Advertisement

ಮಾನವತೆಯ ಹಣತೆ ಬೆಳಗುತ್ತಲೇ ಇರಲಿ

03:12 PM Feb 04, 2017 | |

ಬೆಂಗಳೂರು ಎಂದರೆ ಗೊಂದಲ ಗೋಜಲು, ವಾಹನಗಳ ದಟ್ಟಣೆ ಧೂಳು,ಬೆಳಗಾಗುತ್ತಿದ್ದಂತೆ ತುಂಬಿ ತುಳುಕುವ ಬಿಎಂಟಿಸಿ ಬಸ್‌, ಮೂಗಿಗೆ ಅಡರುವ ಕಸದ ದುರ್ವಾಸನೆ, ಕತ್ತಲಾಗುತ್ತಿದ್ದಂತೆ ಆವರಿಸುವ ಅಸುರಕ್ಷತೆಯ ಕರಿನೆರಳು, ಶೂಟೌಟ್‌…!ಇದು ಆಗಾಗ್ಗೆ ಕೇಳಿಬರುವ ಹಲವರ ಗೊಣಗು.
ಹಾಗಾದರೆ, ಬೆಂಗಳೂರು ಎಂದರೆ ಇಷ್ಟೇನಾ? 
 ಅಲ್ಲ, ಇದರಾಚೆಗೆ ನಗರಕ್ಕೆ ಮತ್ತೂಂದು ಮುಖವೂ ಇದೆ. ಅದು ಮಾನವೀಯ ಸೆಲೆ.  
ಹೌದು, ತಮ್ಮೆಲ್ಲ ಜಂಜಾಟಗಳ ನಡುವೆಯೂ ಮತ್ತೂಬ್ಬರ ನೋವು ಸಮಸ್ಯೆಗಳಿಗೆ ಸ್ಪಂದಿಸುವ ಗುಣವೂ ಬೆಂಗಳೂರಿನ ಜನರಿಗಿದೆ. ಕಳೆದ ಒಂದು ವಾರದಲ್ಲಿ ನಡೆದ ಎರಡು ಮನಕಲಕುವ ಘಟನೆಗಳೇ ನಗರದ ಆ ಮಾನವೀಯ ಮುಖವನ್ನು ತೆರೆದಿಡುತ್ತವೆ. 

Advertisement

ಘಟನೆ 1
ನಿರ್ಮಲಾ ಎಂಬುವರು ರಾತ್ರಿ 8.30ರ ಸುಮಾರಿಗೆ ಜೆ.ಸಿ. ನಗರದ ಟಿವಿ ಟವರ್‌ ಬಳಿ ಪೆಟ್ರೋಲ… ಖಾಲಿಯಾಗಿದ್ದರಿಂದ ದ್ವಿಚಕ್ರ ವಾಹನದೊಂದಿಗೆ ನಿಂತಿದ್ದರು. ಈ ವೇಳೆ ಆ ರಸ್ತೆಯಲ್ಲಿ ಹೆಚ್ಚು ಜನ ಸಂಚಾರ ಕೂಡ ಇರಲಿಲ್ಲ. ಸುತ್ತಮುತ್ತ ಪೆಟ್ರೋಲ… ಬಂಕ್‌ಗಳು ಕೂಡ ಇರಲಿಲ್ಲ. ಈ ವೇಳೆ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಎಎಸ್‌ಐ ನಾರಾಯಣ, “ಈ ಹೊತ್ತಿನಲ್ಲಿ ಇಂತಹ ಜಾಗದಲ್ಲಿ ಒಂಟಿಯಾಗಿ ನಿಲ್ಲುವುದು ಸರಿಯಿಲ್ಲ ಮತ್ತು ಸುರಕ್ಷಿತವಲ್ಲ’ ಎಂದು ಹೇಳಿ, ತಮ್ಮ ದ್ವಿಚಕ್ರ ವಾಹನವನ್ನು ನಿರ್ಮಲಾ ಅವರಿಗೆ ಕೊಟ್ಟಿದ್ದಾರೆ. ನಂತರ ನಿರ್ಮಲಾ ಅವರ ವಾಹನವನ್ನು ತಳ್ಳಿಕೊಂಡು ಮೇಕ್ರಿ ವೃತ್ತಕ್ಕೆ ಬರುತ್ತಾರೆ. ಕೆಲ ನಿಮಿಷದ ಬಳಿಕ ನಿರ್ಮಲಾ ಅವರ ಪತಿ ಪೆಟ್ರೋಲ ತೆಗೆದುಕೊಂಡು ಬಂದಿದ್ದಾರೆ. 

