ಹುಣಸೂರು : ಕುಡಿದ ಅಮಲಿನಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ತಾಲೂಕಿನ ಸಿಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ಸಿಂಡೇನಹಳ್ಳಿ ಗ್ರಾಮದ ಗಿರಿಗೌಡ (55) ಎಂಬುವರೇ ಸಾವನ್ನಪ್ಪಿದವರು. ಇವರಿಗೆ ಇಬ್ಬರು ಪತ್ನಿಯರು, ಮೂವರು ಗಂಡು ಹಾಗೂ ಒಬ್ಬ ಮಗಳಿದ್ದಾರೆ.
ಇದೇ ಗ್ರಾಮದ ದೊಡ್ಡಪ್ಪೇಗೌಡರ ಮಗ ರವಿ ಎಂಬಾತನೇ ಹಲ್ಲೆ ನಡೆಸಿ ಪರಾರಿಯಾದ ಆರೋಪಿ.
ಘಟನೆ ವಿವರ; ಜ.19 ರ ಭಾನುವಾರ ರಾತ್ರಿ 7 ರ ಸಮಯದಲ್ಲಿ ಮೃತ ಗಿರಿಗೌಡರನ್ನು ರವಿಯು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಹನಗೋಡಿನಲ್ಲಿ ಮದ್ಯಸೇವಿಸಿ ವಾಪಾಸ್ ಬರುವ ವೇಳೆ ಮಾರ್ಗಮದ್ಯದಲ್ಲಿ ಕೊಳವಿಗೆ ಲಕ್ಷ್ಮಣತೀರ್ಥ ನದಿಯ ಸೇತುವೆ ಬಳಿಗೆ ಬಂದ್ದಿದ್ದಾರೆ. ಈ ವೇಳೆ ರವಿಯು ಗಿರಿಗೌಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಸೇತುವೆ ಮೇಲಿನಿಂದ ತಳ್ಳಿ ನಂತರ ರವಿ ಒಬ್ಬನೇ ಮನೆಗೆ ವಾಪಾಸ್ ಬಂದಿದ್ದಾನೆ.
ರಾತ್ರಿ 10: 30 ಗಂಟೆಯಾದರೂ ಗಿರಿಗೌಡರು ಮನೆಗೆ ಬರದ ಕಾರಣ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಕೊನೆಗೆ ನದಿಯಂಚಿನಲ್ಲಿ ಮಾರಣಾಂತಿಕ ಹಲ್ಲೆಯಿಂದ ತೀವ್ರ ಗಾಯಗೊಂಡು ಅಸ್ವಸ್ಥನಾಗಿ ನರಳಾಡುತ್ತಾ ಬಿದ್ದಿರುವುದು ಗೊತ್ತಾಗಿ ಮನೆಗೆ ಕರೆತಂದು ಆರೈಕೆ ಮಾಡಿದ್ದಾರೆ. ಆದರೆ ತೀವ್ರ ಅಸ್ಪಸ್ಥಗೊಂಡಿದ್ದ ಗಿರಿಗೌಡ ಸಾವನ್ನಪ್ಪಿದ್ದಾರೆ.
ತನ್ನ ತಂದೆಯನ್ನು ಗ್ರಾಮದ ದೊಡ್ಡಪ್ಪೇಗೌಡರ ಪುತ್ರ ರವಿಯೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಮೃತ ಗಿರಿಗೌಡರ (ಹನಗೋಡಿನ ಆಶಾ ಕಾರ್ಯಕರ್ತೆ) ಜ್ಯೋತಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಭಾರ ಇನ್ಸ್ ಪೆಕ್ಟರ್ ಸಿ.ವಿ.ರವಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತ ದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಕುಮಾರ್, ಡಿವೈಎಸ್ಪಿ ರವಿಪ್ರಸಾದ್ ಭೇಟಿ ನೀಡಿದ್ದರು.