ಹುಮನಾಬಾದ: ಕಠಳ್ಳಿ ವ್ಯಕ್ತಿಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸ್ಥಳೀಯ ಶಾಸಕರ ಸಹೋದರನೊಬ್ಬನನ್ನು ಪೊಲೀಸರು ಬಂಧಿಸಿದ್ದು, ಪಟ್ಟಣದ ವಿವಿಧಡೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಕಳೆದ ಮೇ.31ರಂದು ಕಠಳ್ಳಿ ಗ್ರಾಮದ ಬಸವರಾಜ ಶಿವರಾಜ ಪಾಟೀಲ ಮೇಲೆ ಸ್ಥಳೀಯ ಶಾಸಕ ಸಿದ್ದು ಪಾಟೀಲರ ಸಹೋದರರು ಸೇರಿದಂತೆ ಇತರೆ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆಂದು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ರಾಜಕೀಯ ಸೇರ್ಪಡೆಗೊಂಡಿತ್ತು. ಮಾಜಿ ಶಾಸಕ ರಾಜಶೇಖರ ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೆ ಒಳಗಾದ ವ್ಯಕ್ತಿಯ ಆರೋಗ್ಯ ವಿಚಾರಿಸಿ ತಪ್ಪಿಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದರು. ಅದೇ ಸಂದರ್ಭದಲ್ಲಿ ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿದರು.
ಆದರೆ ಶಾಸಕರ ಇಬ್ಬರು ಸಹೋದರರು ನಾಪತ್ತೆಯಾಗಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯರು ಕೂಡಲೇ ಕಾನೂನು ಅಡಿಯಲ್ಲಿ ಸಂತೋಷ ಪಾಟೀಲ, ಕಾಳಪ್ಪ (ಸುನೀಲ್) ಪಾಟೀಲ ಬಂಧಿಸಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಅಲ್ಲದೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ,ಎಸ್ ನ್ಯಾಮಗೌಡರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ವಿವಿಧಡೆ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು ಮಹಾರಾಷ್ಟ್ರದ ತ್ರಿಂಬಕೇಶ್ವರದಲ್ಲಿ ಕಾಳಪ್ಪ (ಸುನೀಲ್) ಪಾಟೀಲ ಬಂಧಿಸಿದ್ದಾರೆ. ಪ್ರಕರಣದ ನಂತರ ಸಂಚಾರ ಆರಂಭಿಸಿದ ಕಾಳಪ್ಪ ಪಾಟೀಲ ನಿರಂತರ ಹತ್ತು ಸಾವಿರ ಕಿ.ಮೀ ಸಂಚಾರ ನಡೆಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಇನ್ನೊಬ್ಬ ಸಹೋದರ ಸಂತೋಷ ಪಾಟೀಲ ಅವರನ್ನು ಪೊಲೀಸರು ಶೋಧ ನಡೆಸಿದ್ದಾರೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.