ಹುಣಸಗಿ: ಗೋಂಧಳಿ ಸಮಾಜವು ರಾಜ್ಯದಲ್ಲಿ ಅತೀ ಹಿಂದುಳಿದಿದ್ದು, ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಆದ್ದರಿಂದ ಸಮಾಜ ಬಾಂಧವರು ಮೊದಲು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಲಿ ಎಂದು ರಾಜ್ಯ ಗೋಂಧಳಿ ಸಮಾಜದ ಅಧ್ಯಕ್ಷ ಡಾ| ಕೆ.ಎಂ. ಜಯರಾಮಯ್ಯ ಹೇಳಿದರು.
ಪಟ್ಟಣದ ಯುಕೆಪಿ ಕ್ಯಾಂಪ್ ನೀಲಕಂಠೇಶ್ವರ ದೇವಸ್ಥಾನದಲ್ಲಿ ನಡೆದ ಯಾದಗಿರಿ ಜಿಲ್ಲಾ ಗೋಂಧಳಿ ಸಮಾಜ ಬಾಂಧವರ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರು ಜಾಗೃತರಾಗುವುದಲ್ಲದೆ ಸಂಘಟಿತರಾಗಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಾಗೂ ಸರಕಾರದಿಂದ ದೊರೆಯುವ ಆರ್ಥಿಕ ನೆರವು, ಸಾಲ, ಸಬ್ಸಿಡಿ ಸೇರಿದಂತೆ ಸರಾಕಾರ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜ ಬಾಂಧವರು ಸಂಘಟಿತರಾಗಿವಂತೆ ತಿಳಿಸಿದರು.
ಒಂದು ಕಡೆ ನೆಲೆ ನಿಲ್ಲದೆ ಅಲೆ ಮಾರಿಗಳಾಗಿರುವುದರಿಂದ ಜನಪ್ರತಿನಿಧಿಗಳು ನಮ್ಮನ್ನು ಕಡೆಗಣಿಸಲು ಕಾರಣವಾಗಿದೆ. ಆದ್ದರಿಂದ ನಾವು ಮೊದಲು ಒಗ್ಗಟ್ಟಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗೋಣ ಎಂದು ಹೇಳಿದರು. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯಾದಗಿರಿ ಜಿಲ್ಲಾ ವ್ಯವಸ್ಥಾಪಕ ಹನುಮಂತರಾಯಪ್ಪ ಮಾತನಾಡಿ, ನಿಗಮದಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಕಿರು ಸಾಲ ಯೋಜನೆಯಡಿ ದೊರೆಯುವ ಆರ್ಥಿಕ ನೆರವು, ಸ್ವಯಂ ಉದ್ಯೋಗ ಕೈಗೊಳ್ಳಲು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ದೊರೆಯುವ ಸೌಲಭ್ಯಗಳ ಕುರಿತು ತಿಳಿಸಿದರು.
ಉಪನ್ಯಾಸಕ ಅಶೋಕ ವಾಟ್ಕರ್ ಮಾತನಾಡಿ, ಗೋಂಧಳಿ ಸಮಾಜ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಹೊಂದಲು ಅಭಿವೃದ್ಧಿ ನಿಗಮ ಸ್ಥಾಪಿಸುವ ಅಗತ್ಯವಿದೆ ಎಂದರು.
ಸಮಾಜದ ಮುಖಂಡರಾದ ವಿಠ್ಠಲರಾವ್ ಸೂರ್ಯವಂಶಿ, ಅಶೋಕ ಸೂರ್ಯವಂಶಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ರವಿಕುಮಾರ ಇದ್ದರು. ತುಕಾರಾಮ ಸೂರ್ಯವಂಶಿ ನಿರೂಪಿಸಿದರು. ಗೋಪಾಲ ಸ್ವಾಗತಿಸಿದರು. ಮಹೇಶ ವಾಗ್ಮೋರೆ ವಂದಿಸಿದರು.