ಹುಮನಾಬಾದ: ಜಾತ್ರೆ ಸಮಾಜದ ವಿವಿಧ ಸಮುದಾಯಗಳ ಮಧ್ಯೆ ಭಾವೈಕ್ಯತೆ ಬೆಸೆಯುವ ವೇದಿಕೆ. ಉತ್ಸವ ನೆಪದಲ್ಲಿ ಗ್ರಾಮೀಣ ಪ್ರದೇಶ ಎಲ್ಲ ವರ್ಗ, ವರ್ಣದ ಜನರು ಒಗ್ಗೂಡಿ ಇಂಥ ಉತ್ಸವ ಆಚರಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಬಿ. ಪಾಟೀಲ ಹೇಳಿದರು.
ತಾಲೂಕಿನ ಸುಲ್ತಾನಬಾದವಾಡಿ ಗ್ರಾಮದಲ್ಲಿ ರಾಮಲಿಂಗೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
ವಿವಿಧ ಬಗೆಯ ಪೂಜೆ ಏಕಾಗ್ರತೆ ಪ್ರತೀಕ. ಜನ್ಮ ನೀಡಿದ ಸೃಷ್ಠಿಕರ್ತನಿಗೆ ಸಲ್ಲಿಸುವ ಕೃತಜ್ಞತೆ ಭಾವ. ಜಾತ್ರೆ ಎಂದಾಕ್ಷಣ ಇಲ್ಲಿ ಕೇವಲ ಯಾವುದೋ ಒಂದು ಸಮುದಾಯದ ಜನರು ಮಾತ್ರ ಬರುವುದಿಲ್ಲ. ವಿವಿಧ ಸಮುದಾಯಗಳ ಜನರು ಭಾಗಹಿಸುತ್ತಾರೆ. ಆಟಕೆ, ಕುಂಕುಮ, ವಿಭೂತಿ, ಪ್ರಸಾದ, ಸಿಹಿ ತಿನಿಸುಗಳ ಮಾರಾಟದ ನೆಪದಲ್ಲಿ ನಡೆಸುವ ಅಂಗಡಿಗಳೆಲ್ಲವೂ ಸಹೋದರತ್ವ ಬಿಂಬಿಸುತ್ತವೆ ಎಂದು ಹೇಳಿದರು.
ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ ಮಾತನಾಡಿ, ಕಳೆದ ಎರಡು ದಶಕಗಳಿಂದ ಗ್ರಾಮದಲ್ಲಿ ರಾಮಲಿಂಗೇಶ್ವರ ಜಾತ್ರೆ ಅತ್ಯಂತ ವೈಭವದಿಂದ ನಡೆಯುತ್ತದೆ. ವಿವಿಧ ರಾಜ್ಯದ ಖ್ಯಾತ ಕುಸ್ತಿ ಪಟುಗಳು ಭಾವಹಿಸುವುದು ಜಾತ್ರೆ ಪ್ರಮುಖ ಆಕರ್ಷಣೆ. ತಮ್ಮ ಅಧಿಕಾರ ಅವಧಿಯೊಳಗೆ ದೇವಸ್ಥಾನದ ಅಭಿವೃದ್ದಿಗೆ ಶಕ್ತಿಮೀರಿ ನೆರವು ನೀಡುವುದಾಗಿ ಹೇಳಿದರು.
ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ವೀರಶೆಟ್ಟೆಪ್ಪ ಜ್ಯಾಂತೆ, ಉಪಾಧ್ಯಕ್ಷ ಬಸ್ಸಯ್ಯಸ್ವಾಮಿ, ಸದಸ್ಯರಾದ ಬಸವರಾಜ ಜ್ಯಾಂತೆ, ಮಲ್ಲಿಕಾರ್ಜುನ ರಂಜೇರಿ, ರಾಮಚಂದ್ರಪ್ಪ ಉಪ್ಪಾರ, ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಸ್ವಾಮಿ, ಆತ್ಮಾನಂದೆ ಬಗ್ದೆ, ಶಿವಾಜಿ ಮಠಪತಿ ಮಾತನಾಡಿದರು.
ದೇವಸ್ಥಾನ ಸದ್ಬಕ್ತ ಮಂಡಳಿ ಪ್ರಮುಖರಾದ ಧನರಾಜ ಜ್ಯಾಂತೆ, ಬಸವರಾಜ ದಾಡಗೆ, ರಂಜಿತ್ ಹಿಲಾಲಪುರೆ, ಸಂಗಮೇಶ ಸ್ವಾಮಿ, ಸೋಮನಾಥ ಜ್ಯಾಂತೆ, ಗುಂಡಪ್ಪ ಉಪ್ಪಾರ, ಗೋರಖನಾಥ ಜಮಾದಾರ, ಜಿತೇಂದ್ರ ಜಮಾದಾರ, ತಿಪ್ಪಣ್ಣ ಉಪ್ಪಾರ ಇದ್ದರು.
ಜಾತ್ರಾ ಉತ್ಸವ ಸಂಬಂಧ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯದಲ್ಲಿ ವಿಜಯಪುರ, ಬೆಳಗಾವಿ, ರಾಯಚೂರು, ಕಲಬುರಗಿ, ಹೈದ್ರಾಬಾದ, ಪುಣೆ ಮೊದಲಾದ ಕಡೆಗಳಿಂದ ಅನೇಕ ಪಟುಗಳು ಆಗಮಿಸಿ ಸಾಹಸ ಪ್ರದರ್ಶಿಸಿದರು. ಪಿಎಸ್‌ಐ ಮಹಾಂತೇಶ ಲುಂಬಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.