ಹುಣಸೂರು: ಗಿರಿಜನ ಆಶ್ರಮ ಶಾಲೆಗಳ ಹೊರ ಸಂಪನ್ಮೂಲ ಶಿಕ್ಷಕರು ಸೇವಾ ಭದ್ರತೆಗಾಗಿ ಬೆಂಗಳೂರಿಗೆ ತೆರಳಿರುವ ಪರಿಣಾಮ ಪರೀಕ್ಷೆ ಹೊತ್ತಿನಲ್ಲಿ ಶಿಕ್ಷಕರಿಲ್ಲದ ಕಾರಣ ಆದಿವಾಸಿ ಮುಖಂಡರು ಹಾಗೂ ಪೋಷಕರಿಂದ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಹನಗೋಡು ಹೋಬಳಿಯ ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ಗಿರಿಜನ ಆಶ್ರಮ ಶಾಲೆಯಲ್ಲಿ ಪ್ರತಿಭಟನೆ ನಡೆದಿದ್ದು, ಹುಣಸೂರು ತಾಲೂಕಿನ ೬ ಆಶ್ರಮ ಶಾಲೆಗಳ ೫೨ ಮಂದಿ ಹೊರ ಸಂಪನ್ಮೂಲ ಶಿಕ್ಷಕರುಗಳು ಸೇವಾ ಭದ್ರತೆ ಮತ್ತು ವೇತನ ಹೆಚ್ಚಳಕ್ಕಾಗಿ ಒತ್ತಾಯಿಸಿ ಕಳೆದ ಮೂರು ದಿನಗಳ ಹಿಂದೆ ರಾಜ್ಯಾದ್ಯಂತ ಕರೆ ನೀಡಿರುವ ಪ್ರತಿಭಟನೆಗಾಗಿ ಬೆಂಗಳೂರಿನಲ್ಲಿರುವ ಪರಿಶಿಷ್ಟ ಕಲ್ಯಾಣ ವರ್ಗಗಳ ಇಲಾಖೆಯ ಸಚಿವರನ್ನು ಭೇಟಿ ಮಾಡಲು ತೆರಳಿದ್ದು, ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಮಕ್ಕಳಿಗೆ ಪಾಠ ಪ್ರವಚನಗಳು ನಡೆಯುತ್ತಿಲ್ಲವೆಂದು ಆರೋಪಿಸಿ ಮಂಗಳವಾರ ಮಧ್ಯಾಹ್ನ ಶೆಟ್ಟಹಳ್ಳಿ ಗಿರಿಜನ ಪುನರ್ವಸತಿ ಕೇಂದ್ರದ ಮುಖಂಡರಾದ ಜೆ.ಟಿ ರಾಜಪ್ಪ, ಚಂದ್ರು, ಶಿವಣ್ಣ ಮುತ್ತಯ್ಯ ಹಾಗೂ ಇನ್ನಿತರೆ ಆದಿವಾಸಿಗಳು ಬುಡಕಟ್ಟು ಆಶ್ರಮ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಇಲ್ಲದಿರುವ ಕ್ರಮವನ್ನು ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ. ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿದ್ದ ಮುಖ್ಯ ಶಿಕ್ಷಕ ಶಿವಕುಮಾರ್ ಅತಿಥಿ ಶಿಕ್ಷಕರು ಸೇವಾ ಭದ್ರತೆಗಾಗಿ ಬೆಂಗಳೂರಿಗೆ ತೆರಳಿದ್ದು ಪಾಠ ಪ್ರವಚನಗಳಲ್ಲಿ ವ್ಯತ್ಯಾಸವಾಗಿದೆ. ಈ ವಿಚಾರವನ್ನು ಕೂಡಲೇ ಪರಿಶಿಷ್ಟ ಕಲ್ಯಾಣ ವರ್ಗಗಳ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬುಧವಾರದಿಂದಲೇ ಬದಲಿ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆಂದು ಮುಖಂಡರಿಗೆ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆದರು.
ಪರ್ಯಾಯ ವ್ಯವಸ್ಥೆ:
ತಾಲೂಕು 52 ಮಂದಿ ಹೊರ ಸಂಪನ್ಮೂಲ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಸೇವಾ ಭದ್ರತೆ ಮತ್ತಿತರ ಬೇಡಿಕೆ ಈಡೇರಿಕೆಗಾಗಿ ರಾಜ್ಯದ 119 ಗಿರಿಜನ ಆಶ್ರಮ ಶಾಲೆಗಳ ಶಿಕ್ಷಕರು, ಜಿಲ್ಲೆಯ 21 ಶಾಲೆಗಳ ಶಿಕ್ಷಕರು ಬೆಂಗಳೂರಿಗೆ ತೆರಳಿದ್ದು, ರ‍್ಯಾಯವಾಗಿ ಬಿ.ಎಡ್. ಮಾಡಿರುವ ವಾರ್ಡನ್‌ಗಳು ಹಾಗೂ ಮಾಸ್ಟರ್ ಡಿಗ್ರಿ ವ್ಯಾಸಂಗ ಮಾಡುತ್ತಿರುವವರನ್ನು ತಾತ್ಕಾಲಿಕವಾಗಿ ನೇಮಿಸಿದ್ದು, ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಹುಣಸೂರು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ್ ತಿಳಿಸಿದ್ದಾರೆ.
Related Articles
ಇದನ್ನೂ ಓದಿ: ಬಾಂಗ್ಲಾದೇಶದ ಬಹುಮಹಡಿ ಕಟ್ಟಡದಲ್ಲಿ ಭೀಕರ ಸ್ಫೋಟ; 8 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