Advertisement

ಮಾನವೀಯತೆ ಮರೆತ ಜೆಸ್ಕಾಂ ಅಧಿಕಾರಿ

05:23 PM May 05, 2019 | Team Udayavani |

ಕೊಪ್ಪಳ: ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ಇತ್ತೀಚೆಗೆ ಲಾರಿಯಿಂದ ಟಿಸಿ (ವಿದ್ಯುತ್‌ ಪರಿವರ್ತಕ) ಕೆಳಗೆ ಇಳಿಸುವ ವೇಳೆ ಲೈನ್‌ಮನ್‌ ಮೇಲೆ ಬಿದ್ದು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈನ್‌ಮನ್‌ ಚಿಕಿತ್ಸೆಯ ಬಗ್ಗೆ ನಿರ್ಲಕ್ಷ ್ಯ ವಹಿಸಿದ ಜೆಸ್ಕಾಂ ನಡೆ ಖಂಡಿಸಿ ಸಂಬಂಧಿಕರು ಕಚೇರಿ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆ ತಗೆದುಕೊಂಡರು.

Advertisement

ಜೆಸ್ಕಾಂ ಕಚೇರಿಯಲ್ಲಿ ಲೈನ್‌ಮನ್‌ಆಗಿ ಕಾರ್ಯ ನಿರ್ವಹಿಸುತ್ತಿದ್ದ ಚೋಳಪ್ಪ ಅವರು ಇತರೆ ಸಹದ್ಯೋಗಿಗಳೊಂದಿಗೆ ಇತ್ತೀಚೆಗೆ 700 ಕೆಜಿ ಸಾಮರ್ಥ್ಯದ ಟಿಸಿಯನ್ನು ಲಾರಿಯಿಂದ ಕೆಳಗೆ ಇಳಿಸುತ್ತಿದ್ದಾಗ ಆಯ ತಪ್ಪಿ ಟಿಸಿ ಅವರ ಮೇಲೆ ಬಿದ್ದಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಚೋಳಪ್ಪ ಅವರನ್ನು ಅವರ ಸಂಬಂಧಿಗಳೇ ಬೆಂಗಳೂರಿಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಸ್ಕಾಂನ ಯಾವೊಬ್ಬ ಅಧಿಕಾರಿ ಸೌಜನ್ಯಕ್ಕೂ ಲೈನ್‌ಮನ್‌ ಆರೋಗ್ಯ ವಿಚಾರಿಸಿರಲಿಲ್ಲ. ಆಸ್ಪತ್ರೆಗೂ ಭೇಟಿ ನೀಡಿರಲಿಲ್ಲ. ಚಿಕಿತ್ಸೆಯ ಕುರಿತು ಯಾವುದೇ ಸಲಹೆ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಲೈನ್‌ಮನ್‌ ಸಂಬಂಧಿಗಳು ಶುಕ್ರವಾರ ಜೆಸ್ಕಾಂ ಕಚೇರಿಗೆ ಆಗಮಿಸಿ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

700 ಕೆಜಿ ಸಾಮರ್ಥ್ಯದ ಟಿಸಿಯನ್ನು ಲೈನ್‌ಮನ್‌ಗಳಿಂದ ಕೆಳಗೆ ಇಳಿಸಲು ಸಾಧ್ಯವಿದೆಯೇ? ಕ್ರೇನ್‌ ಮೂಲಕ ಇಂತಹ ಸಾಮಗ್ರಿಗಳನ್ನು ಕೆಳಗೆ ಇಳಿಸಬೇಕು. ಮನುಷ್ಯರು ಇಂತಹ ಕೆಲಸ ಮಾಡಲು ಸಾಧ್ಯವೇ? ಜೆಸ್ಕಾಂಗೆ ಇಷ್ಟು ಮುಂಜಾಗೃತಿ ಇಲ್ಲವೇ ? ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಗೊತ್ತಿರಲಿಲ್ಲವೇ? ಜೀವ ಹಾನಿಯಾದರೆ ಯಾರು ಹೊಣೆ? ಜೆಸ್ಕಾಂನಲ್ಲಿ ಈ ರೀತಿ ನಿಯಮ ಇದೆಯೇ ? ಎಂದು ಗಾಯಗೊಂಡ ಲೈನ್‌ಮನ್‌ ಸಂಬಂಧಿಕರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಅಲ್ಲದೇ, ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯೆ ಡಾ| ಮಂಗಳಾ ಅವರ ಸಹೋದರನೇ ಲೈನ್‌ಮನ್‌ ಆಗಿದ್ದರಿಂದ ಅವರೇ ಸ್ವತಃ ಜೆಸ್ಕಾಂ ಕಚೇರಿಗೆ ಆಗಮಿಸಿ ಅಧಿಕಾರಿಗಳ ಕಾರ್ಯ ವೈಖರಿಯನ್ನು ಪ್ರಶ್ನೆ ಮಾಡಿ ತೀವ್ರ ತರಾಟೆ ತಗೆದುಕೊಂಡರು. ಎಸಿ ರೂಂನಲ್ಲಿ ಕುಳಿತರೆ ಲೈನ್‌ಮನ್‌ ಸಮಸ್ಯೆ ಅರ್ಥವಾಗಲ್ಲ. ನನ್ನ ಸಹೋದರ ಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ. ನಿಮ್ಮ ಇಲಾಖೆಯ ಒಬ್ಬ ಅಧಿಕಾರಿಯೂ ಆರೋಗ್ಯ ವಿಚಾರಿಸಿಲ್ಲ. ಆತನ ಸ್ಥಿತಿ ಏನಾಗಿದೆ ಎನ್ನುವುದನ್ನು ಕೇಳಿಲ್ಲ? ನಿಮಗೆ ಮಾನವೀಯತೆ ಇದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಸ್ಕಾಂ ಕಚೇರಿಯ ನಿರ್ಲಕ್ಷ ್ಯದ ವಿರುದ್ಧ ಬೇಸತ್ತ ಅವರ ಸಂಬಂಧಿಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ತಿಳಿಯುವವರೆಗೂ ಇಲ್ಲಿಂದ ತೆರಳಲ್ಲ ಎಂದು ಪಟ್ಟು ಹಿಡಿದರು. ಅಲ್ಲದೇ ಜೆಸ್ಕಾಂ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Advertisement

••ಲಾರಿಯಿಂದ 700 ಕೆಜಿ ಸಾಮರ್ಥ್ಯದ ಟಿಸಿ ಕೆಳಗಿಳಿಸುವಾಗ ನಡೆದ ಅವಘಡ

••ಬೆಂಗಳೂರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಲೈನ್‌ಮನ್‌

••ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಲೈನ್‌ಮನ್‌ ಸಹೋದರಿ

Advertisement

Udayavani is now on Telegram. Click here to join our channel and stay updated with the latest news.

Next