ಮಡಿಕೇರಿ :ಈ ಬಾರಿಯು ತೀವ್ರ ಅತಿವೃಷ್ಟಿಯಿಂದಾಗಿ ಕೃಷಿಕರು ಹಾಗೂ ಕಾರ್ಮಿಕರು ತುಂಬಾ ತೊಂದರೆಗೆ ತುತ್ತಾಗಿದ್ದು, ಸಾಲ ವಸೂಲಾತಿಯಲ್ಲಿ ಸ್ವಲ್ಪ ಮಟ್ಟಿಗಾದರೂ ಮಾನವೀಯತೆ ತೋರಿಸುವಂತೆ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಸಲಹೆ ನೀಡಿದ್ದಾರೆ.
ನಗರದ ಕಾರ್ಪೋರೇಷನ್ ಬ್ಯಾಂಕಿನ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ವಿವಿಧ ಬ್ಯಾಂಕರ್ಗಳ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಕಾಫಿ ಬೆಳೆಗಾರರನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಬ್ಯಾಂಕುಗಳ ಅಧಿಕಾರಿಗಳು ಗ್ರಾಹಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮಾತನಾಡಿ ಬ್ಯಾಂಕುಗಳು ತಾವು ನಿಗದಿಪಡಿಸಿದ ಗುರಿ ತಲುಪುವುದರ ಜೊತೆಗೆ ಕೃಷಿ, ಸಣ್ಣ ಕೈಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ವಿವಿಧ ಇಲಾಖೆಗಳು ಮತ್ತು ಬ್ಯಾಂಕ್‌ಗಳು ಹೊಂದಾಣಿಕೆಯಿಂದ ಸಾಲ ಸೌಲಭ್ಯ ಕಲ್ಪಿಸಲು ಮುಂದಾಗುವಂತೆ ಅವರು ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಅವರು ಮಾತನಾಡಿ ಬ್ಯಾಂಕುಗಳಿಂದ ಗ್ರಾಹಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸಲಾಗಿದೆ ಎಂದು ಹೇಳಿದರು. ನಬಾರ್ಡ್‌ನ ಜಿಲ್ಲಾ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಅವರು ಮಾತನಾಡಿ ಬೆಳೆ ಸಾಲ, ಅಲ್ಪಾವಧಿ ಸಾಲ, ಸಣ್ಣ, ಮಧ್ಯಮ ಉದ್ಯಮಗಳು ಹೀಗೆ ಹಲವು ಕ್ಷೇತ್ರಗಳಿಗೆ ಸಾಲವನ್ನು ನೀಡಲಾಗುತ್ತಿದ್ದು, ಪ್ರಗತಿ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು
ಕಾರ್ಪೋರೇಷನ್ ಬ್ಯಾಂಕಿನ ಮೈಸೂರು ವಲಯದ ಸಿ.ವಿ.ಮಂಜುನಾಥ್, ಬೆಂಗಳೂರು ಆರ್‌ಬಿಐನ ದತ್ತಾತ್ರಿ, ನಬಾರ್ಡ್‌ನ ನೂತನ ಅಧಿಕಾರಿ ಶ್ರೀನಿವಾಸ್ ಹಾಗೂ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಇತರರುಉಪಸ್ಥಿತರಿದ್ದರು.