Advertisement

ನೈತಿಕತೆಗಿಂತಲೂ ಮಾನವೀಯತೆ ಮುಖ್ಯ: ಸದ್ಗುರು

12:30 PM Apr 23, 2017 | Team Udayavani |

ಬೆಂಗಳೂರು: ನೈತಿಕತೆ ಮತ್ತು ಸಮಗ್ರತೆಗಿಂತಲೂ ಮಾನವೀಯತೆ ಮುಖ್ಯ. ಜನರಿಗೆ ಅಗತ್ಯತೆಗಳು ಅಗತ್ಯವಾದಷ್ಟು ಸುಲಭವಾಗಿ ಸಿಗುವಂತಾದರೆ ಎಲ್ಲರೂ ನಾಗರಿಕತೆಯನ್ನು ಪಾಲಿಸುತ್ತಾರೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಅವರು ಅಭಿಪ್ರಾಯಪಟ್ಟಿದ್ದಾರೆ. 

Advertisement

ನಗರದ ವೈಟ್‌ಫೀಲ್ಡ್‌ನಲ್ಲಿರುವ ಕರ್ನಾಟಕ ಟ್ರೇಡ್‌ ಪ್ರೊಮೋಷನ್‌ ಆರ್ಗನೈಸೇಷನ್‌ (ಕೆಟಿಪಿಒ) ಕೇಂದ್ರದಲ್ಲಿ ಶನಿವಾರ ನಡೆದ “ಕನ್‌ವರ್ಶೇಷನ್‌ ವಿತ್‌ ದಿ ಮಿಸ್ಟಿಕ್‌’ ಕಾರ್ಯಕ್ರಮದಡಿ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ನಡೆಸಿಕೊಟ್ಟ ಸಂವಾದದಲ್ಲಿ ಸದ್ಗುರು ಹೀಗೆ ಪ್ರತಿಕ್ರಿಯಿಸಿದರು.

“ನಾವು ಮೊದಲು ಮಾನವರಾಗಬೇಕು. ಮಾನವೀತೆಯಿಧಿಲ್ಲದಿದ್ದರೆ ನೈತಿಕತೆ, ಸಮಗ್ರತೆ ಪರಿಣಾಮಕಾರಿಯಾಗದು. ಅದನ್ನು ಬಿಟ್ಟು, ತಮ್ಮ ಕುಟುಂಬವೇ ವಿಶ್ವ ಎಂಬ ಭಾವನೆ ಸರಿಯಲ್ಲ. ಸಮಸ್ಯೆಗಳನ್ನು ಸರಳವಾಗಿ ಬಿಡಿಸಿಧಿಕೊಳ್ಳುವತ್ತ ಚಿಂತನೆ ನಡೆಸಿದರೆ ಪರಿಹಾರ ಸಾಧ್ಯ. ಸಂಕೀರ್ಣ ಮಾಡಿಕೊಂಡರೆ ಜಟಿಲವಾಗುತ್ತದೆ,’ ಎಂದು ಅಭಿಪ್ರಾಯಪಟ್ಟರು. 

