Advertisement

ಕುಡಿಯುವ ನೀರಿಗಾಗಿ ಹುಣಸೂರು ಹೈರಾಣ

09:24 PM Apr 26, 2019 | Lakshmi GovindaRaju |

ಹುಣಸೂರು: ನಗರಕ್ಕೆ ಕಾವೇರಿ ನೀರು ಪೂರೈಕೆಯಾಗುತ್ತಿದ್ದರೂ ಹಲವಾರು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ನೀಗಿಲ್ಲ. ಕೊಳವೆಬಾವಿಗಳಲ್ಲಿ ಅಂತರ್ಜಲ ಪಾತಾಳ ಸೇರಿದ್ದು, ಒಂದು ಬಿಂದಿಗೆ ನೀರಿಗೂ ಜನರು ಅಲೆದಾಡಬೇಕಿದೆ.

Advertisement

ಪ್ರಸ್ತುತ ಕಾವೇರಿ ನೀರಿನ ಜೊತೆಗೆ 92 ಬೋರ್‌ವೆಲ್‌ಗ‌ಳ ಮೂಲಕ ನೀರು ಪೂರೈಸಲಾಗುತ್ತಿದ್ದರೂ ಈ ಬಾರಿ ಅಂತರ್ಜಲ ಕುಸಿತದಿಂದಾಗಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಶುದ್ಧ ಕುಡಿಯುವ ನೀರಿಗಾಗಿ ನಾಗರಿಕರು ಹಪಹಪಿಸುವಂತಾಗಿದ್ದರೆ, ಮತ್ತೂಂದೆಡೆ ಜನಪ್ರತಿನಿಧಿಗಳು ಇನ್ನು ಚುನಾವಣಾ ಗುಂಗಿನಲ್ಲಿ ಕಾಲ ಕಳೆಯುತ್ತಿದ್ದಾರೆ.

55 ಸಾವಿರ ಜನಸಂಖ್ಯೆ: ಸುಮಾರು 55 ಸಾವಿರ ಜನಸಂಖ್ಯೆ ಹೊಂದಿರುವ ಹುಣಸೂರು ನಗರ 27 ಹಾಗೂ ವರ್ಷದ ಹಿಂದೆ 5 ಹೆಚ್ಚುವರಿ ವಾರ್ಡ್‌ ಸೇರಿದಂತೆ 31 ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ.

ಎಲ್ಲೆಲ್ಲಿ ನೀರಿಗೆ ತೊಂದರೆ: ಕಾವೇರಿ ನೀರು ಕಾಣದ ನರಸಂಹಸ್ವಾಮಿತಿಟ್ಟು, ಶಬ್ಬೀರ್‌ನಗರ, ಮಾರುತಿ ಬಡಾವಣೆ, ನ್ಯೂ ಮಾರುತಿ ಬಡಾವಣೆ, ಒಂಟೆಪಾಳ್ಯ ಬೋರೆ, ವಿಜಯನಗರ ಮಂಜುನಾಥ ಬಡಾವಣೆ ಹಾಗೂ ಸಾಕೇತ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ.

ಟ್ಯಾಂಕರ್‌ ನೀರೇ ಗತಿ: ಕೆಲ ವಾರ್ಡ್‌ಗಳಲ್ಲಿ ಕಾವೇರಿ ನೀರು ಎರಡು-ಮೂರು ದಿನಕ್ಕೊಮ್ಮೆ ಪೂರೈಸುತ್ತಿದ್ದರೆ, ಉಳಿದೆಡೆ ಬೋರ್‌ವೆಲ್‌ ಮೂಲಕ ನೀರು ಪೂರೈಕೆಗೂ ಆಗದಂತ ಸ್ಥಿತಿ ನಿರ್ಮಾಣವಾಗಿದ್ದು, ಕಾವೇರಿ ಹಾಗೂ ಬೋರ್‌ವೆಲ್‌ ನೀರು ಪೂರೈಕೆಯಾಗದ ಕಡೆಗಳಲ್ಲಿ ನಗರಸಭೆ ವತಿಯಿಂದ ಟ್ಯಾಂಕರ್‌ ಮೂಲಕ ಎರಡು-ಮೂರು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ. ಪ್ರತಿ ಮನೆಗಳಿಗೆ 20-25 ಬಿಂದಿಗೆಯಷ್ಟು ಮಾತ್ರ ನೀರು ಪೂರೈಸಲಾಗುತ್ತಿದೆ.