ನಂತರ ನಿರ್ಮಲಾ, ಘಟನೆಯ ವಿವರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಸಚಿವರು, ಮಹಿಳಾ ಆಯೋಗದ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.  

ಘಟನೆ2
ಇದೇ ರೀತಿ ಬುಧವಾರ ಟ್ರಿನಿಟಿ ವೃತ್ತದಲ್ಲಿ ನಡೆದ ಘಟನೆಯಲ್ಲಿ ನಡುರಸ್ತೆಯಲ್ಲಿ ಕೆಟ್ಟು ನಿಂತಿದ್ದ ಕಾರಿನಿಂದ ಗರ್ಭಿಣಿಯೊಬ್ಬರನ್ನು ಹಲಸೂರು ಸಂಚಾರ ಠಾಣೆ ಎಎಸ್‌ ಅರಸಯ್ಯ ತಮ್ಮ ವಾಹನದಲ್ಲಿ ಸುರಕ್ಷಿತವಾಗಿ ಮನೆ ತಲುಪಿಸಿದ್ದಾರೆ.  

ರಾಜಾಜಿನಗರದ ಕೆ.ಡಿ. ಭುವನಾ, ಪತಿಯೊಂದಿಗೆ ಟ್ರಿನಿಟಿ ವೃತ್ತದ ಮಾರ್ಗದಲ್ಲಿ ಹೋಗುವಾಗ ಅವರ ಕಾರು ಕೆಟ್ಟು ನಿಂತಿತು. ಇದರಿಂದ ವಿಪರೀತ ಸಂಚಾರದಟ್ಟಣೆ ಉಂಟಾಯಿತು. ಇದನ್ನು ಗಮನಿಸಿ ಸ್ಥಳಕ್ಕೆ ಧಾವಿಸಿದ ಅರಸಯ್ಯ ಅವರಿಗೆ, ಕಾರಿನಲ್ಲಿ ವಿಚಲಿತರಾಗಿ ಕುಳಿತಿದ್ದ ದಂಪತಿಯಲ್ಲಿ ತನ್ನ ಮಗ ಮತ್ತು ಸೊಸೆಯನ್ನು ಕಂಡರು. ತಕ್ಷಣ ಆ ಕಾರನ್ನು ಪಕ್ಕದಲ್ಲಿದ್ದ ಮಿಲಿಟರಿ ಕ್ಯಾಂಟೀನ್‌ವರೆಗೆ ತಳ್ಳಿದರು. ಅಷ್ಟೇ ಅಲ್ಲ, ನಂತರ ಟೋಯಿಂಗ್‌ ವಾಹನಕ್ಕೆ ಕರೆ ಮಾಡಿದರು. ಅದು ಬಾರದಿದ್ದಾಗ, ಸ್ವತಃ ತಮ್ಮ ವಾಹನದಲ್ಲಿ ಭುವನಾ ಅವರನ್ನು ಮನೆಗೆ ತಲುಪಿಸಿದರು. ಭುವನಾ ಪತಿ ಕಾರನ್ನು ಸರ್ವಿಸ್‌ ಸೆಂಟರ್‌ಗೆ ತೆಗೆದುಕೊಂಡು ಹೋದರು. 

Advertisement

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅರಸಯ್ಯ, “ಅಕಸ್ಮಾತ್‌ ನನ್ನ ಮಗಳುಧಿ ಅಳಿಯನಿಗೆ ಇಂತಹ ಕಷ್ಟ ಬಂದಿದ್ದರೆ?’ ಅನ್ನಿಸಿತು. ತಕ್ಷಣ ಅವರಿಗೆ ಸಹಾಯ ಮಾಡಲು ನಿರ್ಧರಿಸಿದೆ’ ಎಂದೂ ಹೇಳಿದರು. ಈ ಘಟನೆಯನ್ನೂ ಭುವನಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ಅರಸಯ್ಯ ಅವರ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. 

ಇಂತಹ ಹೃದ್ಯ ಘಟನೆಗಳಿಗೆ ಬೆಂಗಳೂರು ಮತ್ತೆ ಮತ್ತೆ ಸಾಕ್ಷಿಯಾಗುತ್ತಿರಲಿ, ಐ ಲವ್‌ ಯೂ ಬೆಂಗಳೂರು ಎಂದು ಸಂಭ್ರಮದಿಂದ ಹೇಳಲು ಕಾರಣಗಳು ಸಿಗುತ್ತಲೇ ಇರಲಿ.

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next