ಹುಮನಾಬಾದ: ಸಸಿ ನೆಟ್ಟ ಮಾತ್ರಕ್ಕೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸದೇ ಮಕ್ಕಳು ಸ್ವಾವಲಂಬಿ ಆಗುವವರೆಗೆ ಸಾಕಿ ಪೋಷಿಸುವಂತೆ ಅವುಗಳನ್ನು ಮಕ್ಕಳಂತೆ ಪೋಷಿಸಬೇಕು ಎಂದು ಸಿಂಡಿಕೇಟ್ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಹಣಮಂತರಾವ್ ಮೇತ್ರೆ ಹೇಳಿದರು.
ಧುಮ್ಮನಸೂರ ಗ್ರಾಮದ ಸಿದ್ಧಾರೂಢ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಗ್ರಾಮೀಣ ಶಿಕ್ಷಣ ವಿಸ್ತರಣೆ ಕಾರ್ಯಕ್ರಮ ಯೋಜನೆಯಡಿ ಶುಕ್ರವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದ ಸಕಲ ಜೀವರಾಶಿಗಳಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಬುದ್ಧಿ ಜೀವಿ ಎಂದು ಹೇಳಲಾಗುವ ಮನುಷ್ಯ ತಮ್ಮ ವೈಭೋಗದ ಜೀವನದ ಸ್ವಾರ್ಥಕ್ಕಾಗಿ ಇಂದು ಸಸ್ಯ ಸಂಕುಲ, ಪ್ರಾಣಿ, ಪ್ರಕ್ಷಿ ಸಂಕುಲಕ್ಕಿಂತ ಕೀಳಾಗಿ ವರ್ತಿಸುತ್ತಿದ್ದಾನೆ. ರಸ್ತೆ, ಕಟ್ಟಡ ನಿರ್ಮಾಣ ಇತ್ಯಾದಿ ಅಭಿವೃದ್ಧಿ ನೆಪದಲ್ಲಿ ಅರಣ್ಯ ಸಣಂಪತ್ತು ಸಂಪೂರ್ಣವಾಗಿ ನಾಶ ಮಾಡಲು ಹೊರಟಿರುವುದು ಬೇಸರದ ಸಂಗತಿ ಎಂದರು. ಬ್ಯಾಂಕ್ ವಿಸ್ತೀರ್ಣಾಧಿಕಾರಿ ಪ್ರದೀಪ ಪವಾರ ಮಾತನಾಡಿ, ಮನುಷ್ಯ ಶುದ್ಧ ಗಾಳಿ, ಶುದ್ಧ ಕುಡಿಯುವ ನೀರಿಲ್ಲದೇ ರಾಸಾಯನಿಕ ಮಿಶ್ರಣದ ವಸ್ತುಗಳನ್ನು ಅವಲಂಬಿಸಿ, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಗಿಡಮರಗಳ ನಾಶದಿಂದ ಅಗತ್ಯ ನೆಲೆ ಇಲ್ಲದೇ ಪ್ರಾಣಿ, ಪಕ್ಷಿ ಸಂಪತ್ತು ನಾಶಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮನುಷ್ಯ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ ಎಂದರು.
ಸಿಂಡಿಕೇಟ್ ಬ್ಯಾಂಕ್ ಜಿಲ್ಲಾ ಶಾಖೆ ಪ್ರಮುಖ ಧೀರೇಂದ್ರ ಪಾಟೀಲ ಮಾತನಾಡಿ, ದಿನೆದಿನೆ ಹೆಚ್ಚುತ್ತಿರುವ ಜನಸಂಖ್ಯೆ ಪರಿಣಾಮ ನೆಲೆಸಲು ನೆಲೆ ಇಲ್ಲದೇ ಮನುಷ್ಯ ಪರದಾಡುತ್ತಿದ್ದಾನೆ. ಉಳುಮೆಗೆ ಮೀಸಲು ಇರುವ ಭೂಮಿಗಳಲೆಲ್ಲ ಕಟ್ಟಡಗಳು ತಲೆ ಎತ್ತುತ್ತಿವೆ. ಕೆಲಸದ ಒತ್ತಡದಿಂದಾಗಿ ಮನುಷ್ಯ ಯಂತ್ರಗಳ ಮೊರೆ ಹೋಗುತ್ತಿದ್ದಾನೆ. ಇದರ ಪರಿಣಾಮ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ವಾಹನವಿಲ್ಲದೇ ಹೆಜ್ಜೆ ಇಡಲು ಆಗದೇ ವಿಷಪೂರಿತ ಹೊಗೆ ನುಂಗಿ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದ ನರಳಬೇಕಾದ ಪರಿಸ್ಥಿತಿಯನ್ನು ಮನುಷ್ಯ ಎದುರಿಸುತ್ತಿದ್ದರೂ ತಿಳಿವಳಿಕೆ ಬಾರದೇ ಇರುವುದು ನೋವಿನ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ ಶೇರಿಕಾರ್ ಮಾತನಾಡಿ, ಮಕ್ಕಳು ಕೇವಲ ಪಠ್ಯಪುಸ್ತಕದ ಹುಳುವಾಗದೇ ನಮ್ಮ ಆಸುಪಾಸು ನಡೆಯುತ್ತಿರುವ ದೈನಂದಿನ ಚಟುವಟಿಕೆ, ಬೆಳವಣಿಗೆ ಮೇಲೆ ನಿಗಾ ವಹಿಸಬೇಕು. ತನ್ಮೂಲಕ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದು ಸಲಹೆ ನೀಡಿದರು. ಮಹೇಶ ಶೇರಿಕಾರ, ವೀರೇಶ ಶೇರಿಕಾರ ಇದ್ದರು. ನಾಗಮಣಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಶಿಕ್ಷಕ ಬಸವರಾಜ ಬೋರಾಳ ಸ್ವಾಗತಿಸಿದರು. ಅಶೋಕ ಹೊಸಮನಿ ನಿರೂಸಿದರು. ದತ್ತು ಎರೋಳೆ ವಂದಿಸಿದರು.