Advertisement

ಕಲುಷಿತಗೊಂಡ ಲಕ್ಷ್ಮಣತೀರ್ಥ: ನಗರದ ಮಧ್ಯಭಾಗದಲ್ಲಿರುವ ಲಕ್ಷ್ಮಣತೀರ್ಥ ನದಿ ಪಂಪ್‌ಹೌಸ್‌ ಬಳಿ ನೀರು ಸಂಗ್ರಹಿಸಲು ಅಡ್ಡಗಟ್ಟೆ ನಿರ್ಮಿಸಿದ್ದರೂ ಕಲುಷಿತಗೊಂಡಿದೆ. ಆ ನೀರು ಕೂಡ ಬಳಸದಂತಾಗಿದೆ. ಹೀಗಾಗಿ ನಾಗರಿಕರು ಕಾವೇರಿ ನದಿ ಹಾಗೂ ಬೋರ್‌ವೆಲ್‌ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ಶುದ್ಧ ನೀರು ಘಟಕಕ್ಕೂ ವಿದ್ಯುತ್‌ ಸಂಪರ್ಕವಿಲ್ಲ: ನಗರದ ಏಳು ಕಡೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ್ದರೂ ಕೋಟೆ ಸರ್ಕಲ್‌, ಚಿಕ್ಕ ಹುಣಸೂರು, ಮಾರುತಿ ಪೆಟ್ರೋಲ್‌ಬಂಕ್‌ ಬಳಿ, ಬಜಾರ್‌ರಸ್ತೆಯ ಉರ್ದುಶಾಲೆ ಬಳಿ ಮಾತ್ರ ನೀರು ಸಿಗುತ್ತಿದ್ದು, ಉಳಿದೆಡೆ ವಿದ್ಯುತ್‌ ಸಂಪರ್ಕ ನೀಡದಿರುವುದರಿಂದ ಘಟಕಗಳು ಕಾರ್ಯಾರಂಭವೇ ಆಗಿಲ್ಲ, ಹೀಗಾಗಿ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿದೆ.

