ಹುಣಸೂರು:ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಹಳ್ಳಿ ಸೋಮಶೇಖರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರದಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾವು ಕಳೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಪರಾಭವಗೊಂಡರೂ ಮುಖಂಡರೊಡಗೂಡಿ ಪಕ್ಷ ಸಂಘಟನೆ ಮಾಡಿದ್ದೆ, ಮುಂದಿನ ಚುನಾವಣೆಗೆ ಸ್ಪರ್ಧಿಸಲು ವರಿಷ್ಟರ ಸೂಚನೆ ಮೇರೆಗೆ ತಯಾರಿ ನಡೆಸಿದ್ದೆ. ಆದರೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷದ ವರಿಷ್ಟರು ಏಕಾ ಏಕಿ ಅಭ್ಯರ್ಥಿಯನ್ನು ಘೋಷಿಸಿದರು. ಪಕ್ಷ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಸಾಕಷ್ಟು ಹಣ ಕಳೆದುಕೊಂಡು ಸಂಘಟನೆ ಮಾಡಿದ್ದೆ. ಪಕ್ಷದ ವರಿಷ್ಟರಾಗಲಿ, ನಿಯೋಜಿತ ಅಭ್ಯರ್ಥಿಯಾಗಲಿ, ಜಿಲ್ಲಾ ವರಿಷ್ಠರಾಗಲಿ ಈವರೆಗೂ ನನ್ನ ಜೊತೆ ಚರ್ಚಿಸಿಲ್ಲ. ಕಳೆದ ಎರಡು ತಿಂಗಳಿನಿಂದ ಕ್ಷೇತ್ರದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಸೌಜನ್ಯಕ್ಕಾದರೂ ಆಹ್ವಾನಿಸಿಲ್ಲ. ಇದರಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ನನ್ನ ಜೊತೆಗೆ ಹಲವಾರು ಪದಾಧಿಕಾರಿಗಳು ರಾಜಿನಾಮೆ ನೀಡುತ್ತಿದ್ದಾರೆಂದು ತಿಳಿಸಿದರು.
ಪಕ್ಷದಲ್ಲೇ ಉಳಿಯಲು ಒತ್ತಾಯ
ಸಭೆಯಲ್ಲಿದ್ದ ಹಲವಾರು ಮುಖಂಡರು ಸಭೆ ಕರೆದಿರುವುದು ಚರ್ಚಿಸಲು ಆದರೆ ಈ ಸಭೆಯಲ್ಲೇ ರಾಜಿನಾಮೆ ಮಾತು ಬೇಡ, ಪಕ್ಷದಲ್ಲೇ ಉಳಿಯಿರಿ, ಈ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದೆ ತೀರ್ಮಾನ ಕೈಗೊಳ್ಳಬೇಕೆಂದು ಹೇಳುತ್ತಿದ್ದಂತೆ ಅಧ್ಯಕ್ಷರ ಬೆಂಬಲಿಗರು ಕಷ್ಟದಲ್ಲಿದ್ದಾಗ ಪಕ್ಷಕ್ಕೆ ಅಧ್ಯಕ್ಷರಾಗಿ ದೇವರಹಳ್ಳಿಸೋಮಶೇಖರ್ ದುಡಿದಿದ್ದಾರೆ, ಅವರೊಂದಿಗೆ ಚರ್ಚಿಸುವ ಸೌಜನ್ಯವೂ ಇಲ್ಲದವರೊಂದಿಗೆ ಸಂಘಟನೆ ಹೇಗೆ ಸಾಧ್ಯವೆಂದು ಪ್ರಶ್ನಿಸಿದರು. ಈ ವೇಳೆ ಕೆಲಹೊತ್ತು ಮಾತಿನ ಚಕಮಕಿಯೂ ನಡೆಯಿತು. ನಂತರ ಅಧ್ಯಕ್ಷರೇ ಎದ್ದುನಿಂತು ಎಲ್ಲರನ್ನೂ ಸಮಾಧಾನ ಪಡಿಸಿ. ನನ್ನನ್ನು ನಂಬಿರುವವರ ಸಂಕಷ್ಟಗಳಿಗೆ ಸದಾ ಬೆನ್ನೆಲುಬಾಗಿರುವೆನೆಂದು ಭರವಸೆ ಇತ್ತು, ತಾವು ಜಿಲ್ಲಾಧ್ಯಕ್ಷರಿಗೆ ರಾಜಿನಾಮೆ ರವಾನಿಸುವೆ. ಸಭೆಯಲ್ಲಿ ತಿಳಿಸಬೇಕಾದ್ದು ನನ್ನ ಕರ್ತವ್ಯವಾಗಿದ್ದು, ನಿಮ್ಮಗಳ ಮುಂದೆ ಘೋಷಿಸುತ್ತಿದ್ದೇನೆಂದು ರಾಜಿನಾಮೆ ಪ್ರಕಟಿಸಿದರು.
ಸಭೆಯಲ್ಲಿ ತಾಲೂಕು ಜೆಡಿಸ್ ಗೌರವಾಧ್ಯಕ್ಷ ಗೋವಿಂದೇಗೌಡ, ಕಾರ್ಯದರ್ಶಿ ವೆಂಕಟೇಶನಾಯಕ, ನಗರಸಭೆ ಸದಸ್ಯರಾದ ಶರವಣ, ಕೃಷ್ಣರಾಜಗುಪ್ತ, ರಾಧಾ, ರಾಣಿಪೆರುಮಾಳ್, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮ್ಮ, ಮುಖಂಡರಾದ ನಿಲುವಾಗಿಲುವಾಸು, ಬಿಳಿಕೆರೆಪ್ರಸನ್ನ, ಸತೀಶ್‌ಪಾಪಣ್ಣ, ಧರ್ಮಾಪುರಗೋವಿಂದೇಗೌಡ, ವಿಶ್ವನಾಥ, ಪ್ರಸನ್ನಕುಮಾರ್ ಸೇರಿದಂತೆ 150 ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು.