ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-65ಕ್ಕೆ ಹೊಂದಿಕೊಂಡಿರುವ ಹುಡಗಿ ಗ್ರಾಮದಲ್ಲಿ ರಸ್ತೆ ಮಧ್ಯ ಸಂಗ್ರಹಗೊಂಡ ಚರಂಡಿ ತ್ಯಾಜ್ಯ, ಸೊಳ್ಳೆ ಕಾಟದಿಂದ ಬೇಸತ್ತಿರುವ ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಾರ್ಗದಲ್ಲಿರುವ ಬಹುತೇಕ ಮನೆಗಳು ಚರಂಡಿ ತ್ಯಾಜ್ಯದಿಂದ ಆವೃತಗೊಂಡಿವೆ. ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಹಾಗೂ ಅಧಿಕಾರಿಗಳಿಗೆ ನಿತ್ಯ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಓಣಿಯ ಚರಂಡಿಯ ತ್ಯಾಜ್ಯ ನಮ್ಮ ಬಚ್ಚಲು ಸೇರುತ್ತಿದೆ. ಇದರಿಂದ ಮಕ್ಕಳು ಮತ್ತು ವೃದ್ಧರು, ಓಣಿಯ ಬಹುತೇಕ ಮಂದಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರತಿನಿತ್ಯ ಸಂಜೆಯಾದರೆ ಸಾಕು ಸೊಳ್ಳೆಕಾಟ ಹೆಚ್ಚುತ್ತಿರುವ ಕಾರಣ ಮಕ್ಕಳು ಓದುವುದು ದೂರದ ಮಾತು ನೆಮ್ಮದಿಯಿಂದ ನಿದ್ದೆ ಮಾಡುವುದು ಕಷ್ಟಸಾಧ್ಯವಾಗಿದೆ. ಈ ಎಲ್ಲದರ ಜೊತೆಗೆ ಕುಡಿಯುವ ನೀರಿನ ಕೊಳವೆ ಬಾವಿ ಕೂಡ ಅದರ ಪಕ್ಕದಲ್ಲೇ ಇದ್ದು, ಗಲೀಜಿನಲ್ಲೇ ನಿಂತು ನೀರು ತುಂಬಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಓಣಿಯ ಬಸೀರಸಾಬ್, ನೀಲಮ್ಮ, ಕಸ್ತೂರಿ, ಸುವರ್ಣ, ಅಹ್ಮದ್ ಸಾಬ್, ಕರಬಸಪ್ಪ ಇನ್ನೂ ಅನೇಕರು.
ಈ ಮೊದಲು ಹೀಗಿರಲಿಲ್ಲ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-65ರ ನಂತರ ನಮ್ಮೂರಿಗೆ ಎಲ್ ಆ್ಯಂಡ್ ಟಿ ಕಂಪನಿ ಸರ್ವಿಸ್ ರಸ್ತೆ ಸೌಲಭ್ಯ ಕಲ್ಪಿಸದ ಕಾರಣ ಈ ಸಮಸ್ಯೆ ಉದ್ಭವಗೊಂಡಿದೆ. ಪೊಲೀಸ್ ಸೇರಿದಂತೆ ವಿವಿಧ ಹಂತದ ಮೇಲಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾರೊಬ್ಬರೂ ಸಕಾರಾತ್ಮಕ ಸ್ಪಂದಿಸುತ್ತಿಲ್ಲ.
ಈ ಹಿಂದೆ ಸರಾಗವಾಗಿ ಹರಿದು ಹೋಗುತ್ತಿದ್ದ ಚರಂಡಿ ತ್ಯಾಜ್ಯ ಸರ್ವಿಸ್ ರಸ್ತೆ ಇಲ್ಲದ ಕಾರಣ ಮನೆಗಳ ಸುತ್ತಲು ಸಂಗ್ರಹಗೊಂಡು ಸೊಳ್ಳೆ ಕಾಟ ಹೆಚ್ಚಳಕ್ಕೆ ಮೂಲವಾಗಿದೆ. ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಮಾರ್ಗ ಹುಡುಕಬೇಕಿದ್ದ ಗ್ರಾಮ ಪಂಚಾಯಿತಿ ಮತ್ತೂಬ್ಬರತ್ತ ತೋರಿಸುತ್ತಿದೆ ಎನ್ನುವುದು ಬಡಾವಣೆ ನಿವಾಸಿಗಳಾದ ಫಾತಿಮಾ, ಸುಶಿಲಾಬಾಯಿ, ಸರಸ್ವತಿ ಮೊದಲಾದವರ ಆರೋಪ. ಈ ಸಮಸ್ಯೆ ಶೀಘ್ರ ಬಗೆಹರಿಯದಿದ್ದಲ್ಲಿ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮದ ನಿವಾಸಿಗಳಿಗೆ ಬೇಕಾಗಿರುವುದು ನೆಪ ಅಲ್ಲ ಪರಿಹಾರ. ಒಬ್ಬರ ಮೇಲೆ ಮತ್ತೂಬ್ಬರು ಬೆರಳು ಮಾಡಿ ತೋರಿಸುವ ಬದಲು ಚುನಾಯಿತ ಪ್ರತಿನಿಧಿಗಳು, ಗ್ರಾಮದ ಗಣ್ಯರು ಸೇರಿ ಅಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗೆ ತಕ್ಷಣ ಶಾಶ್ವತ ಪರಿಹಾರ ಒದಗಿಸುವ ಮೂಲಕ ನಿವಾಸಿಗಳ ನೆಮ್ಮದಿ ಕಾಪಾಡಬೇಕು.
ಈ ಸಮಸ್ಯೆ ಉದ್ಭವಗೊಂಡಿರುವುದಕ್ಕೆ ಗ್ರಾಮ ಪಂಚಾಯಿತಿ ಕಾರಣವಲ್ಲ. ಗ್ರಾಮದ ಎಲ್ಲ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ನಿರ್ಮಿಸಲಾಗಿದೆ. ಆದರೆ ಈ ವಾರ್ಡ್ ಸಮಸ್ಯೆ ಇರುವುದೇ ಬೇರೆ. ಇಲ್ಲಿ ಎಲ್ ಆ್ಯಂಡ್ ಟಿ ಕಂಪೆನಿ ಸರ್ವಿಸ್ ರಸ್ತೆ ಸೌಲಭ್ಯ ಕಲ್ಪಿಸಿಲ್ಲ. ಈ ಸಂಬಂಧ ಪೊಲೀಸ್, ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಪ್ರತಿಯೊಬ್ಬರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರಿಗೆ ಸೌಲಭ್ಯ ದಕ್ಕುವುದಾದರೇ ಅವರೊಂದಿಗೆ ಬೀದಿಗಿಳಿದು ಹೋರಾಟ ನಡೆಸಲು ನಾವು ಸದಾಸಿದ್ಧರಿದ್ದೇವೆ.
z
ಪ್ರಭು ಮಾಳನಾಯಕ,
ಹುಡಗಿ ಗ್ರಾಪಂ ಉಪಾಧ್ಯಕ್ಷ