ಮೇಲೇಳದ ಓವರ್‌ ಹೆಡ್‌ಟ್ಯಾಂಕ್‌: ನಗರದ ಎಲ್ಲಾ ವಾರ್ಡ್‌ಗಳಿಗೆ ಕಾವೇರಿ ನೀರು ಪೂರೈಸುವ ಸಲುವಾಗಿ 5 ವರ್ಷದ ಹಿಂದೆಯೇ ನಗರೋತ್ಥಾನ ಯೋಜನೆಯಡಿ ನರಸಿಂಹಸ್ವಾಮಿತಿಟ್ಟು, ಅಯಪ್ಪಸ್ವಾಮಿಬೆಟ್ಟ, ಶಬ್ಬಿರ್‌ನಗರಗಳಲ್ಲಿ ತಲಾ ಐದು ಲಕ್ಷ ಲೀಟರ್‌ನ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲು ಯೋಜನೆ ರೂಪಿಸಿದ್ದರೂ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ಟೆಂಡರ್‌ ಪ್ರಕ್ರಿಯೆಯಲ್ಲೇ ಸಾಗುತ್ತಿದ್ದು, ಕನಿಷ್ಠ ಶುದ್ಧ ಕುಡಿಯುವ ನೀರು ಸಿಗದಂತಾಗಿದೆ. ನಾಗರಿಕರು ಜಡ್ಡುಗಟ್ಟಿದ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಕನಿಷ್ಠ ಜ್ಞಾನವಿಲ್ಲ: ನಗರಕ್ಕೆ 13 ವರ್ಷದ ಹಿಂದೆಯೇ ಕಾವೇರಿ ನೀರು ಹರಿದು ಬಂದರೂ, ನಗರಕ್ಕೆ ಬರುವ ಮಧ್ಯೆ ಈ ಹಿಂದೆ 9 ಹಳ್ಳಿಗಳಿಗೆ ಪೂರೈಕೆಯಾಗುತ್ತಿತ್ತು. ಈಗ ಮತ್ತೆ ಹೆಚ್ಚಿನ ಹಳ್ಳಿಗಳಿಗೆ ನೀಡುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಹಲವು ಬಡಾವಣೆಗೆ ಇದುವರೆಗೂ ಕಾವೇರಿ ನೀರು ಹರಿಸದಿರುವುದು ನಾಚಿಕೆಗೇಡು, ಪ್ರಭಾವಿಗಳಿಗೆ ರೈಸಿಮಗ್‌ ಮೇನ್‌ನಿಂದಲೇ ಸಂಪರ್ಕ ಕಲ್ಪಿಸುವ ನಗರಸಭೆ ಹೊಸ ಬಡಾವಣೆ ನಿರ್ಮಿಸುವಾಗಲೇ ನೀರು, ರಸ್ತೆ, ವಿದ್ಯುತ್‌ ನೀಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲಿನ ಜನಪ್ರತಿನಿಧಿಗಳಿಗಿಲ್ಲ ಎಂದು ವಕೀಲ ಸಿ.ಎಸ್‌.ರಮೇಶ್‌, ನಿವೃತ್ತ ಅಧಿಕಾರಿ ಟಿ.ಎಂ.ಸುಶೀಲಬಾಯಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೈಪಂಪ್‌ನಲ್ಲಿ ಕಾಲುಗಂಟೆ ಒತ್ತಿದ್ದರೂ ಬಿಂದಿಗೆ ತುಂಬಲ್ಲ: ಏಪ್ರಿಲ್‌ ಮುಗಿಯುತ್ತಾ ಬಂದರೂ ಸಕಾಲದಲ್ಲಿ ಮಳೆ ಬಾರದೆ ಹಾಲಿ ನಗರ ವ್ಯಾಪ್ತಿಯ ನಗರಸಭೆಯ 92 ಬೋರ್‌ವೆಲ್‌ಗ‌ಳ ಪೈಕಿ ಕೆಲವನ್ನು ಹೊರತುಪಡಿಸಿದರೆ, ಉಳಿದ ಬೋರ್‌ವೆಲ್‌ಗ‌ಳಲ್ಲಿ ಅಂತರ್ಜಲ ಮಟ್ಟ ಕುಸಿದು ಹೋಗಿದ್ದು, ಸ್ಪಲ್ಪ ಹೊತ್ತು ಮಾತ್ರ ನೀರು ಸಿಗುತ್ತಿದ್ದು, ಇದು ಯಾವುದಕ್ಕೂ ಸಾಲದಂತಾಗಿದೆ. ನಗರಸಭೆಯು ನೀರು ಪೂರೈಕೆಗಾಗಿ ಕಾವೇರಿ ನೀರು ಹಾಗೂ 92 ಬೋರ್‌ವೆಲ್‌ ಪಂಪ್‌ಸೆಟ್‌ ಹಾಗೂ 60 ಕೈ ಪಂಪ್‌ಗ್ಳನ್ನು ಅಳವಡಿಸಿದ್ದರೂ ಕಾಲುಗಂಟೆ ಒತ್ತಿದರೂ ಬಿಂದಿಗೆ ನೀರು ಸಿಗುವುದೂ ಕಷ್ಟವಾಗಿದೆ.

ಹುಣಸೂರು ನಗರದಲ್ಲಿ ಕಾವೇರಿ ನೀರು ಪೂರೈಕೆ ವ್ಯವಸ್ಥೆಯ ವಾರ್ಡ್‌ಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಪಟ್ಟಣದಲ್ಲಿ ಹೆಚ್ಚು ತೊಂದರೆ ಇರುವ ಈ ವಾರ್ಡ್‌ಗಳಲ್ಲಿ ನಗರಸಭೆ ವತಿಯಿಂದ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಆಗುತ್ತಿದೆ.
-ಅನುಪಮಾ, ನಗರಸಭೆ ಅಭಿಯಂತರೆ

ನಗರದಲ್ಲಿರುವ ಹೆಚ್ಚಿನ ಬೋರ್‌ವೆಲ್‌ಗ‌ಳು ಬರಿದಾಗಿವೆ. ಕಾವೇರಿ ನೀರಿನ ವ್ಯವಸ್ಥೆ ಇಲ್ಲದ ಕಡೆ ನೀರಿನ ಸಮಸ್ಯೆ ಇರುವ ಬಡಾವಣೆಗಳಿಗೆ 2-3 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. ಖಾಸಗಿ ಬೋರ್‌ ವೆಲ್‌ಗ‌ಳಲ್ಲಿ ನೀರು ಪಡೆಯಲು ಚಿಂತಿಸಲಾಗಿದೆ. ಈ ಸಮಯದಲ್ಲಿ ನಾಗರಿಕರು ನೀರನ್ನು ಮಿತವಾಗಿ ಬಳಸಿ ನಗರಸಭೆಯೊಂದಿಗೆ ಸಹಕರಿಸಬೇಕು.
-ವಾಣಿ ಎನ್‌.ಆಳ್ವ, ನಗರಸಭೆ ಆಯುಕ್ತೆ

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next