ಹೊಸದಿಲ್ಲಿ : ಟಿವಿ ಚ್ಯಾಟ್ ಶೋ ನಲ್ಲಿ ಸೆಕ್ಸಿಸ್ಟ್ ಹೇಳಿಕೆ ನೀಡಿದ್ದಕ್ಕೆ ಬಿಸಿಸಿಐ ನಿಂದ ಕಠಿನ ಶಿಸ್ತು ಕ್ರಮಕ್ಕೆ ಗುರಿಯಾಗಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರ ಬೆಂಬಲಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನಿಂತಿದ್ದಾರೆ.
‘ಪ್ರತಿಯೋರ್ವರೂ ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡೇ ಮಾಡ್ತಾರೆ; ಹಾಗೆಂದು ನಾವು ಅಲ್ಲೇ ಉಳಿದಿರಲು ಸಾಧ್ಯವಿಲ್ಲ; ಮುಂದಕ್ಕೆ ಸಾಗುವುದೇ ಜೀವನ; ಆದರೆ ಒಮ್ಮೆ ಮಾಡಿದ ತಪ್ಪನ್ನು ಪುನಃ ಮಾಡದಿರುವುದೇ ಜೀವನದಲ್ಲಿ ಮುಖ್ಯ’ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
‘ನಾಯಕ ವಿರಾಟ್ ಕೊಹ್ಲಿ ಅವರ ಹಾಗೆ ಭಾರತೀಯ ಕ್ರಿಕೆಟ್ ತಂಡದ ಇತರ ಸದಸ್ಯರು ರೋಲ್ ಮಾಡೆಲ್ ಆಗಿರುತ್ತಾರೆ. ಪಾಂಡ್ಯಾ ಮತ್ತು ರಾಹುಲ್ ಕೂಡ ಪ್ರತಿಭಾವಂತ ಕ್ರಿಕೆಟಿಗರು; ಅಂಗಣದಲ್ಲಿ ಸದಾ ಉತ್ತಮ ನಿರ್ವಹಣೆಯನ್ನು ತೋರುವ ಒತ್ತಡ ಅವರ ಮೇಲೆ ಇದ್ದೇ ಇರುತ್ತದೆ. ಮನುಷ್ಯರಾದವರು ತಪ್ಪು ಮಾಡೇ ಮಾಡ್ತಾರೆ ಎಂಬುದನ್ನು ನಾವು ಮರೆಯಬಾರದು; ಆದರೆ ತಪ್ಪನ್ನು ಸರಿಪಡಿಸಿಕೊಂಡು ಮುಂದು ಪುನಃ ಅದು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಗಂಗೂಲಿ ಹೇಳಿದರು.
ಹಿಂದಿನ ತಲೆಮಾರಿನ ಕ್ರಿಕೆಟಿಗರ ಹಾಗೆ ಇಂದಿನ ತಲೆಮಾರಿನ ಯುವ ಕ್ರಿಕೆಟಿಗರು ಜವಾಬ್ದಾರಿಯುತ ವರ್ತನೆ ತೋರುತ್ತಿಲ್ಲ ಎಂದು ನೀವು ಭಾವಿಸುವಿರಾ ? ಎಂಬ ಮಾಧ್ಯಮದ ಪ್ರಶ್ನೆಗೆ ಗಂಗೂಲಿ ಉತ್ತರಿಸಿದ್ದು ಹೀಗೆ :
‘ಈಗಿನ ಕಾಲದ ಕ್ರಿಕೆಟಿಗರು ಕೂಡ ಜವಾಬ್ದಾರಿಯಿಂದ, ಶಿಸ್ತಿನಿಂದ ಮತ್ತು ವಿಧೇಯತೆಯಿಂದ ವರ್ತಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಬದುಕಿನಲ್ಲಿ ಕೆಲವೊಂದು ಘಟನೆಗಳು ಘಟಿಸುತ್ತವೆ; ತಪ್ಪುಗಳಾಗುತ್ತವೆ; ಆದರೆ ಅದನ್ನೇ ಹಿಡಿದುಕೊಂಡು ನಾವು ಬಹುದೂರ ಸಾಗಬೇಕಾಗಿಲ್ಲ; ವಿರಾಟ್ ಕೊಹ್ಲಿಯಂತಹ ಅದ್ಭುತ ರೋಲ್ ಮಾಡೆಲ್‌ಗಳನ್ನು ಹೊಂದಿರುವ ಭಾರತ ನಿಜಕ್ಕೂ ಅದೃಷ್ಟಶಾಲಿ ದೇಶ. ಪ್ರತಿಯೊಂದು ತಲೆಮಾರು ಎಲ್ಲರೂ ಇಷ್ಟಪಡುವ, ಹೆಮ್ಮೆ ಪಡುವ ಆಟಗಾರರನ್ನು ಕೊಟ್ಟಿದೆ; ಕೊಡುತ್ತಿದೆ.