಯಕ್ತಪಡಿಸಿದರು. 

ಹೀಗಾಗಿ ಜಿಲ್ಲಾಡಳಿತ ಮತ್ತು ಕೆಆರ್‌ಎಸ್‌ ಆಡಳಿತ ಮಂಡಳಿ ಈ ಕೂಡಲೇ ಅಲ್ಲಿನ ಸಿಬ್ಬಂದಿಗಳಿಗೆ ತುರ್ತು ವ್ಯವಸ್ಥೆಯಲ್ಲಿ ಪ್ರವಾಸಿಗರಿಗೆ ಸಹಕರಿಸಲು ತರಬೇತಿ ನೀಡಬೇಕು. 2 ಅಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಿ, ಪ್ರವಾಸಿಗರಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ಪ್ರಥಮ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಜತೆಗೆ ಪ್ರವಾಸಿಗರಿಗೆ ಲೈಪ್‌ ಜಾಕೆಟ್‌ಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು.

ಎರಡು ದಿನ ಪ್ರವೇಶ ನಿಷೇಧ ಬಿರುಗಾಳಿ ಮಳೆ ಸೃಷ್ಟಿಸಿರುವ ಅವಾಂತರದಿಂದ ಎಚ್ಚೆತ್ತ ಕೃಷ್ಣರಾಜಸಾಗರ ಜಲಾಶಯದ ಅಧಿಕಾರಿಗಳು 2 ದಿನಗಳ ಕಾಲ ಕೃಷ್ಣರಾಜಸಾಗರ ಬೃಂದಾವನಕ್ಕೆ ನಿಷೇಧ ಹೇರಿದ್ದಾರೆ. ಈ ಅವಘಡದಿಂದ ಎಚ್ಚೆತ್ತ ಅಧಿಕಾರಿಗಳು ಮುಂದೆ ಯಾವುದೇ ತೊಂದರೆಯಾಗದಂತೆ ಬುಧವಾರ ಹಾಗೂ ಗುರುವಾರದ ವರೆಗೆ ಎರಡು ದಿನ ಪ್ರವಾಸಿ ಗರಿಗೆ ಕೆಆರ್‌ಎಸ್‌ ಬೃಂದಾವನ ಪ್ರವೇಶ ನಿಷೇಧಿಸಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿಸಿದ್ದಾರೆ.  ಗುರುವಾರದ ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು
ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next