ಹುಮನಾಬಾದ: ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆ ಹುಮನಾಬಾದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುವ ಜಾತ್ರೆ ಸೇರಿದಂತೆ ವರ್ಷವಿಡೀ ನಡೆಯುವ ಶುಭ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇವಸ್ಥಾನ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.
Advertisement
ಕ್ಷೇತ್ರದ ಶಾಸಕ ರಾಜಶೇಖರ ಬಿ. ಪಾಟೀಲ ಅವರು ಅಂದಿನ ಪ್ರವಾಸೋದ್ಯಮ ಖಾತೆ ಸಚಿವರ ಮೇಲೆ ಒತ್ತಡ ಹೇರಿ ಬಿಡುಗಡೆ ಮಾಡಿಸಿದ್ದ 99 ಲಕ್ಷ ರೂ.ಅನುದಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ 2013ನೇ ಸಾಲಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆರಂಭದಲ್ಲಿ ಒಂದೂವರೆ ವರ್ಷಕ್ಕೂ ಅಧಿಕ ಕಾಲ ಕಾರಣಾಂತರ ಕಟ್ಟಡ ಕಾಮಗಾರಿ ನೆನಗುದಿಗೆ ಬಿದ್ದತ್ತು.
Related Articles
Advertisement
ಆದರೆ 1.25 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾದ ಬೃಹತ್ ಅತ್ಯಾಕರ್ಷಕ ಕಟ್ಟಡ ಉದ್ದೇಶಿತ ಕೆಲಸಕ್ಕೆ ಬಳಸುವ ಕಾರ್ಯ ಮಾತ್ರ ನಡೆಯಲಿಲ್ಲ.
ಈಗ ಏನೇನಿದೆ: 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿನ ಬಹುತೇಕ ಕೋಣೆಗಳೆಲ್ಲವೂ ಈಗ ಉಂಡಾಡಿಗಳ ತಾಣಗಳಾಗಿ ಮಾರ್ಪಟ್ಟಿವೆ. ಕಿಟಕಿಗಳ ಗಾಜು ಸಂಪೂರ್ಣವಾಗಿ ಒಡೆದು ಹೋಗಿವೆ. ಇನ್ನೂ ಪ್ರವೇಶ ದ್ವಾರದಲ್ಲೇ ಒಡೆದ ಮದ್ಯದ ಬಾಟಲ್‌ಗಳು, ಅಲ್ಲಲ್ಲಿ ಕಣ್ಣಾಡಿಸಿದ ಕಡೆ ಸಿಗುವ ಕಾಂಡೋಂಗಳೂ ಯಾತ್ರಿಕರನ್ನು ಸ್ವಾಗತಿಸಲು ಸಿದ್ಧವಾಗಿರುತ್ತವೆ. ಇನ್ನೂ ಯಾತ್ರಿ ನಿವಾಸ ಆವರಣದಲ್ಲಿ ಗಿಡಗಂಟೆ ಬೆಳೆದ ಹಿನ್ನೆಲೆಯಲ್ಲಿ ಮೇಲುಸ್ತುವಾರಿಗೆ ಯಾರೂ ಇಲ್ಲದ್ದರಿಂದ ಆಸುಪಾಸಿನ ಜನರು ಬಿಡಿ ಜಾಗವನ್ನು ಶೌಚಕ್ಕಾಗಿ ಬಳಸುತ್ತಿರುವ ಕಾರಣ ಆ ಜಾಗ ಮಂದಿ ಹೋದ ನಂತರ ಹಂದಿಗಳ ತಾಣವಾಗಿ ಮಾರ್ಪಡುತ್ತದೆ.
ಹಸ್ತಾಂತರವಾಗಿಲ್ಲ: ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿ ಇರುವ ಕಾರಣ ದೇವಸ್ಥಾನ ಸಮಿತಿ ಅದನ್ನು ಹಸ್ತಾಂತರಿಸಿಕೊಳ್ಳಲು ಒಪ್ಪಿಲ್ಲ. ಅತ್ತ ನಿರ್ವಹಣೆಯೂ ಇಲ್ಲದೇ ದೇವಸ್ಥಾನ ಸಮಿತಿ ಇತ್ತ ಭೂಸೇನಾ ನಿಗಮದ ಧೋರಣೆಯಿಂದಾಗಿ ಕಟ್ಟಡಕ್ಕೆ ಅನಾಥಪ್ರಜ್ಞೆ ಕಾಡುತ್ತಿದೆ.
ಬಳಕೆ ಇಲ್ಲದೇ ಪಾಳು ಬಿದ್ದ ಕಟ್ಟಡಕ್ಕೆ ಸಂಬಂಧಿಸಿದಂತೆ ಶಾಸಕ ರಾಜಶೇಖರ ಬಿ. ಪಾಟೀಲ ಅವರು ಈಚೆಗೆ ತಾಲೂಕು ಆಡಳಿತ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ತಾತ್ಕಾಲಿಕ ಮೇಲುಸ್ತುವಾರಿ ಮಾಡುತ್ತಿರುವ ವ್ಯಕ್ತಿಗಳ ಹೆಸರು ತೆಗೆದುಕೊಂಡು ಬಹಿರಂಗವಾಗಿಯೇ ಸಾರ್ವಜನಿಕರ ಸಮ್ಮುಖದಲ್ಲೇ ಬೇಸರ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.