Advertisement

ಸೌಕರ್ಯ ಇಲ್ಲದೇ ಪಿಯು ವಿದ್ಯಾರ್ಥಿಗಳ ಪರದಾಟ

03:28 PM Sep 25, 2019 | Naveen |

„ಗೋಪಾಲರಾವ್‌ ಕುಲಕರ್ಣಿ

Advertisement

ಹುಣಸಗಿ: ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೂ ನುರಿತ ಮತ್ತು ತಜ್ಞ ಉಪನ್ಯಾಸಕರ ಕೊರತೆಯಿಂದ ಇಲ್ಲಿನ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಹೌದು, ಹುಣಸಗಿ ಪಟ್ಟಣದಲ್ಲಿ ಕಳೆದ 1992-93ನೇ ಸಾಲಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಅಂದಿನ ಸರಕಾರ ಆರಂಭಿಸಿ ಕಲಾ ವಿಭಾಗಕ್ಕೆ ಅನುಮತಿ ನೀಡಿತ್ತು. ಬಳಿಕ ಮುಂದುವರಿದು 1999-2000ದಲ್ಲಿ ವಾಣಿಜ್ಯ ಮತ್ತು 2010-11ರಲ್ಲಿ ವಿಜ್ಞಾನ ವಿಭಾಗ ಆರಂಭಿಸಲಾಗಿತ್ತು. ಇದರಿಂದ ಹೆಚ್ಚಿನ ವ್ಯಾಸಂಗಕ್ಕಾಗಿ ಹುಣಸಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಸುರಪುರ ಮತ್ತು ತಾಳಿಕೋಟೆಗೆ ಹೋಗುವುದು ತಪ್ಪಿತು ಎಂದು
ಪಾಲಕರು ಸಂತಸದಲ್ಲಿದ್ದರು. ಆದರೆ ಈ ಸಂತಸ ಹುಸಿಯಾಗಿದೆ.

ಈ ಕಾಲೇಜಿನಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಸೇರಿದಂತೆ ಒಟ್ಟು 12 ಹುದ್ದೆ
ಮಂಜೂರಾಗಿದ್ದು, ಪ್ರಸ್ತುತ ಪ್ರಾಂಶುಪಾಲರು ಮತ್ತು ಇಬ್ಬರು ಉಪನ್ಯಾಸಕರು ಮಾತ್ರ ಕಾಯಂ ಇದ್ದು, ಉಳಿದವರನ್ನು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಪ್ರಕಾಶ ಚೌಧರಿ ತಿಳಿಸಿದ್ದಾರೆ.

ಪ್ರಥಮ ವರ್ಷದ ಕಲಾ ವಿಭಾಗದಲ್ಲಿ 214 ಸೇರಿದಂತೆ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಅಂದಾಜು 398 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರಯೋಗಾಲಯ ಸಮಸ್ಯೆಯಿಂದ ಪರದಾಡುವಂತಾಗಿದೆ ಎಂದು ವಿದ್ಯಾರ್ಥಿಗಳಾದ ಕಿರಣಕುಮಾರ ರಾಠೊಡ,
ಕಿರಣ ಚವ್ಹಾಣ, ಶ್ರೀದೇವಿ, ಸಾವಿತ್ರಿ ಭಪ್ಪರಗಿ, ಭಾಗ್ಯಶ್ರೀ, ನಿರ್ಮಲಾ ಗೋಗಿ, ಭೀಮರಾಯ
ಹಾದಿಮನಿ ದೂರಿದ್ದಾರೆ.

Advertisement

ಗ್ರಂಥಾಲಯದಲ್ಲಿ ಸೌಕರ್ಯಗಳ ಅವಶ್ಯಕತೆ ಇದೆ. ಈಗಾಗಲೇ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಳೆದ ವರ್ಷ ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಸಮರ್ಪಕ ನಿರ್ವಹಿಸದೇ ಇದ್ದುದರಿಂದಾಗಿ ಮತ್ತು ಸಂಬಂಧಿಸಿದ ಗುತ್ತಿಗೆದಾರರ ನಿಷ್ಕಾಳಜಿಯಿಂದಾಗಿ ಮಳೆ ನೀರು ಛಾವಣಿ ಮೇಲೆ ಸಂಗ್ರಹವಾಗುತ್ತಿದ್ದು, ಆ ನೀರು ಕಟ್ಟಡದ ಒಳಗಡೆ ಬರುತ್ತಿದೆ.

ಅಲ್ಲದೇ ಪ್ರಯೋಗಾಲದಲ್ಲಿ ಸೂಕ್ತ ವಿದ್ಯುತ್‌ ಮತ್ತು ನೀರಿನ ವ್ಯವಸ್ಥೆ ಇಲ್ಲ. ಸೂಕ್ತ ಉಪಕರಣ ವ್ಯವಸ್ಥೆವೂ ಇಲ್ಲ. ಇದರಿಂದಾಗಿ ಎಲ್ಲ ಸಮಸ್ಯೆ ಪರಿಹರಿಸಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲು ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳು ಮುಂದಾಗುತ್ತಾರೆ ಎಂದು ಕಾಯ್ದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next