ಹುಮನಾಬಾದ: ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯದ ನೈಜ ಸಂರಕ್ಷಕರು. ವಚನಗಳನ್ನು ಸಂಗ್ರಹಿಸುವುದು ಮಾತ್ರವಲ್ಲದೇ ಪ್ರಕಟಿಸುವ ಮೂಲಕ ವಿಶ್ವದ ಗಮನ ಸೆಳೆದ ಫ.ಗು.ಹಳಕಟ್ಟಿ ಅವರ ಕಾರ್ಯ ಅತ್ಯಂತ ಪ್ರಶಂಸನೀಯ ಎಂದು ಕಲಬುರ್ಗಿ ಬೌದ್ಧ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ|ವಿಜಯಕುಮಾರ ಬೀಳಗಿ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶರಣು ವಿಶ್ವ ವಚನ ಫೌಂಡೇಶನ್‌ನಿಂದ ನಡೆದ ಫ.ಗು.ಹಳಕಟ್ಟಿ ಅವರ 139ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಸ ಯುವ ಪೀಳಿಗೆ ವಚನ ಅಧ್ಯಯನ ಮಾಡಿ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಶಿವರಾಜ ಮೇತ್ರೆ ಮಾತನಾಡಿ, ಫ.ಗು.ಹಳಕಟ್ಟಿ ಇಲ್ಲದಿದ್ದರೆ ಬಹುತೇಕ ವಚನಗಳು ಮಾಯವಾಗುತ್ತಿದ್ದವು. ವಚನ ರಚಿಸಿದ ವಚನಕಾರರಿಗಿಂತ ಅವುಗಳನ್ನು ಸಂರಕ್ಷಣೆ ಮಾಡಿದ ಹಳಕಟ್ಟಿ ಅವರ ಪಾತ್ರ ಅತ್ಯಂತ ಮಹತ್ವದ್ದು ಎಂದರು.
ಶರಣು ವಿಶ್ವ ವಚನ ಫೌಂಡೇಶನ್ ಜಿಲ್ಲಾಧ್ಯಕ್ಷ ಡಾ|ಗವಿಸಿದ್ದಪ್ಪ ಪಾಟೀಲ ಮಾತನಾಡಿ, ವಚನ ಸಾಹಿತ್ಯ ಸಂಗ್ರಹಿಸುವ ಮೂಲಕ ಬಹುದೊಡ್ಡ ಕೆಲಸ ಮಾಡಿದ್ದಾರೆ. ಕಾನೂನು ಅಧ್ಯಯನ ಮಾಡಿ ವಕೀಲರಾಗಿ, ಸಹಕಾರ, ಶಿಕ್ಷಣ, ಸಮಾಜ, ಧಾರ್ಮಿಕ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಫ.ಗು.ಹಳಕಟ್ಟಿ ಅವರ ಜೀವನ ಸಾಧನೆಯನ್ನು ಪಠ್ಯಕ್ಕೆ ಅಳವಡಿಸುವ ಮೂಲಕ ಸರ್ಕಾರ ಅವರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವೀರಭದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರೇವಣಸಿದ್ದಪ್ಪ ಶಿವಪೂಜಿ ಮಾತನಾಡಿ, ನಾವಿಂದು ವಚನ ಮತ್ತು ಶರಣರನ್ನು ತಿಳಿದುಕೊಳ್ಳಲು ಹಳಕಟ್ಟಿ ಅವರು ರೂಪಿಸಿದ ಮಾರ್ಗವೇ ಕಾರಣ ಎಂದರು.
ವಚನ ಪಠಣ ಮಾಡಿ ಗಮನ ಸೆಳೆದ ವಿದ್ಯಾರ್ಥಿಗಳಾದ ದೇವಿಕಾ ಶಿವಕುಮಾರ, ಕಿರಣ, ಶ್ವೇತಾ ಮತ್ತು ಪ್ರವೀಣ ಅವರಿಗೆ ಪ್ರಮಾಣ ಪತ್ರ ಮತ್ತು ಪುಸ್ತಕ ನೀಡಿ ಗೌರವಿಸಲಾಯಿತು. ಅಮರನಾಥ ಹೂಗಾರ ನಿರೂಪಿಸಿದರು. ಭೀಮಶಾ ಮೇತ್ರೆ ಸ್ವಾಗತಿಸಿದರು. ವಿಜಯಾ ಮಣ್ಣೂರ ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.