ಪಡುಬಿದ್ರಿ: ಇಲ್ಲಿನ ಕೆಳ ಪೇಟೆಯ ಪ್ರಮುಖ ಭಾಗದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರು ನೂರಾರು ವರ್ಷ ಹಳೆಯದಾದ ಅಶ್ವತ್ಥ ಮರವೊಂದು ಅಜಾನುಬಾಹುವಾಗಿ ಮೆರೆದಿದೆ.
ಭಾವನಾತ್ಮಕ ಸಂಬಂಧಗಳೇನೇ ಇರಲಿ. ಇದನ್ನು ತೆಗೆಸಿ ಅಶ್ವತ್ಥ ಗಿಡವೊಂದನ್ನು ಮತ್ತೆ ನೆಟ್ಟು ಬೆಳೆಸಿ ಎಂದು ಇಲ್ಲಿನ ಮಂದಿ ಗೋಗೊರೆಯುತ್ತಿದ್ದಾರೆ.
ಕೆಳಗಿನ ಪೇಟೆಯಲ್ಲೇ ಮೂಲ್ಕಿಯಿಂದ ಬರುವ 33ಕೆವಿ ವಿದ್ಯುತ್ ಲೈನ್ ಪಡುಬಿದ್ರಿಗೆ ಸಾಗಿ ಬಂದಿದೆ. ಗಾಳಿ, ಮಳೆಗೆ ಈ ಅಶ್ವತ್ಥ ಮರವು ಧರಾಶಾಯಿಯಾದರೆ ಹತ್ತಿರದ ಮನೆ, ಹೊಟೇಲು, ವ್ಯವಹಾರ ಮಳಿಗೆಗಳಿಗೆ ಬರುವ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ವಾಹನ ಸಂಚಾರವೂ ಅಸ್ತವ್ಯಸ್ಥವಾಗಲಿದೆ.
ಇದನ್ನೂ ಓದಿ:ಮಹಾಲಿಂಗಪುರ ಪುರಸಭೆ 3ನೇ ವಾರ್ಡಿನ ಉಪಚುನಾವಣೆ: ಶಾಂತಿಯುತ ಮತದಾನ
ತಮ್ಮ ಭಾವನೆಗಳಿಗೆ ಅಗಾಧ ಬೆಲೆಕೊಡುತ್ತಿರುವ ಸಾರ್ವಜನಿಕರು ಆ ಅಶ್ವತ್ಥ ಮರವನ್ನು ತೆರವುಗೊಳಿಸದಿದ್ದರೂ ಇದನ್ನು ಅಲ್ಲಿಂದಲ್ಲಿಗೆ ಮತ್ತಷ್ಟು ಸಣ್ಣದಾಗಿಸಲು ಹೇಳುತ್ತಿದ್ದಾರೆ. ಇದರಲ್ಲಿ ಅಶ್ವತ್ಥ ಮರದ ಕುರಿತಾದ ಭಾವನಾತ್ಮಕ ಸಂಬಂಧವೂ ಅಡಗಿದೆ.
ಈ ಕುರಿತಾಗಿ ಗ್ರಾ. ಪಂ. ಗೆ ಮನವಿಯು ಬಂದಲ್ಲಿ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ಮುಂದೆ ಮೆಸ್ಕಾಂ, ಅರಣ್ಯ ಇಲಾಖೆಗಳ ಅನುವತಿಯನ್ನು ಪಡೆದು ಮರವನ್ನು ಪೂರ್ಣ ತೆರವುಗೊಳಿಸುವ ಬದಲು ಕಡಿದು ಸಣ್ಣದಾಗಿಸಲು ಆಲೋಚಿಸಲಾಗುವುದೆಂದು ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ತಿಳಿಸಿದ್ದಾರೆ.