ಹುಣಸಗಿ: ಭತ್ತ ಹಾಗೂ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಹಶೀಲ್ದಾರ್ ವಿನಯಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ, ಭತ್ತ ಮತ್ತು ಹತ್ತಿ ಖರೀದಿ ಕೇಂದ್ರ ಆರಂಭಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ತಾಲೂಕು ಮತ್ತು ಪ್ರತಿ ಹೋಬಳಿಗೆ ಒಂದರಂತೆ ಭತ್ತ ಹಾಗೂ ಹತ್ತಿ ಖರೀದಿ ಕೇಂದ್ರ ತೆರೆಯಬೇಕು. ಅಲ್ಲದೇ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಅಗ್ರಹಿಸಿದರು.
ಮಧ್ಯವರ್ತಿಗಳ ಹಾವಳಿಯಿಂದ ವರ್ಷ ಪೂರ್ತಿ ಬೆಳೆದ ಬೆಳೆಯನ್ನು ಕಡಿಮೆ ದರದಲ್ಲಿ ಖರೀದಿ ಮಾಡುವುರಿಂದ ರೈತರಿಗೆ ತುಂಬಾ ಆರ್ಥಿಕ ನಷ್ಟವಾಗುತ್ತಿದೆ. ಹತ್ತಿ ಖರೀದಿ ತೂಕದಲ್ಲಿಯೂ ರೈತರಿಗೆ ಭಾರಿ ಮೋಸವಾಗುತ್ತಿದೆ. ಇದರಿಂದ ರೈತರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಪ್ಪಿಸಲು ಸರಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತು ಕೊಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮಳೆ ಹಾನಿ ಬೆಳೆ ಹಾನಿ ಪ್ರಕೃತಿ ವಿಕೋಪದಿಂದಲೂ ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಆದ್ದರಿಂದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ರೈತರ ನೇರವಿಗೆ ಧಾವಿಸಬೇಕು. ಹತ್ತಿ ಹಾಗೂ ಭತ್ತದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಖರೀದಿಸಬೇಕು. ಈಗ ಭತ್ತದ ಕಟಾವು ಕಾರ್ಯ ಭರದಿಂದ ಸಾಗಿದೆ. ಸರಕಾರ ಭತ್ತ ಹಾಗೂ ಹತ್ತಿ ಖರೀದಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರುದ್ರಗೌಡ ಮೇಟಿ, ಬಸವರಾಜ ಗೆದ್ದಲಮರಿ, ಸಾಹೇಬಲಾಲ ಕಕ್ಕಲದೊಡ್ಡಿ, ಹಣಮಂತ್ರಾಯಗೌಡ ಪಾಟೀಲ, ಮಾನಪ್ಪ ಪೂಜಾರಿ, ಶಿವಲಿಂಗಯ್ಯ ಬೇವಿನಾಳಮಠ, ಕರಿಯಪ್ಪ ಗುರಿಕಾರ, ಬಸನಗೌಡ ಮೇಟಿ, ಬಸವರಾಜ ಬೂದಿಹಾಳ ಹಾಗೂ ಇನ್ನಿತರ ರೈತ ಮುಖಂಡರು ಹಾಜರಿದ್ದರು.