ಹೆಣ್ಣು- ಗಂಡು ಎಂಬ ಲಿಂಗ ತಾರತಮ್ಯದ ಬಗೆಗಿನ ಪೂರ್ವಗ್ರಹಪೀಡಿತ ಭಾವನೆ ತೊಲಗಿಸಲು ಯಾವ ಸಂದೇಶ ನೀಡುವಿರಿ ಎಂದು ಪ್ರಶ್ನೆಗೆ, “ಒಂದು ಮಗುವಿಗೆ ಜನ್ಮ ನೀಡುವ ಹೆಣ್ಣನ್ನು ಕಡೆಗಣಿಸಲು ಸಾಧ್ಯವೇ. ಆಕೆಯ ವಿಚಾರದಲ್ಲಿ ತಾರತಮ್ಯ ತೋರುವುದು ತರವಲ್ಲ. ಕೃಷಿಯೇ ಪ್ರಧಾನವಾಗಿರುವ ಈ ರಾಷ್ಟ್ರದಲ್ಲಿ ದುಡಿಮೆ ಮತ್ತಿತರ ಕಾರಣಕ್ಕೆ ಜನ ಗಂಡು ಮಗುವನ್ನು ಬಯಸುತ್ತಿದ್ದರು. ಆದರೆ ಕಾಲ ಬದಲಾಗಿದೆ. ಹೆಣ್ಣಿಗೆ ಸೂಕ್ತ ಶಿಕ್ಷಣ ನೀಡಿದರೆ, ದೌರ್ಜನ್ಯ ನಿಲ್ಲಿಸಿದರೆ ಪುರುಷರಷ್ಟೇ ಸಮಾನರಾಗಿ,” ನಿಲ್ಲುತ್ತಾರೆ ಎಂದರು. 

ಆಧುನಿಕ ವಿಜ್ಞಾನದ ನೈತಿಕ ಅಂಶಗಳ ಬಗ್ಗೆ ಕಿರಣ್‌ ಮಜುಂದಾರ್‌ ಶಾ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಸದ್ಗುರು, “ಪ್ರತಿ ಹೊಸತು, ಬದಲಾವಣೆಗೆ ಆರಂಭದಲ್ಲಿ ವಿರೋಧ ಸಹಜ. ಆದರೆ ಸುಧಾರಿತ ತಂತಜ್ಞಾನದ ಹೆಸರಿನಲ್ಲಿ ವಾಣಿಜ್ಯ ಉದ್ದೇಶದ ಯೋಜನೆಗಳನ್ನು ಹೇರುವುದು ಸರಿಯಲ್ಲ.

Advertisement

ದೇಶದಲ್ಲಿ ಬಹಳ ಹಿಂದಿನಿಂದಲೂ ರೈತರು ನೈಸರ್ಗಿಕ ವಿಧಾನದಡಿ ಕೃಷಿ ನಡೆಸುತ್ತ ಜನರಿಗೆ ಬೇಕಾದಷ್ಟು ಆಹಾರ ಬೆಳೆಯುತ್ತಿದ್ದಾರೆ. ಆದರೆ ಕುಲಾಂತರಿ ಬೆಳೆಗಳು ತಾತ್ಕಾಲಿಕ ಕ್ರಮವಷ್ಟೇ. ಅದನ್ನು ಮುಂದುವರಿಸಿದರೆ ನೈಸರ್ಗಿಕ ಪದ್ಧತಿ ನಾಶವಾಗುವ ಅಪಾಯವಿದೆ,’ ಎಂದು ತಿಳಿಸಿದರು.

ಜಗತ್ತಿನ ಕೆಲ ರಾಷ್ಟ್ರಗಳಲ್ಲಿ ವರ್ಷದ 12 ತಿಂಗಳು ಕೃಷಿ ಮಾಡಿ ನಾಲ್ಕು ಬೆಳೆ ಬೆಳೆಯಬಹುದು. ಆದರೆ ಭೂಮಿ ಹಾಳಾಗುತ್ತಿದೆ. ಹಾಗೆಯೇ ದನಕರುಗಳ ಮಾಂಸ ಮಾರಾಟ ಮಾಡುವ ಮೂಲಕ ಮಣ್ಣಿನ ಫ‌ಲವತ್ತತೆಯನ್ನೇ ಸಾಗಿಸುತ್ತಿರುವಂತಾಗಿದೆ. ಏಕೆಂದರೆ ಜಾನುವಾರುಗಳ ಗಂಜಲ, ಸಗಣಿಯು ಭೂಮಿಯ ಫ‌ಲವತ್ತತೆ ವೃದ್ಧಿಗೆ ಸಹಕಾರಿಯಾಗಿದೆ. ಮರ, ಪ್ರಾಣಿ ಎಲ್ಲವನ್ನೂ ನಾಶಪಡಿಸಿದರೆ ಮುಂದೇನು,’ ಎಂದು ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ “ಆಸೆ ಪಡು ಸಾಧಿಸು’ ಹಾಗೂ “ಆದಿಯೋಗಿ’ ಕೃತಿ ಬಿಡುಗಡೆಗೊಳಿಸಲಾಯಿತು. 

