ಹುಣಸಗಿ: ಹಳ್ಳಿಯಿಂದ ಹುಟ್ಟಿದ ಜನಪದ ಸಾಹಿತ್ಯ ಇಂದು ಹಳ್ಳಿಯಿಂದಲೇ ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಜನಪದ ಸಾಹಿತ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಿರಿಜನೋತ್ಸವ ಮೂಲಕ ಯುವಕರಲ್ಲಿ ಕಲೆಯನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಹೇಳಿದರು.
ಶನಿವಾರ ತಾಲೂಕಿನ ಹೆಬ್ಟಾಳ (ಬಿ) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂಜೆ ನಡೆದ ಗಿರಿಜನ ಉತ್ಸವ-2019 ಸಮಾರಂಭದಲ್ಲಿ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಮೊದಲು ರೈತರು ಜಾನುವಾರದೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಭೂಮಿಯಲ್ಲಿ ವಿವಿಧ ತಳಿಯ ಬಿತ್ತನೆ ಮಾಡುತ್ತಿದ್ದರು, ಇಂದು ಡಿಜಟಲೀಕರಣದಿಂದಾಗಿ ಎಲ್ಲ ಮಾಯವಾಗಿ ನಮ್ಮತನವನ್ನು ನಾವು ಮರೆಯುತ್ತಿದ್ದವೆ ಎಂದರು.
ಈ ಮೊದಲು ಗ್ರಾಮಗಳಲ್ಲಿ ನಡೆಯುತ್ತಿದ್ದ ಹಬ್ಬ ಹಾಗೂ ಜಾತ್ರೆ ಸಮಯದಲ್ಲಿ ಭಾರ ಎತ್ತುವುದು, ಗುಂಡು ಎಸೆಯುವುದು, ಕಬಡ್ಡಿ,
ಕುಸ್ತಿ, ಜಾನಪದ ಕಲೆಗಳ, ಹಂತಿ ಹಾಡು, ಡೊಳ್ಳು ಕುಣಿತ, ಬಯಲಾಟ ಪ್ರದರ್ಶನ ಇವು ನಮ್ಮೆಲ್ಲರ ಜೀವಾಳ ಆಗಿದ್ದವು. ಇಂದು ಕಲೆಗಳು ಅಳಿವಿನ ಅಂಚಿನಲ್ಲಿದ್ದು, ಹಿಂದಿನ ತಲೆಮಾರಿನ ಜಾನಪದ ಎಲ್ಲ ಕಲೆಗಳ ಉಳಿವಿಗಾಗಿ ಯುವ ಪೀಳಿಗೆ ಗಮನ ಹರಿಸಿಬೇಕಿದೆ ಎಂದರು.
ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಮಾತನಾಡಿ, ನಮ್ಮ ಇಲಾಖೆ ಜಿಲ್ಲೆಯ ವಿವಿಧೆಡೆ ಸಂಗೀತ, ಕಲೆ, ಕುಣಿತ, ಹಾಡುಗಾರರು ಹೊಂದಿರುವ ಕಲೆಯುಳ್ಳ ಪ್ರತಿಭೆಗಳಿಗೆ ವೇದಿಕೆಯನ್ನು ನೀಡುವ ಮೂಲಕ ಕಲೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮೂಲಕ ರಕ್ಷಿಸಲಾಗುತ್ತಿದೆ ಎಂದರು.
ಗುರುನಾಥರೆಡ್ಡಿ ಪಾಟೀಲ, ಪರ್ವತರೆಡ್ಡಿ ಪಾಟೀಲ, ಮಲ್ಲಿಕಾರ್ಜುನಸ್ವಾಮಿ ಹಿರೇಮಠ, ತಾಪಂ ಸದಸ್ಯ ರವಿಕುಮಾರ ರಾಠೊಡ, ಮಲ್ಲಯ್ಯ ಗುತ್ತೇದಾರ, ವೆಂಕನಗೌಡ ಪಾಟೀಲ, ಯಲ್ಲಯ್ಯ ಗುತ್ತೇದಾರ, ಸಿದ್ದನಗೌಡ ಸಿರಿಗುಂಡ, ಶರಣಗೌಡ ಪಾಟೀಲ, ಮಲ್ಲಣ ದೇಸಾಯಿ, ಗ್ರಾಪಂ ಸದಸ್ಯರು, ಶಾಲೆ ಮುಖ್ಯಗುರುಗಳು ಹಾಗೂ ಗ್ರಾಮದ ಮುಖಂಡರು ಇದ್ದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು.