Advertisement

ಮತದಾನಕ್ಕೆ ‘ಗುಳೆ’ಅಡ್ಡ ಪರಿಣಾಮ?

12:52 PM Apr 19, 2019 | Naveen |

ಹುಣಸಗಿ: ರಾಜ್ಯದಲ್ಲಿ ಬರ ಆವರಿಸಿದ ಹಿನ್ನೆಲೆಯಲ್ಲಿ ಹುಣಸಗಿ ಮತ್ತು ಸುರಪುರ ತಾಲೂಕಿನ ಹಳ್ಳಿ ಹಾಗೂ ತಾಂಡಾದ ಜನರು ವಲಸೆ ಹೋಗಿರುವುದು ಸಾಮಾನ್ಯವಾಗಿದೆ. ಉದ್ಯೋಗ ಅರಸಿ ಮಹಾನಗರಗಳಿಗೆ ಗುಳೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ಜನರು ಹೇಳುವ ಸ್ಥಳಕ್ಕೆ ತಲುಪಿಸುವ ಕಾರ್ಯಕ್ಕೆ ಸರಕಾರಿ ಬಸ್‌ ಸೇರಿದಂತೆ ಜೀಪ್‌ಗ್ಳು ನಾ ಮುಂದು ತಾ ಮುಂದು
ಎನ್ನುತ್ತಿವೆ. ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಇಲ್ಲದೇ ರೈತರು ಸಹ ಮಹಾನಗರಗಳತ್ತ ಮುಖ ಮಾಡುವಂತಾಗಿದೆ.

Advertisement

ಒಂದೆಡೆ ರಣ ಬಿಸಿಲಿನಲ್ಲೂ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಸದ್ಯದ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು
ಮತದಾನವಾಗಬೇಕು ಎಂಬ ನಿಟ್ಟಿನಲ್ಲಿ ಯಾದಗಿರಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಅಲ್ಲಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಗರ್ಭಿಣಿಯರು, ಅಶಕ್ತ
ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಬೂತ್‌ ಮಟ್ಟದಲ್ಲಿ ಚುನಾವಣಾ ಆಯೋಗದಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹುಣಸಗಿ ತಾಲೂಕಿನಲ್ಲಿ ಅತಿ ಹೆಚ್ಚು ತಾಂಡಾಗಳಿದ್ದು, ಪ್ರತಿಯೊಂದು ತಾಂಡಾಗಳಲ್ಲಿ ಗುಳೆ ಹೋಗಿದ್ದಾರೆ. ಮತದಾನ
ದಿನದಂದು ಹಕ್ಕು ಚಲಾಯಿಸಲು ಬರುವರೇ ಎಂಬ ಅನುಮಾನ ಕಾಡುತ್ತಿದೆ. ಬಸರಿಗಿಡದ ತಾಂಡಾ 150 ಮತ್ತು ಬೆಳ್ಳಿಗುಂಡ ತಾಂಡಾದಲ್ಲಿ ಒಟ್ಟು 90 ಮನೆಗಳಿವೆ. ಒಟ್ಟು 860 ಮತದಾರರಿದ್ದಾರೆ. ತಾಂಡಾದಲ್ಲಿ ಸದ್ಯ ಅಂದಾಜು 300 ಮತದಾರರು ಇರಬಹುದು ಎಂದು ಕೃಷ್ಣಾ ಚವ್ಹಾಣ ಅಭಿಪ್ರಾಯ
ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಗುಳೆ ಹೋದ ಜನರನ್ನು ಕರೆದುಕೊಂಡು ಬಂದು ತಮ್ಮ ಪಕ್ಷದ ಅಭ್ಯರ್ಥಿ ಪರ ಹಕ್ಕು ಚಲಾಯಿಸಲು ಪ್ರಯತ್ನಿಸಿದ್ದರು. ಈ ಬಾರಿ ಏನಾಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಮೊದಲ ಸಲ ಮತ ಚಲಾಯಿಸುವ ಅವಕಾಶ ದೊರೆತಿದೆ. ಮತ ಚಲಾಯಿಸಲು ನನ್ನೂರಿಗೆ ಆಗಮಿಸುತ್ತಿರುವುದಾಗಿ ಬೆಂಗಳೂರಿನಲ್ಲಿ ಕಂಪೂಟರ್‌ ಸೈನ್ಸ್‌ ಇಂಜಿನಿಯರಿಂಗ್‌ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಅಕ್ಷತಾ ಕುಲಕರ್ಣಿ ವಜ್ಜಲ್‌ ತಿಳಿಸಿದರು.

ಹುಣಸಗಿ ತಾಲೂಕಿನ ಎಲ್ಲ ಹಳ್ಳಿಗಳು ಸೇರಿದಂತೆ ತಾಂಡಾಗಳಲ್ಲಿ ಮತದಾನ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಲ್ಲದೇ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಿಬ್ಬಂದಿ ಮತದಾನ ಹೆಚ್ಚಳಕ್ಕಾಗಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಕಲಾ ತಂಡಗಳಿಂದ ಜಾಥಾ ನಡೆಸಲಾಗುತ್ತಿದೆ.
ಶ್ರೀಧರರೆಡ್ಡಿ ಮುಂದಲಮನಿ,
ತಹಶೀಲ್ದಾರ್‌ ಹುಣಸಗಿ

Advertisement

ದೇಶ ನಾಗರಿಕರಿಗೆ ಮತದಾನದ ದೊಡ್ಡ ಜವಾಬ್ದಾರಿ ನೀಡಿದೆ.
18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿ ನಿಭಾಯಿಸೋಣ.
ಪ್ರವೀಣ ಚವ್ಹಾಣ,
ಬೆಳ್ಳಿಗುಂಡಾ ತಾಂಡಾ ಯುವಕ

ಯಪ್ಪಾ ನನ್ನ ಮಗ, ಸೊಸೆ ದುಡದ ತಿನ್ನದಕ್ಕ ಪಟ್ಟಣಕ್ಕ
ಹೋಗ್ಯಾರ. ಅವರಿಗೆ ಫೋನ್‌ ಮಾಡಿನಿ. 23ನೇ ತಾರೀಖೀಗಿ
ಎಲೆಕ್ಷನ್‌ ಐತಿ. ಬಂದ ಓಟ್‌ ಹಾಕಿ ಹೋಗರಿ ಅಂತ ಹೇಳಿನಿ. ಬರತಿನಿ ಅಂದಾರ. ಎನ್ಮಾಡತಾರ ಗೊತ್ತಿಲ್ಲರಿ.
ಪ್ರೇಮಲಾಬಾಯಿ ಬೆಳ್ಳಿಗುಂಡ,
ತಾಂಡಾದ ಹಿರಿಯ ಜೀವಿ

ಬರಿ ಹಳ್ಳಿಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿದರೆ ಸಾಲದು. ತಾಂಡಾಗಳಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸುವುದು ಅಗತ್ಯ ಇದೆ.
ತಾರಾನಾಥ ಚವ್ಹಾಣ,
ಬೈಲಾಪುರ ತಾಂಡಾ ನಿವಾಸಿ

ಗೋಪಾಲರಾವ್‌ ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next