ಜನಸಂಖ್ಯೆ ನಿಯಂತ್ರಣ ಅಗತ್ಯ: ಬೆಂಗಳೂರಿನಲ್ಲಿ ಸ್ವತ್ಛತೆ, ನೈರ್ಮಲ್ಯ ಕಾಣದಿರುವುದು ಹಾಗೂ ನಾಗರಿಕ ಪ್ರಜ್ಞೆಯೂ ಕಡಿಮೆಯಿರುವ ಬಗ್ಗೆ ಕಿರಣ್‌ ಮಜುಂದಾರ್‌ ಶಾ ಅವರ ಪ್ರಶ್ನೆಗೆ ಉತ್ತರಿಸಿದ ಸದ್ಗುರು, “ಎಲ್ಲರಿಗೂ ಅಗತ್ಯ ವಾದಷ್ಟು ಸುಲಭವಾಗಿ ಲಭ್ಯವಾಗುವಂತಿದ್ದರೆ ನಾಗರಿಕತೆ ಪ್ರಜ್ಞೆ ತಾನಾಗಿಯೇ ಮೂಡುತ್ತದೆ. ದೇಶದ ಜನಸಂಖ್ಯೆ 70 ವರ್ಷಗಳಲ್ಲಿ 4 ಪಟ್ಟು ಹೆಚ್ಚಾಗಿದೆ. ಪಾರ್ಕಿಂಗ್‌ ಸಮಸ್ಯೆ, ತ್ಯಾಜ್ಯ ಸಮಸ್ಯೆ, ಆರೋಗ್ಯ ಸಮಸ್ಯೆ ನಿವಾರಣೆಗಿಂತ ಮುಖ್ಯವಾಗಿ ಜನಸಂಖ್ಯೆ ನಿಯಂತ್ರಿಸಬೇಕಿದೆ,’ ಎಂದು ಹೇಳಿದರು.

ಕಾವೇರಿ ಸೊರಗುತ್ತಿದೆ
ಬೆಂಗಳೂರಿನಲ್ಲಿ ಯಾವುದೇ ನದಿಯಿಲ್ಲದ್ದರೂ ನಗರ ನಿರ್ಮಿಸಲಾಗಿದೆ. ಹಾಗಾಗಿ ಕಾವೇರಿ ನದಿಯಿಂದ ನೀರು ಪೂರೈಸಲಾಗುತ್ತದೆ. ನೀರಿನ ವಿಚಾರವಾಗಿ ಕರ್ನಾಟಕ- ತಮಿಳುನಾಡಿನ ನಡುವೆ ಯುದ್ಧವೆಂಬಂತೆ ಸಂಘರ್ಷ ನಡೆಯುತ್ತಿದೆ. ಕಾವೇರಿ ನದಿಯ 72 ಉಪನದಿಗಳಲ್ಲಿ 20 ಉಪನದಿ ನಾಶವಾಗಿದ್ದು, ಉಳಿದ 50 ಉಪನದಿಗಳನ್ನಾದರೂ ಸಂರಕ್ಷಿಸಬೇಕಿದೆ.

ನದಿಗಳ ಎರಡೂ ಬದಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಹಸಿರು ವಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ಸೂಕ್ತ ನೀತಿ ರೂಪಿಸುವಂತೆ 16 ರಾಜ್ಯಗಳ ಸಿಎಂಗಳ ಜತೆ ಚರ್ಚಿಸಿ ಬಳಿಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next