Advertisement

ನೂರಾರು ಎಕ್ರೆ ಕೃಷಿ ಭೂಮಿಯ ಜಲಮೂಲಕ್ಕೆ ಮರು ಜೀವ

11:19 PM Jul 17, 2019 | sudhir |

ಬೆಳ್ಮಣ್‌: ಇನ್ನಾ ಗ್ರಾಮದ ಕಾಚೂರಿನ ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸ ಬಹುದಾದ ಕಾಂಜರಕಟ್ಟೆಯ ಪುರಾತನ ಕೆರೆಗೆ ಇನ್ನಾ ಗ್ರಾ.ಪಂ. ಕಾಯಕಲ್ಪ ಒದಗಿಸುವ ಮೂಲಕ ಕೃಷಿಕರ ಶ್ಲಾಘನೆಗೆ ಪಾತ್ರವಾಗಿದೆ.

Advertisement

ಈ ಕೆರೆಯ ಕಟ್ಟೆಯೊಡೆದ ಪರಿಣಾಮ ನೀರು ಪೋಲಾಗುತ್ತಿದ್ದುದನ್ನು ಮನಗಂಡ ಇಲ್ಲಿನ ಪಂಚಾಯತ್‌ ಆಡಳಿತ ಸಣ್ಣ ನೀರಾವರಿ ಇಲಾಖೆಯ ಸಹಯೋಗದಿಂದ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿ ನೀರು ವ್ಯವಸ್ಥಿತವಾಗಿ ಹರಿದು ಹೋಗುವಂತೆ ಮಾಡಿದೆ.

ನೂರಾರು ಎಕ್ರೆ ಜಮೀನಿಗೆ‌ ಜಲಮೂಲ

ಈ ಕೆರೆಯ ನೀರು ಇನ್ನಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾಚೂರು, ಗಾಂದಟ್ಟೆ, ಮಠದ ಕೆರೆ ಭಾಗದ ನೂರಾರು ಎಕ್ರೆ ಕೃಷಿಭೂಮಿಗಳಿಗೆ ಆಧಾರವಾಗಿದೆ. ಇದೀಗ ಇನ್ನಾ ಗ್ರಾ.ಪಂ. ಆಡಳಿತ ಕೆರೆಯ ಹೂಳೆತ್ತುವುದರ ಜತೆಗೆ ಕಟ್ಟೆಯನ್ನೂ ಸುಭದ್ರವಾಗಿಸಿ ಜಲಕ್ಷಾಮದ ಆತಂಕ ದೂರ ಮಾಡಿದೆ.

ಪರಿಣಾಮ ಈ ಕೆರೆ ವರ್ಷದ ಕೊನೆಯವರೆಗೂ ತುಂಬಿದ್ದು ಅಕ್ಕಪಕ್ಕದ ಬಾವಿಗಳಲ್ಲಿಯೂ ನೀರಿನ ಒರತೆ ಕಡಿಮೆಯಾಗದಂತೆ ಮಾಡಿದೆ.

Advertisement

ಈ ಹಿಂದೆ ಕೆರೆಯ ಕಟ್ಟೆ ಒಡೆದ ಪರಿಣಾಮ ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಇದೀಗ ಸಣ್ಣ ನೀರಾವರಿ ಇಲಾಖೆಯ ಸಹಾಯದಿಂದ‌ ಕಟ್ಟೆಯನ್ನು ಭದ್ರವಾಗಿ ಕಟ್ಟಲಾಗಿದ್ದು ಮಂಗಳವಾರ ಇಲ್ಲಿನ ನಾಗರಿಕರು ಈ ಕಟ್ಟೆಯನ್ನು ಇನ್ನಷ್ಟು ಭದ್ರವಾಗಿಸಲು ವಿವಿಧ ಗಿಡ ಮರಗಳನ್ನು ಕಟ್ಟೆಯ ಅಕ್ಕ -ಪಕ್ಕ ನೆಟ್ಟಿದ್ದಾರೆ. ಇನ್ನಾ ಗ್ರಾ.ಪಂ. ಉಪಾಧ್ಯಕ್ಷ ಕುಶಾ ಆರ್‌. ಮೂಲ್ಯ, ಸದಸ್ಯ ಅಲೆನ್‌ ಡಿ’ಸೋಜಾ, ಗ್ರಾಮಸ್ಥರಾದ ದೀಪಕ್‌ ಕಾಮತ್‌, ಯೋಗೀಶ್‌ ಆಚಾರ್ಯ, ಸುರೇಶ್‌ ಮೂಲ್ಯ, ಪ್ರದೀಪ್‌ ಅಂಚನ್‌, ರೂಪೇಶ್‌, ಭದ್ರ, ಕೃಷ್ಣ ಪೂಜಾರಿ, ವಾಸು ಸೇರ್ವೆಗಾರ, ಭಾಸ್ಕರ ಗೌಡ,ಜಾನ್‌ ಮೆಂಡೋನ್ಸಾ ಮತ್ತಿತರರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಬಹು ನಿರೀಕ್ಷಿತ ಕೆಲಸ

ಇನ್ನಾ ಗ್ರಾ.ಪಂ.ನ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಕಾಂಜರಕಟ್ಟೆ ಕೆರೆಯ ಸಂರಕ್ಷಣೆ ಕೆಲಸ ಸಣ್ಣ ನೀರಾವರಿ ಇಲಾಖೆಯ ಸಹಕಾರದಿಂದ ನಡೆದಿದೆ. ಇದರ ಜತೆಗೆ ಇನ್ನೂ ಹಲವು ಕೆರೆಗಳಿಗೆ ಕಾಯಕಲ್ಪ ಒದಗಿಸುವ ಆಶಯ ಹೊಂದಲಾಗಿದೆ.
– ಬಬಿತಾ ದಿವಾಕರ್‌, ಇನ್ನಾ ಗ್ರಾ.ಪಂ. ಅಧ್ಯಕ್ಷೆ
Advertisement

Udayavani is now on Telegram. Click here to join our channel and stay updated with the latest news.

Next