ಹರಪನಹಳ್ಳಿ: ಸಿನಿಮಾಗಳಲ್ಲಿ ಹಾಸ್ಯ ಕಲಾವಿದರು ಇಲ್ಲದೇ ಹೋದರೆ ಅದು ಸಿನಿಮಾವಾಗಿರಲ್ಲ ಎಂದು ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ತಿಳಿಸಿದರು. ಪಟ್ಟಣದ ಹಳೆ ಬಸ್ ನಿಲ್ದಾಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದೆ ದಲಿತ ವಿದ್ಯಾರ್ಥಿ ವೇದಿಕೆ ಬೀಚಿ ಅಭಿಮಾನ ಬಳಗದಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಕಲೆಗಳಲ್ಲಿ ಹಾಸ್ಯವು ಒಂದು ಕಲೆಯಾಗಿದೆ. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಸಭಾಭವನದಲ್ಲಿ ವಿದೂಷಕರು ಇರುತ್ತಿದ್ದರು. ಇವರು ಇಲ್ಲದೆ ಹೋದರೆ ಅರ್ಥವಿರುತ್ತಿಲ್ಲ. ಮನೋರಂಜನೆ ಅಗತ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಿರೋಗಳೇ ಹಾಸ್ಯ ಕಲಾವಿದರಾಗಿದ್ದಾರೆ.
ಅನೇಕ ಕಲಾವಿದರು ಹಲವು ಭಾಷೆಗಳಲ್ಲಿ ಹಾಸ್ಯದ ಅಭಿನಯದ ಮೂಲಕ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದಾರೆ. ಹಾಸ್ಯ ಕಲಾವಿದ ಪ್ರಾಣೇಶ್ ತಮ್ಮ ಹಾಸ್ಯದ ಮೂಲಕ ಮಾತನಾಡಿ, ನಾವು ಈಗಾಗಲೇ ನಮ್ಮದೇಯಾದ ತಂಡದಿಂದ 3 ಸಾವಿರ ಕಾರ್ಯಕ್ರಮ, 11ದೇಶಗಳಲ್ಲಿ, 410 ಊರುಗಳಲ್ಲಿ ಕಾರ್ಯಕ್ರಮ ಮಾಡುತ್ತಾ ಬಂದಿದ್ದು, ಬಹಳ ಬಹಳ ವರ್ಷಗಳ ಹಿಂದೆ ನಮ್ಮ ಗುರುಗಳ ಊರಾದ ಹರಪನಹಳ್ಳಿಗೆ ಬಂದಿದ್ದೇನೆ.
ಬೀಚಿಯವರ ಹೆಸರು ಶಾಶ್ವತವಾಗಿ ಉಳಿಯಲು ಅವರ ಹೆಸರಿನಲ್ಲಿ ಸಂಘಟಿಸಿ ಕಾರ್ಯಕ್ರಮ ಮಾಡುವುದು, ಪಟ್ಟಣದಲ್ಲಿ ಯಾವುದಾದರೂ ವೃತ್ತಕ್ಕೆ ಬೀಚಿಯವರ ಹೆಸರನ್ನಿಡುವುದರಿಂದ ಹರಪನಹಳ್ಳಿಲ್ಲಿ ಹುಟ್ಟಿದ್ದಕ್ಕೂ ಅವರಿಗೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಬೀಚಿಯವರ ಸಾಹಿತ್ಯ ಅರ್ಥಗರ್ಭಿತವಾಗಿರುತ್ತದೆ. ಎಲ್ಲ ವಸ್ತುಗಳಲ್ಲಿ ಹಾಸ್ಯ ಅಡಗಿರುತ್ತದೆ. ವಿದ್ಯಾರ್ಥಿಗಳು, ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳದೇ ತಾಳ್ಮೆಯಿಂದ ಜೀವನ ಎದುರಿಸಬೇಕು. ತಮ್ಮದೇಯಾದ ಜವಾರಿ ಭಾಷೆಯಲ್ಲಿ ಜನರನ್ನು ಹಾಸ್ಯದ ಮೂಲಕ ರಂಜಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಆರೋಗ್ಯ ಸುಧಾರಣೆಗೆ ಹಾಸ್ಯ ಅಗತ್ಯ. ಇದರಿಂದ ಅನೇಕ ಕಾಯಿಲೆಗಳು ದೂರ ಉಳಿಯುತ್ತವೆ ಎಂದರು. ತಾಲೂಕು ಬಿಜೆಪಿ ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ, ಪುರಸಭೆ ಅಧ್ಯಕ್ಷ ಎಚ್. ಕೆ.ಹಾಲೇಶ್, ಡಾ| ಮಹೇಶ್, ಉಪನ್ಯಾಸಕ ಎಚ್.ಮಲ್ಲಿಕಾರ್ಜುನ, ಅರುಣ ಕುಲಕರ್ಣಿ, ರವಿ ಇತರರಿದ್ದರು.