Advertisement

‘ಮಾನವತಾವಾದಿ ಮಹಾತ್ಮಾ ಗಾಂಧಿ’

02:56 PM Oct 03, 2017 | |

ಪುತ್ತೂರು: ಅಹಿಂಸಾ ತತ್ವದಿಂದ ಬಹಳಷ್ಟನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟ ಮಾನವತಾವಾದಿ ಮಹಾತ್ಮಾ ಗಾಂಧಿ. ಅವರ ತತ್ವ, ರಾಷ್ಟ್ರಕ್ಕಾಗಿ ತ್ಯಾಗವನ್ನು ಅನುಸರಿಸುವ ಪ್ರಜೆಗಳ ಅನಿವಾರ್ಯ ದೇಶಕ್ಕಿದೆ ಎಂದು ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು.

Advertisement

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ನಡೆದ ಮಹಾತ್ಮಾ ಗಾಂಧೀಜಿಯವರ ಜನ್ಮದಿನಾಚರಣೆ ಮತ್ತು ಜಾಗತಿಕ ಅಹಿಂಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಗಾಂಧೀಜಿಯವರು ಇರುತ್ತಿದ್ದರೆ ನಮ್ಮ ನಮ್ಮಲ್ಲೇ ನಡೆಯುತ್ತಿರುವ ಹಿಂಸಾ ಪ್ರವೃತ್ತಿಯನ್ನು ಕಂಡು ಮರುಕ ಪಡುತ್ತಿದ್ದರು ಎಂದು ಹೇಳಿದ ಶಾಸಕರು, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಗಾಂಧೀಜಿಯವರ ಆದರ್ಶ ನಮ್ಮಲ್ಲಿ ಒಂದಷ್ಟಾದರೂ ಇರಬೇಕು. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ, ಸಮಾನತೆಯಿಂದ ಕಾಣುವ ಗಾಂಧೀಜಿಯ ರಾಮ ರಾಜ್ಯದ ಕನಸು ನನಸು ಮಾಡುವ ಪ್ರಜೆಗಳಾಗಿ ನಾವು ಪರಿವರ್ತನೆಗೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಗಾಂಧಿ ಸಂಸ್ಮರಣೆ ಉಪನ್ಯಾಸ ಮಾಡಿದ ಪುತ್ತೂರು ಪ್ರ.ದ.ಮ. ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲ, ಇಂದು ನಮ್ಮಲ್ಲಿ ಸರಕಾರದ ಗಾಂಧಿ, ಪ್ರತಿಮೆಯ ಗಾಂಧಿ, ಪುಸ್ತಕದ ಗಾಂಧಿ, ದರ್ಶನದ ಗಾಂಧಿ ಹೀಗೆ ಅನೇಕ ಗಾಂಧಿ ಇದ್ದಾರೆ. ಆದರೆ ಮಹಾತ್ಮಾ ಗಾಂಧೀಜಿ ಅವರು ತಿಳಿಸಿದ ಸಾಮಾಜಿಕ ವ್ಯವಸ್ಥೆ, ಸರಳ ಜೀವನ, ಸಾಮರಸ್ಯದ ಪಾಠ ನಮ್ಮಲ್ಲಿ ಪಾಲನೆಯಾಗುತ್ತಿದೆಯೇ? ಎಂಬುದನ್ನು ವಿಮರ್ಶಿಸುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ಗಾಂಧಿ ತತ್ವದಲ್ಲಿ ಮದ್ದು
ನಮ್ಮ ರಾಜಕೀಯ ಸ್ಥಿತಿ ರಾದ್ಧಾಂತಕ್ಕೆ ಹೋಗಿರುವ ಈ ಸಂದರ್ಭದಲ್ಲಿ ಗಾಂಧಿ ತತ್ವದ ಮೂಲಕ ಇದಕ್ಕೆ ಏನಾದರೂ ಮದ್ದು ಇದೆಯಾ? ಎಂಬ ಕುರಿತು ಯೋಚಿಸಬೇಕಾಗಿದೆ. ಕೇರಳದ ವೈಕಂ -ಶಾಂತಿ ನಿಕೇತನ -ಬನಾರಸ್‌ ಹಿಂದೂ ವಿವಿ ಭೇಟಿಯ ಸಂದರ್ಭದಲ್ಲಿ ಗಾಂಧೀಜಿಯವರು ತೋರಿಸಿದ ಜೀವನ ಪಾಠ ಹಾಗೂ ವಿಚಾರಧಾರೆ ಅರಿತುಕೊಳ್ಳುವುದು ಅತಿ ಅಗತ್ಯ ಎಂದರು.

Advertisement

ಜೀವನ ಮೌಲ್ಯದಿಂದ ಭಾರತ
ಜಾತಿ, ಧರ್ಮಗಳನ್ನು ಮೀರಿದ ಗುರುತನ್ನು ಜನಮಾನಸದಲ್ಲಿ ಗಾಂಧೀಜಿಯವರು ಹೇಗೆ ಉಳಿಸಿಕೊಂಡಿದ್ದಾರೆ ಎನ್ನುವುದು ಪ್ರತಿಯೊಬ್ಬರೂ ಅರಿತುಕೊಳ್ಳುವ ಅಗತ್ಯವಿದೆ. ನಗರದೆಡೆಗೆ ವಲಸೆ ಹೋಗುವ ಧಾವಂತದ ನಡುವೆ ಗಾಂಧೀಜಿಯವರ ಪ್ರೀತಿಯ ಗ್ರಾಮ ಭಾರತ ಉಳಿದಿದೆಯೇ? ಎಂಬುದನ್ನು ಯೋಚಿಸಬೇಕು. ಜೀವನ ಮೌಲ್ಯ ಪರಿಪಾನೆಯಿಂದ ಸುಂದರ ಭಾರತ ನಿರ್ಮಾಣದ ಗಾಂಧೀಜಿ ಯವರ ಪರಿಕಲ್ಪನೆ ನಮ್ಮಲ್ಲಿ ಹುಟ್ಟಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು , ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ ಶುಭಹಾರೈಸಿದರು. ನಗರ ಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಉಪಸ್ಥಿತರಿದ್ದರು. ತಾ| ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಧ್ಯಕ್ಷ ತಹಶೀಲ್ದಾರ್‌ ಅನಂತಶಂಕರ್‌ ಬಿ. ಸ್ವಾಗತಿಸಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್‌. ವಂದಿಸಿದರು. ನಾಗೇಶ್‌ ನಿರ್ವಹಿಸಿದರು.

ಸ್ವ ವಿಚಾರಧಾರೆ ಅಗತ್ಯ
ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಕಮಿಷನರ್‌ ರಘುನಂದನ್‌ ಮೂರ್ತಿ ಮಾತನಾಡಿ, ಸ್ವಸ್ಥ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣದ ಕಡೆಗೆ ಯುವ ಸಮುದಾಯದಿಂದ ಆರೋಗ್ಯಕರ ಪ್ರಯತ್ನ ಬೇಕು. ಪ್ರಗತಿಯ ಪಥದಲ್ಲಿ ದಾಪುಗಾಲಿಡುತ್ತಿರುವ ಭಾರತದ ಪ್ರಜೆಗಳಾದ ನಾವು ಸ್ವ ವಿಮರ್ಶೆ, ವಿಚಾರಧಾರೆಗಳೊಂದಿಗೆ ದೇಶಕ್ಕಾಗಿ ಶ್ರಮಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next