ಹುಮನಾಬಾದ್ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿ ಹಾಗೂ ಮಗನನ್ನು ಬಾವಿಗೆ ತಳ್ಳಿದ ಘಟನೆಯೊಂದು ತಾಲೂಕಿನ ಸೋನಕಕೇರಾ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಘಟನೆಯಲ್ಲಿ ಸೋನಕೇರಾ ಗ್ರಾಮದ ಗೀತಾ (30) ಹಾಗೂ ಆಕೆಯ ಒಂದುವರೆ ವರ್ಷದ ಮಗ ವಿಶ್ವ ಬಾವಿಯಲ್ಲಿ ಮೃತಪಟ್ಟಿದ್ದಾರೆ. ಮೃತಳ ಗಂಡ ವರಬಟ್ಟಿ(ಬಿ) ಮೂಲದ ಅಂಕುಶ ಪತ್ನಿ-ಮಗುವನ್ನು ಭಾವಿಗೆ ಹಾಕಿ ಕೊಲೆ ಮಾಡಿದ್ದಾನೆಂದು ಆರೋಪಿಸಿ ಕುಟುಂಬಸ್ಥರು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಇವರ ಮದುವೆಯಾಗಿದ್ದು, ಕುಟುಂಬದಲ್ಲಿ ನಿರಂತರ ಕಲಹಗಳು ನಡೆಯುತ್ತಿದ್ದವು. ಮೃತಳ ಗಂಡ ಅಂಕುಶ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕುಟುಂಬದಲ್ಲಿ ಕಲಹಗಳು ಉಂಟಾಗಿದ್ದವು. ಅಲ್ಲದೆ ಈ ಕುರಿತು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ನಂತರ ರಾಜಿ ಸಂಧಾನ ಮಾಡಿಕೊಂಡು ಹೆಂಡತಿಯನ್ನು ಊರಿಗೆ ಕರೆದುಕೊಂಡು ಹೋಗಿದ್ದ ಗಂಡ ಗುರುವಾರ ಬೆಳಿಗ್ಗೆ ಮರಳಿ ಹೆಂಡತಿ ಊರಿಗೆ(ಸೋನಕೇರಾ ಗ್ರಾಮಕ್ಕೆ) ಬಂದಿದ್ದಾರೆ. ಈ ಸಂದರ್ಭದಲ್ಲಿ ಹೆಂಡತಿ ಮಗನೊಂದಿಗೆ ಹೊಲದಲ್ಲಿನ ಬಾವಿ ಕಡೆಗೆ ತೆರಳಿದ್ದು, ಇಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅಂಕುಶ್ ಹೇಳುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಎಸ್ಎಸ್ಎಲ್ ಸಿ ಫಲಿತಾಂಶ: ಕುಮಟಾ ತಾಲೂಕಿನ ಮೂವರು ವಿದ್ಯಾರ್ಥಿಗಳು ಟಾಪರ್
ಸದ್ಯ ಘಟನೆಯ ಕುರಿತು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಂಕುಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.