ಹುಮನಾಬಾದ: ಪಟ್ಟಣದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕಿರಿದಾಗಿದ್ದ ಅನೇಕ ಪ್ರಮುಖ ರಸ್ತೆಗಳನ್ನು ವಿಸ್ತರಣೆಗೊಳಿಸಿದರೂ ವಾಹನ ಮತ್ತು ಜನ ದಟ್ಟಣೆ ಮಾತ್ರ ತಪ್ಪಿಲ್ಲ. ಇದರ ಪರಿಣಾಮ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೆ ಇವೆ.
Advertisement
ಪಟ್ಟಣದ ಪ್ರತಿಯೊಂದು ಪ್ರಮುಖ ರಸ್ತೆಗಳಲ್ಲಿ ಈ ಸಮಸ್ಯೆ ಇದ್ದರೂ ವಿಶೇಷವಾಗಿ ಅಂಬೇಡ್ಕರ್ ವೃತ್ತದಿಂದ ನೂರಖಾನ್ ಅಖಾಡಾ ವರೆಗಿನ ಪ್ರದೇಶದಲ್ಲಿ ಹಿಂದೆಂದಿಗಿಂತಲೂ ಜನಸಂದಣಿ ಈಗ ದ್ವಿಗುಣಗೊಂಡಿದೆ. ಪಟ್ಟಣದೆಲ್ಲೆಡೆ ಪ್ರಮುಖ ರಸ್ತೆಗಳು ಕೇವಲ 20ರಿಂದ 40ಅಡಿ ಅಗಲ ಇದ್ದವು.
ಕೇವಲ 20-40 ಅಡಿ ಇದ್ದ ಎಲ್ಲ ಮಾರ್ಗಗಳಲ್ಲೂ 55-58ರ ಅಡಿ ವರೆಗೆ ವಿಸ್ತರಿಸಲಾಯಿತು.
Related Articles
Advertisement
ಕಡಿಮೆಯಾಗದ ದಟ್ಟಣೆ: ಇಷ್ಟೆಲ್ಲ ಅಭಿವೃದ್ಧಿಯಾದ ಮೇಲೆ ಎಲ್ಲವೂ ಸುಸೂತ್ರವಾಗಿ ನಡೆಯಬೇಕು ತಾನೆ. ಅಂದುಕೊಂಡಂತೆ ಎಲ್ಲವೂ ಸುಗಮವಾಗಿದ್ದರೆ ಪಟ್ಟಣದಲ್ಲಿ ಸಂಚಾರ ದಟ್ಟಣೆಯೇ ಇರುತ್ತಿರಲಿಲ್ಲ. ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ನಿಲ್ಲಿಸುವುದಕ್ಕಾಗಿ ವಾರದಲ್ಲಿ 3 ದಿನ ಬಲಬದಿಗೆ 3 ದಿನ ಎಡ ಬದಿಗೆ ಎಂದು ನಿಗದಿಪಡಿಸಿ, ವಾಹನಗಳನ್ನೇನೋ ನಿಲ್ಲಿಸಲಾಗುತ್ತಿದೆ. ಆದರೆ ಸಮಸ್ಯೆ ಇರೋದು ಬೀದಿ ವ್ಯಾಪಾರಿಗಳದು. ತಾಲೂಕಿನ ವಿವಿಧ ಗ್ರಾಮಗಳಿಂದ ಬರುವ ಬಡ ರೈತರು ತಾವು ಬೆಳೆದ ತರಕಾರಿ ಮಾರಾಟ ಮಾಡಲು ಈ ರಸ್ತೆ ಬದಿ ಸ್ಥಳಗಳಲ್ಲೇ ಕುಳಿತುಕೊಳ್ಳುತ್ತಾರೆ.
ಜೊತೆಗೆ ಪಟ್ಟಣದ ಪ್ರತಿಯೊಬ್ಬ ವ್ಯಾಪಾರಿಗಳು ಪಾದಚಾರಿಗಳ ಸಂಚಾರಕ್ಕಾಗಿ ನಿರ್ಮಿಸಲಾದ ಸ್ಥಳದ ಮೇಲೆ ತಮ್ಮ ವಿವಿಧ ಮಾರಾಟ ಸಾಮಗ್ರಿ ಇಡುತ್ತಿರುವುದೂ ಕೂಡ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ.
ವ್ಯಾಪಾರಿಗಳು ಬದಲಾಗಲಿಲ್ಲ: ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಳ ಜೊತೆಗೆ ಅಭಿವೃದ್ಧಿಪಡಿಸಲಾದ ಫುಟ್‌ಪಾತ್ ಮೇಲೆ ಮಾರಾಟ ವಸ್ತುಗಳನ್ನು ಇಡದಂತೆ ಶಾಸಕರು ಈವರೆಗೆ ನೂರಾರು ಬಾರಿ ಮನವಿ ಮಾಡಿದರೂ ಇದರಿಂದ ಕಂಠ ಹೋಯಿತೇ ವಿನಃ ಪರಿವರ್ತನೆ ಕಾಣದೇ ಇರುವುದು ನೋವಿನ ಸಂಗತಿ.
ಯಾವುದಾದರೊಂದು ಲಾರಿ ರಸ್ತೆ ಮಧ್ಯ ಬಂದರೆ ಅದು ಅಲ್ಲಿಂದ ಹೋಗುವವರೆಗೆ ಅದರ ಹಿಂದೆ ನೂರಾರು ಬೈಕ್ ಸಾಲುಗಟ್ಟಿ ನಿಲ್ಲಿಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪರ್ಯಾಯ ವ್ಯವಸ್ಥೆ ಮಾಡಿ: ಈ ಮಧ್ಯ ತಮಗೆ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಿದ್ದೇ ಆದರೆ ನಾವು ಅಲ್ಲಿ ಕುಳಿತುಕೊಳ್ಳುವ, ವಾಹನ ಸವಾರರಿಗೆ ತೊಂದರೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಾಧ್ಯವಾದಷ್ಟು ಶೀಘ್ರ ತಮಗೆ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ರಸ್ತೆಬದಿ ಬಡ ವ್ಯಾಪಾರಿಗಳ ಒತ್ತಾಸೆ.
ಎಲ್ಲಕ್ಕೂ ಒಂದೇ ಪರಿಹಾರ: ಈ ನಿಟ್ಟಿನಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೊಂಡ ಕ್ಷೇತ್ರದ ಶಾಸಕರಿಗೆ ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡುವುದು ಕಷ್ಟಸಾಧ್ಯದ ಕೆಲಸವೇನಲ್ಲ. ಇದರಿಂದ ವ್ಯಾಪಾರಿಗಳ ಜೊತೆಗೆ ಸಂಚಾರ ಪೊಲೀಸರಿಗೆ ಸಮಸ್ಯೆಯೂ ಕಡಿಮೆಯಾಗಿ ಎಲ್ಲರಿಗೂ ನೆಮ್ಮದಿ ಸಿಗುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ಕಲ್ಪಿಸುವರೆ ಕಾದು ನೋಡಬೇಕು.