ಹುನಗುಂದ: ಪಟ್ಟಣದ ರಾಯಚೂರ ಮತ್ತು ಬೆಳಗಾವಿ ರಾಜ್ಯ ಹೆದ್ದಾರಿಯ ಅಕ್ಕ ಪಕ್ಕದ ಸರ್ಕಾರಿ ಮತ್ತು ಪುರಸಭೆಯ ಜಾಗದಲ್ಲಿ ಅನಧಿಕೃತ ಅಂಗಡಿ ಮತ್ತು ಗೂಡಂಗಡಿಗಳು ತೆಲೆ ಎತ್ತಿದ್ದು, ಇದು ಸುಲಭ ಸಂಚಾರಕ್ಕೆ ಮತ್ತು ಮಾರಾಟ ಮಳಿಗೆಗಳಿಗೆ ತೊಂದರೆಯಾಗುತ್ತಿದೆ. ಇವುಗಳನ್ನು ತಕ್ಷಣ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದ್ದರಿಂದ ಎರಡು ಮೂರು ದಿನಗಳಲ್ಲಿ ತೆರವುಗೊಳಿಸಬೇಕೆಂದು ತಹಶೀಲ್ದಾರ್ ಬಸಲಿಂಗಪ್ಪ ನೈಕೋಡಿ ಸೂಚಿಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿನ ಜಾಗದಲ್ಲಿ ಹಾಕಿರುವ ಅಂಗಡಿ ಮತ್ತು ಗೂಡಂಗಡಿಯನ್ನು ತೆರವುಗೊಳಿಸುವ ಕಾರ್ಯವನ್ನು ಪುರಸಭೆ ಮತ್ತು ಪಿಡಬ್ಯುಡಿ ಇಲಾಖೆ ಜವಾಬ್ದಾರಿಯಾಗಿದೆ. ಸರ್ಕಾರಿ ಜಾಹೀರಾತುಗಳು ಮುಂದೆ ಮತ್ತು ಸರ್ಕಾರಿ ಕಚೇರಿ ಮುಂದೆ ಅನಧಿಕೃತ ಅಂಗಡಿಗಳು ತೆಲೆಯೆತ್ತಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಅದನ್ನು ತಕ್ಷಣ ತೆರುವು ಕಾರ್ಯವಾಗಬೇಕು. ರಸ್ತೆ ಅಕ್ಕ ಪಕ್ಕದಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಅಂಗಡಿ ಗೂಡಂಗಡಿಗಳಿಂದ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ಬಹುದೊಡ್ಡ ಸಮಸ್ಯೆಗಳಾಗುತ್ತಿದ್ದು, ಆ ಸಮಸ್ಯೆ ಪರಿಹರಿಸುವ ಮೂಲಕ ಸುಂದರ ಪಟ್ಟಣ ಮಾಡಲು ಸರ್ವರೂ ಶ್ರಮಿಸುವಂತೆ ಮನವಿ ಮಾಡಿದರು.
ಪಿಡಬ್ಯೂಡಿ ಎಇಇ ದಯಾನಂದ ಬರಗೂರ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಕಡಪಟ್ಟಿ ಮಾರಾಟ ಮಳಿಗೆಯ ಮುಂದೆ ಅನಧಿಕೃತವಾಗಿ ಹಾಕಿರುವ ಅಂಗಡಿ ಮತ್ತು ಗೂಡಂಗಡಿಗಳಿಂದ ಮಾರಾಟ ಮಳಿಗೆಗೆ ಹೋಗಿ ಬರಲು ತೊಂದರೆಯಾಗಿದೆ ಎಂದು ಬಸವರಾಜ ಶಿವಸಂಗಪ್ಪ ಕಡಪಟ್ಟಿ ಅವರು ಧಾರವಾಡದ ಹೈಕೋರ್ಟ್‌ನಲ್ಲಿ ಪುರಸಭೆ ಮುಖ್ಯಾಧಿಕಾರಿ ಮತ್ತು ಪಿಡಬ್ಯೂಡಿ ಎಇಇ ಬಾಗಲಕೋಟ ಮತ್ತು ಪಿಡಬ್ಯೂಡಿ ಎಇಇ ಹುನಗುಂದ ಇವರನ್ನು ಪಾರ್ಟಿ ಮಾಡಿ ಪ್ರಕರಣ ದಾಖಲಿಸಿದ್ದರು. 16 ಸಪ್ಟೆಂಬರ್ 2021 ರಲ್ಲಿ ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್ ಆರ್ಡರ್ ಮಾಡಿದ್ದು, ಅರ್ಜಿದಾರು ಕೇಳಿದ್ದು ಸರಿ ಇದೆ. ತೆರುವುಗೊಳಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಕೊಳ್ಳುವಂತೆ ನಿರ್ದೇಶನ ನೀಡಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಹ ಹೋಗದಂತೆ ಮುಕ್ತಾಯ ಮಾಡಿದೆ.
