ಹುಣಸಗಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಾಗಿ ಕಾರ್ಯನಿರ್ವಹಣೆ ಮಾಡಿ ಸುರಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಗೆ ಅತ್ಯಧಿಕ ಮತಗಳನ್ನು ನೀಡಿದ ಕೀರ್ತಿ ಶಾಸಕ ರಾಜುಗೌಡ ಅವರಿಗೆ ಸಲ್ಲುತ್ತದೆ. ಇಂತಹವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಿರುವುದು ಹೈಕ ಭಾಗದ ಜನರಿಗೆ ನೋವು ಉಂಟಾಗಿದೆ ಎಂದು ಜಿಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ಬುಧವಾರ ಶಾಸಕ ನರಸಿಂಹ ನಾಯಕ ಅವರನ್ನು ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹಿಸಿ ಸ್ಥಳೀಯ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹಾಗೂ ರಾಜುಗೌಡ ಅಭಿಮಾನಿಗಳ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ರಾಜ್ಯದಲ್ಲಿ ಸಂಚರಿಸಿ ಎಸ್‌ಸಿ ಮತ್ತು ಎಸ್ಟಿ ಮತ ಒಗ್ಗೂಡಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜುಗೌಡರಿಗೆ ಸಚಿವ ಸ್ಥಾನ ನೀಡಿ ಹೈಕ ಭಾಗದ ಜನರ ಕೂಗು ಅಸಮಾಧಾನ ಶಮನಗೊಳಿಸಿ ಹೈಕ ಭಾಗಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಸಂಘದ ಅಧ್ಯಕ್ಷ ವಿನೋದ ನಾಯಕ ದೊರೆ ಮಾತನಾಡಿ, ಶಾಸಕ ರಾಜುಗೌಡರನ್ನು ಆರಿಸಿ ತಂದಲ್ಲಿ ಅವರು ಮಂತ್ರಿಯಾಗುವುದು ಖಚಿತ ಎಂದು ರಾಜ್ಯದ ಮುಖ್ಯಮಂತ್ರಿ ಬಿಎಸ್‌ವೈ ಈ ಹಿಂದೆ ಚುನಾವಣೆ ಪ್ರಚಾರದಲ್ಲಿ ಹೇಳಿದ್ದರು, ರಾಜಗೌಡರಿಗೆ ಸಚಿವ ಸ್ಥಾನ ಕಲ್ಪಿಸಿಕೊಡಬೇಕೆಂದು ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾದ ಯುವಕರ ಕಣ್ಮಣಿ, ಬಡವರ ಬಂಧು ರಾಜುಗೌಡ ಅವರನ್ನು ಸಚಿವ ಸ್ಥಾನದಿಂದ ಕಡೆಗಣಿಸುವುದು ಶೋಭೆ ತರುವುದಿಲ್ಲಾ, ಈ ಕುರಿತು ಹೈಕಮಾಂಡ್ ತನ್ನ ನಿರ್ಧಾರವನ್ನು ಪುನಃ ಪರಿಶೀಲಿಸಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ರಾಜುಗೌಡ ಅಭಿಮಾನಿ ಸಂಘ ಹಾಗೂ ವಾಲ್ಮೀಕಿ ಸಮಾಜದಲ್ಲಿ ಆಕ್ರೋಶ ಭುಗಿಲೇಳುವ ಮೊದಲು ಸಚಿವ ಸ್ಥಾನ ನೀಡಿ ಈ ಭಾಗದ ಜನರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಮೀದಸಾಬ್ ಡೆಕ್ಕನ್, ಮೆಲಪ್ಪ ಗುಳಗಿ, ರಾಜು ಮಲಗಲದಿನ್ನಿ, ಆನಂದ ಬಾರಿಗಿಡದ, ಪರಶುರಾಮ ದ್ಯಾಪುರ ಇತರರು ಪ್ರತಿಭಟನೆಯಲ್ಲಿ ಮಾತನಾಡಿದರು.
ಪಟ್ಟಣದ ಮಹಾಂತ ಸ್ವಾಮಿ ವೃತ್ತದಿಂದ ಬಸ್ ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಹುಣಸಗಿ ಸಿಪಿಐ ಪಂಡಿತ ಸಗರ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಪ್ರತಿಭಟನೆಯಲ್ಲಿ ಎಪಿಎಮ್‌ಸಿ ಸದಸ್ಯ ದೇವಣ್ಣ ಮಲಗಲದಿನ್ನಿ, ತಿಪ್ಪಣ್ಣ ಚಂದಾ, ಬಸವರಾಜ ಮಲಗಲದಿನ್ನಿ, ಬಿ.ಎಲ್. ಹಿರೆಮಠ, ಭೀಮರಾಯ ದೊಡ್ಡಮನಿ, ಸೋಮಶೇಖರಸ್ವಾಮಿ ಸ್ಥಾವರಮಠ, ಸಂಗಣ್ಣ ವೈಲಿ, ವೀರೇಶ ಚಿಂಚೋಳಿ, ಶಿವನಗೌಡ ಪಾಟೀಲ, ಅನೀಲ ಬಳಿ, ಬಸ್ಸಣ್ಣ ಬಾಲಗೌಡರ್, ಹೊನ್ನಕೇಶವ ದೇಸಾಯಿ, ರವಿ ಪುರಾಣಮಠ, ಮಲ್ಲು ಹೆಬ್ಟಾಳ, ಹಳ್ಳೆಪ್ಪ ಗುತ್ತೇದಾರ, ಮುದಕಣ್ಣ ದೇಸಾಯಿ, ಈರಣ್ಣ ಬಡಿಗೇರ, ಭೀಮಣ್ಣ ದೊರೆ ವಜ್ಜಲ್, ಬಸವರಾಜ ಹವಾಲ್ದಾರ, ವಿಠ್ಠಲ ಪವಾರ, ನಂದಪ್ಪ ಪೀರಾಪುರ, ಬಾಬು ರಾಠೊಡ ಹಾಗೂ ಇತರರು ಇದ್ದರು.