Advertisement

ಗೋಲಿಬಾರ್‌ಗೆ ಮೂವರು ಹುತಾತ್ಮ; ಇಂದಿಗೆ ನೂರು ವರ್ಷ

03:57 PM Jul 01, 2021 | Team Udayavani |

ಧಾರವಾಡ: ಬ್ರಿಟಿಷರ್‌ ವಿರುದ್ಧ ಅಸಹಕಾರ ಆಂದೋಲನ ನಡೆದ ಸಂದರ್ಭದಲ್ಲಿ ನಗರದಲ್ಲಿ ನಡೆದ ಗೋಲಿಬಾರ್‌ ನಲ್ಲಿ ಮೂವರು ಖೀಲಾಫತ್‌ ಕಾರ್ಯಕರ್ತರು ಮೃತಪಟ್ಟು, ಜು.1ಕ್ಕೆ ನೂರು ವರ್ಷ ಪೂರೈಸಲಿದೆ.

Advertisement

1921 ಜು.1ರಂದು ಧಾರವಾಡದಲ್ಲಿ ಜಕಣಿ ಬಾವಿ ಹತ್ತಿರವಿದ್ದ ಸಾರಾಯಿ ಅಂಗಡಿಗಳ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ, ಬ್ರಿಟಿಷರ ಗೋಲಿಬಾರಿಗೆ ಮಲ್ಲಿಕಸಾಬ ಬಿನ್‌ ಮರ್ದಾನ ಸಾಬ, ಗೌಸುಸಾಬ ಬಿನ್‌ ಖಾದರ ಸಾಬ, ಅಬ್ದುಲ್‌ ಗಫಾರ ಚೌಕಥಾಯಿ ಎಂಬ ಮೂವರು ಖೀಲಾಫತ್‌ ಕಾರ್ಯಕರ್ತರು ವೀರ ಮರಣವನ್ನಪ್ಪಿ, 100 ವರ್ಷಗಳಾಗಿವೆ. ಇವರ ಸ್ಮರಣೆ ನಿಮಿತ್ತ ಕೇಂದ್ರ ಸರ್ಕಾರ 25ನೆಯ ಸ್ವಾತಂತ್ರ್ಯೊತ್ಸವದ ನೆನಪಿಗಾಗಿ ಹುತಾತ್ಮರ ಸ್ಮಾರಕ ನಿರ್ಮಿಸಿದೆ. ಈ ಸ್ಮಾರಕದ ಎದುರು ಗುರುವಾರ ಹುತಾತ್ಮರ ದಿನಾಚರಣೆ ನಡೆಯಲಿದೆ.

ಹೋರಾಟದ ಸಂಕ್ಷಿಪ್ತ ಇತಿಹಾಸ: ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ಧಾರವಾಡದ ಜನತೆ ಮುಂಚೂಣಿಯಲ್ಲಿದ್ದರು. ಗಾಂ ಧೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಸಹಕಾರ ಆಂದೋಲನ ಧಾರವಾಡದಲ್ಲಿಯೂ ಸಂಗ್ರಾಮದ ಕಿಚ್ಚು ಹೊತ್ತಿಸಿತ್ತು. ಸಭೆ-ಮೆರವಣಿಗೆಗಳಲ್ಲದೆ ಸಿಂದಿ ಸಾರಾಯಿ ಅಂಗಡಿಗಳ ಮುಂದೆ ಪ್ರತಿಭಟನೆ ಸಾಗಿತ್ತು. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಆಗ ಇಬ್ಬರು ಖೀಲಾಫತ್‌ ಸ್ವಯಂ ಸೇವಕರಿಗೆ ಆರು ತಿಂಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಅದರ ಪ್ರತಿಭಟನಾರ್ಥ 1921 ಜು.1ರಂದು ಪ್ರತಿಭಟನಾ ಸಭೆಯೂ ನಡೆಯಿತು. ಆಗ ಸಾರಾಯಿ ಅಂಗಡಿ ಸುಡಲು ಯತ್ನಿಸಿದರು. ದೊಂಬಿ ಮಾಡಿದರು ಎಂದೆಲ್ಲ ಕಾರಣ ಹೇಳಿದ ಬ್ರಿಟಿಷರು, ಗೋಲಿಬಾರ್‌ ಮಾಡಿ ಮೂವರು ಖೀಲಾಫತ್‌ ಕಾರ್ಯಕರ್ತರನ್ನು ಕೊಂದರು.

ಈ ಘಟನೆಯಲ್ಲಿ 39 ಜನರಿಗೆ ಗಾಯವಾಯಿತು. ಶಿವಲಿಂಗಯ್ಯ ಅಯ್ಯಪ್ಪಯ್ಯ ಲಿಂಬೆಣ್ಣದೇವರಮಠ ಅವರಿಗೆ ಹೊಟ್ಟೆಗೆ ಗುಂಡು ತಗುಲಿ ಧಾರವಾಡದ ಸಿವಿಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಈಗಲೂ ಸ್ಮರಿಸುತ್ತಾರೆ ಅವರ ಮಗ ಸಂಗಮೇಶ್ವರಯ್ಯ ಲಿಂಬೆಣ್ಣದೇವರಮಠ.

Advertisement

Udayavani is now on Telegram. Click here to join our channel and stay updated with the latest news.

Next