ಧಾರವಾಡ: ಎಸ್‌ಡಿಎಂ ವಿವಿಯ ಎಸ್‌ಡಿಎಂ ದಂತ ಮಹಾವಿದ್ಯಾಲಯದ 31ನೇ ಘಟಿಕೋತ್ಸವ ಸತ್ತೂರಿನ ಡಾ| ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆಯಿತು. ಆನ್‌ಲೈನ್ ವೇದಿಕೆಯ ಮೂಲಕ ಎಸ್‌ಡಿಎಂ ವಿವಿ ಕುಲಪತಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಅಭ್ಯಾಸ ಮಾಡುವಾಗ ವೈದ್ಯರು ಯಾವಾಗಲೂ ತಮ್ಮ ಸಂಸ್ಕೃತಿ ಮತ್ತು ಉತ್ತಮ ಸಂವಹನವನ್ನು ಅನುಸರಿಸಬೇಕು.
ವೈದ್ಯರ ವಿನಯತೆಯ ಮಾತುಗಳು ರೋಗಿಗಳಿಗೆ ಔಷ ಧಿಗಿಂತ ಉತ್ತಮ ಪರಿಣಾಮಕಾರಿಯಾಗಿರುತ್ತದೆ. ವೈದ್ಯರು ರೋಗಿಗಳಿಗೆ ಪ್ರೀತಿ, ಕಾಳಜಿ ಮತ್ತು ಏಕಾಗ್ರತೆಯಿಂದ ಚಿಕಿತ್ಸೆ ನೀಡಬೇಕು ಎಂದರು.
ಉತ್ತಮ ಶ್ರೇಯಾಂಕಗಳುಳ್ಳ ಸಂಸ್ಥೆಗಳಿಗೆ ಜವಾ ಬ್ದಾರಿಗಳೂ ಹೆಚ್ಚುತ್ತವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮತ್ತು ತರಬೇತಿಯು ಯಾವುದೇ ಸಂಸ್ಥೆಗಳ ಉದ್ದೇಶವಾಗಿರುತ್ತದೆ. ಪದವಿ ಪಡೆದ ವೈದ್ಯರು ನಮ್ಮ ಸಂಸ್ಥೆ ಮತ್ತು ಸಮಾಜದ ನಡುವೆ ರಾಯಭಾರಿಯಾಗಿ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ವೃತ್ತಿಯ ಉತ್ತುಂಗವನ್ನು ತಲುಪಿದಾಗ ತಮ್ಮ ಜವಾಬ್ದಾರಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕವಿವಿ ಕುಲಪತಿ ಡಾ| ಕೆ.ಬಿ. ಗುಡಸಿ ಮಾತನಾಡಿ, ಪದವೀಧರರು ಯಾವಾಗಲು ತಮ್ಮ ಶಿಕ್ಷಕರಿಗೆ ಮತ್ತು ಪೋಷಕರಿಗೆ ಕೃತಜ್ಞರಾಗಿರಬೇಕು. ಎಸ್‌ಡಿಎಂ ದಂತ ಮಹಾವಿದ್ಯಾಲಯ ಕಳೆದ ಮೂರು ದಶಕಗಳಿಂದ ಉತ್ತಮ ದಂತ ವೈದ್ಯರನ್ನು ದೇಶಕ್ಕೆ ನೀಡುತ್ತಾ ಬಂದಿದೆ. ಎಸ್‌ಡಿಎಂ ದಂತ ವೈದ್ಯರು ಬಾಯಿಯ ಆರೋಗ್ಯದ ಕುರಿತು ಈ ಭಾಗದ ಜನರಿಗೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿಯ ಉಪಕುಲಪತಿ ಡಾ| ನಿರಂಜನಕುಮಾರ ಮಾತನಾಡಿ, ವೈದ್ಯರು ಭಯವಿಲ್ಲದೆ ತಮ್ಮ ವೃತ್ತಿಯನ್ನು ನಿರ್ವಹಿಸಬೇಕು. ಯಾವುದೇ ವೃತ್ತಿ ಆಯ್ಕೆ ಮಾಡುವಾಗ ಆಲೋಚಿಸಬೇಕು. ಆಯ್ಕೆಯ ನಂತರ ತಿರುಗಿ ನೋಡಬಾರದು. ವೈದ್ಯರು ತಮ್ಮ ರೋಗಿಗಳಿಗೆ ಲಭ್ಯವಿರುವುದಲ್ಲದೆ, ನಿಷ್ಠೆ ಮತ್ತು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
91 ಪದವಿ (ಬಿಡಿಎಸ್) ಮತ್ತು 41 ಸ್ನಾತಕೋತ್ತರ (ಎಂಡಿಎಸ್) ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಬಲರಾಮ ನಾಯ್ಕ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಡಾ| ಕಿರಣ ಕುಮಾರ, ಡಾ| ಕೃತಿಕಾ ಗುತ್ತಲ್ ಮತ್ತು ಡಾ|ಗೌರಿ ಆನೆಹೊಸೂರ ಪರಿಚಯಿಸಿದರು. ಡಾ| ಮಹಾಂತೇಶ ಯೆಲ್ಲಿ ಮತ್ತು ಡಾ| ಸತ್ಯಬೊಧ ಗುತ್ತಲ್ ಪಿಎಚ್‌ಡಿ ಮತ್ತು ಚಿನ್ನದ ಪದಕ ವಿಜೇತರನ್ನು ಪರಿಚಯಿಸಿದರು. 10 ಚಿನ್ನದ ಪದಕ ವಿಜೇತರನ್ನು ಅತಿಥಿಗಳು ಸನ್ಮಾನಿಸಿದರು.
ಡಾ| ಐಶ್ವರ್ಯ ನಾಯಕ ಮತ್ತು ಡಾ| ಮಿಹಿರ್ ಕುಲಕರ್ಣಿ ನಿರೂಪಿಸಿದರು. ಡಾ|ರಮೇಶ ನಾಡಿಗೇರ ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ಡಾ| ಶೃತಿ ವಿಶ್ವಕರ್ಮ ಮತ್ತು ಡಾ| ಉಜ್ಜಾ ಅನಿಸಿಕೆ ಹಂಚಿಕೊಂಡರು. ಉಪ ಪ್ರಾಂಶುಪಾಲರಾದ ಡಾ| ಲೇಖಾ ಪಿ. ವಂದಿಸಿದರು.