ಮಣಿಪಾಲ: ಭಾರತ ಸೇರಿದಂತೆ ಕೋವಿಡ್ 19 ಸೋಂಕು ಜಗತ್ತಿನಾದ್ಯಂತ ಅಪಾರ ಪ್ರಮಾಣದ ಸಾವು, ನೋವು ಸಂಭವಿಸಲು ಕಾರಣವಾಗಿದ್ದು, ಏತನ್ಮಧ್ಯೆ ಬ್ಲ್ಯಾಕ್ ಫಂಗಸ್( ಮ್ಯೂಕೋರ್ ಮೈಕೋಸಿಸ್) ಎಂಬ ಸಾಂಕ್ರಾಮಿಕ ರೋಗ ಕೂಡಾ ಪತ್ತೆಯಾಗಿದೆ. ಅಪರೂಪದ ಬ್ಲ್ಯಾಕ್ ಫಂಗಸ್ ಗೆ ಅಗತ್ಯವಿರುವ ಲೊಫೋಸೋಮಲ್ ಆ್ಯಂಪೊಟೆರಿಸಿನ್ ಬಿ ಔಷಧದ ಕೊರತೆಯಿಂದ ಹಲವಾರು ಮಂದಿ ಸಾವನ್ನಪ್ಪುವಂತಾಗಿದೆ.
ಬ್ಲ್ಯಾಕ್ ಫಂಗಸ್ ಔಷಧದ ಸಂಶೋಧಕ ಗಂಗೊಳ್ಳಿಯ ಶ್ರೀಕಾಂತ್ ಎ ಪೈ!
ಮಾರಕ ಬ್ಲ್ಯಾಕ್ ಫಂಗಸ್ ಗೆ ಲೊಫೊಸೋಮಲ್ ಆ್ಯಂಪೊಟೆರಿಸಿನ್ ಬಿ ಔಷಧವನ್ನು ದೇಶಾದ್ಯಂತ ಬಳಸಲಾಗುತ್ತಿದೆ. ಆದರೆ ಈ ಔಷಧವನ್ನು ಭಾರತದಲ್ಲಿ 2010-11ನೇ ಸಾಲಿನಲ್ಲಿ ಅಭಿವೃದ್ಧಿಪಡಿಸಿದವರು ಕುಂದಾಪುರ ತಾಲೂಕಿನ ಗಂಗೊಳ್ಳಿ ಮೂಲದ ಶ್ರೀಕಾಂತ್ ಅಣ್ಣಪ್ಪ ಪೈ.
ಮುಂಬೈನ ಭಾರತ್ ಸೀರಮ್ಸ್ ಹಾಗೂ ವ್ಯಾಕ್ಸಿನ್ ಲಿಮಿಟೆಡ್ ಕಂಪೆನಿಯ ಸಂಶೋಧನಾ ಮತ್ತು ಅಭಿವೃದ್ಧಿ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರ ಜೀವ ಉಳಿಸುವ ಕಾರ್ಯದಲ್ಲಿ ಲೊಫೊಸೋಮಲ್ ಆ್ಯಂಪೊಟೆರಿಸಿನ್ ಬಿ ಔಷಧ ಪ್ರಮುಖ ಪಾತ್ರವಹಿಸಿದೆ. ಇದು ಕರಾವಳಿ ಕನ್ನಡಿಗನ ಹೆಮ್ಮೆಯ ಸಾಧನೆ ಎಂದು ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂಬುದಾಗಿ ವರದಿ ತಿಳಿಸಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕರಾವಳಿ ಪ್ರದೇಶವಾದ ಗಂಗೊಳ್ಳಿ ಶ್ರೀಕಾಂತ್ ಅಣ್ಣಪ್ಪ ಪೈ ಅವರ ಹುಟ್ಟೂರಾಗಿದೆ. ಗಂಗೊಳ್ಳಿ, ಕುಂದಾಪುರದಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪೂರೈಸಿದ್ದ ಶ್ರೀಕಾಂತ್ ಪೈ ಅವರು ಬೆಂಗಳೂರಿನಲ್ಲಿ ಫಾರ್ಮಸಿ ಶಿಕ್ಷಣ ಪಡೆದುಕೊಂಡು, ನಂತರ ಮಣಿಪಾಲದಲ್ಲಿ ಸ್ನಾತಕೋತ್ತರ ಪಡೆದಿದ್ದರು.
ಬಳಿಕ ಮುಂಬೈಗೆ ತೆರಳಿದ ಶ್ರೀಕಾಂತ್ ಪೈ ಅವರು ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದರು. ಹಲವಾರು ಸಂದರ್ಶನಕ್ಕೆ ಹೋಗಿ, ಕೊನೆಗೆ ಭಾರತ್ ಸೀರಮ್ಸ್ ನಲ್ಲಿ ಉದ್ಯೋಗ ದೊರಕಿರುವುದಾಗಿ ಶ್ರೀಕಾಂತ್ ಪೈ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.