ಅದಕ್ಕೆ ಎಲ್ಲರೂ ಭಾಗಿಯಾಗಿ ಸರ್ಕಾರಿ ಮತ್ತು ಪುರಸಭೆ ಜಾಗೆಯಲ್ಲಿರುವ ಅಂಗಡಿ ತೆರವುಗೊಳಿಸುವುದು ಒಂದೇ ದಾರಿ ಎಂದರು. ಪುರಸಭೆ ಅಧ್ಯಕ್ಷ ಶರಣು ಬೆಲ್ಲದ ಮಾತನಾಡಿ, ಪಟ್ಟಣದ ರಸ್ತೆಯಲ್ಲಿ ಹಣ್ಣು, ಹಾಲು, ತರಕಾರಿ, ಚಹಾ ಅಂಗಡಿ ಮತ್ತು ಗೂಡಂಗಡಿಗಳಿದ್ದು, ಅದರ ಮೇಲೆಯ ವ್ಯಾಪಾರಸ್ಥರ ಬದುಕು ನಿಂತುಕೊಂಡಿದೆ. ಈ ಅಂಗಡಿ ಮತ್ತು ಗೂಡಂಗಡಿಗಳ ತೆರವು ಕಾರ್ಯಾಚರಣೆಯನ್ನು ಹಂತಹಂತವಾಗಿ ಮಾಡುವುದು ಸೂಕ್ತ. ಏಕ ಕಾಲದಲ್ಲಿ ಮಾಡಿದರೆ
ಅನೇಕ ಸಮಸ್ಯೆಗಳು ಸೃಷ್ಟಿಯಾಗಲಿದೆ ಎಂದರು.
ಪುರಸಭೆ ಸದಸ್ಯ ಚಂದ್ರು ತಳವಾರ, ಪ್ರವೀಣ ಹಳಪೇಟಿ, ಶಾಂತಪ್ಪ ಹೊಸಮನಿ, ಮೈನು ಧನ್ನೂರ, ಯಲ್ಲಪ್ಪ ನಡುವಿನಮನಿ, ಮಹೇಶ ಬೆಳ್ಳಿಹಾಳ, ಮುಖಂಡರಾದ ಮಲ್ಲಿಕಾರ್ಜುನ ಹೂಗಾರ, ಶಾಂತಯ್ಯ ಮಠ, ಹರ್ಷದ್ ನಾಯಕ, ಮಲ್ಲು ಚೂರಿ, ಲಿಂಬಣ್ಣ ಮುಕ್ಕಣ್ಣವರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ಸಿಪಿಐ ಹೊಸಕೇರಪ್ಪ ಕೊಳ್ಳೂರ, ಪಿಎಸ್‌ಐ ಸೋಮಗೌಡ ಗೌಡ್ರ ಸೇರಿದಂತೆ ಅನೇಕರು ಇದ್ದರು.
ಸರ್ಕಾರಿ ಮತ್ತು ಪುರಸಭೆ ಜಾಗೆಯಲ್ಲಿ ಅನಧಿಕೃತವಾಗಿ ಹಾಕಿರುವ ಅಂಗಡಿ ಮತ್ತು ಗೂಡಂಗಡಿಗಳನ್ನು ಇಂದಿನಿಂದ ತೆರುವುಗೊಳಿಸಬೇಕು. ಆ ಜಾಗದಲ್ಲಿ ಇನ್ನು ಅಂಗಡಿ ಹಚ್ಚುವಂತಿಲ್ಲ. ಹಾಗೇನಾದರೂ ಅಂಗಡಿ ಹಾಕಿ ವ್ಯಾಪಾರ ಮಾಡಿದರೆ, ಅಂತವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
ಹೊಸಕೇರಪ್ಪ ಕೊಳ್ಳೂರ,
ಸಿಪಿಐ ಹುನಗುಂದ