ಚಿತ್ರದುರ್ಗ: ಯಾವುದೇ ಒಂದು ಜಾತಿ ಧರ್ಮಕ್ಕಿಂತ ತ್ಯಾಗ, ಕರುಣೆ, ಅನುಕಂಪ, ಮಾನವೀಯತೆ ದೊಡ್ಡದು ಎಂದು ಲೇಖಕ ಎಚ್.ಆನಂದಕುಮಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ನಿರ್ಗತಿಕರ ಮತ್ತು ಮಕ್ಕಳ ಹಿತರಕ್ಷಣಾ ಸಮಿತಿ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂದಿದ್ದ ಬಡ ಕುಟುಂಬಗಳಿಗೆ ಉಚಿತ ಕುಟುಂಬ ಉಳಿತಾಯ ಸೇವಾ ಕಾರ್ಡ್ ವಿತರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದಡಿ ಪ್ರತಿಯೊಬ್ಬರಿಗೂ ಮೂಲ ಸೌಲಭ್ಯ ಸಿಗಬೇಕು. ಆದರೆ ಈಗ ಹೋರಾಟದ ಮೂಲಕ ಹಕ್ಕು ಪಡೆಯಬೇಕಾಗಿದೆ. ಬಡತನದಿಂದ ಹೊರಗೆ ಬರಬೇಕಾದರೆ ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಉಚಿತ ಕುಟುಂಬ ಉಳಿತಾಯ ಸೇವಾ ಕಾರ್ಡ್‌ನ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಉಳಿತಾಯ ಕಾರ್ಡ್‌ನಿಂದ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಕಿರಾಣಿ ಅಂಗಡಿ, ಹಾರ್ಡ್‌ವೇರ್, ಹೀಗೆ ಹತ್ತು ಹಲವಾರು ಅಂಗಡಿಗಳಲ್ಲಿ ಶೇ. 2ರಿಂದ 50ರಷ್ಟು ಉಳಿತಾಯವಾಗುತ್ತದೆ. ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್ ಇದಕ್ಕೆ ನೆರವು ನೀಡಿದ್ದಾರೆ. ಕೋವಿಡ್‌ನಂತಹ ಸಂಕಷ್ಟದಲ್ಲಿ ಕರ್ನಾಟಕ ರಾಜ್ಯ ನಿರ್ಗತಿಕರ ಮತ್ತು ಮಕ್ಕಳ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಚ್. ಮಂಜುನಾಥ್ ಜಿಲ್ಲಾಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ರೈಲು ನಿಲ್ದಾಣ, ಬಸ್‌ನಿಲ್ದಾಣ ರಸ್ತೆ ಬದಿಯಲ್ಲಿರುವ ಭಿಕ್ಷುಕರ ಬಳಿ ಹೋಗಿ ಊಟ ಹಾಗೂ ನೀರಿನ ಬಾಟಲ್‌ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ಬಣ್ಣಿಸಿದರು.
ಮಹಾರಾಣಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ಸಂಜೀವಕುಮಾರ್ ಪೋತೆ ಮಾತನಾಡಿ, ಎಲ್ಲಾ ರಂಗದಲ್ಲಿಯೂ ಮಹಿಳೆ ಮುಂದೆ ಬಂದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸಂವಿಧಾನದಲ್ಲಿ ಯಾರೂ ಮೇಲು-ಕೀಳಲ್ಲ. ಎಲ್ಲರಿಗೂ ಸಮಾನ ಅವಕಾಶವಿದೆ. ಬಡತನದ ಕಾರಣವಿಟ್ಟುಕೊಂಡು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ. ಬಡತನದಿಂದ ಹೊರಬರಬೇಕಾದರೆ ಶಿಕ್ಷಣ ಮುಖ್ಯ.
ದುಶ್ಚಟಗಳಿಂದ ದೂರವಿದ್ದು, ದುಡಿದ ಹಣವನ್ನು ಉಳಿಸಿ ಜೀವನ ಮಟ್ಟವನ್ನು ಸುಧಾರಣೆ ಮಾಡಿಕೊಳ್ಳಿ. ಸಂವಿಧಾನವನ್ನು ಪ್ರತಿಯೊಬ್ಬರೂ ಓದಿ ಕಾನೂನು ಅರಿವು ಮೂಡಿಸಿಕೊಳ್ಳುವಂತೆ ಮಹಿಳೆಯರಲ್ಲಿ ಮನವಿ ಮಾಡಿದರು. ನ್ಯಾಯವಾದಿ ಎಚ್.ಒ. ಜಗದೀಶ್ ಗುಂಡೇರಿ ಮಾತನಾಡಿ, ಕೊಳಗೇರಿಯಲ್ಲಿದ್ದೇವೆಂಬ ಕೀಳರಿಮೆ ಬಿಟ್ಟು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ ಎಂದು ತಿಳಿಸಿದರು.
ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಮಮತಾ ನೇರ್ಲಗಿ, ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಚ್. ಮಂಜುನಾಥ್, ಉಪ ತಹಶೀಲ್ದಾರ್ ಲೋಹಿತಾಶ್ವ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಮಾತನಾಡಿದರು.