ಹುಮನಾಬಾದ: ಸಂಪೂರ್ಣ ಕಲ್ಲು-ಮುಳ್ಳು, ಗುಡ್ಡಗಾಡು ಪ್ರದೇಶ ಹಿಂದೊಮ್ಮೆ ದರೋಡೆಕೋರರ ಆಶ್ರಯ ತಾಣವಾಗಿದ್ದ ಮಾಣಿಕನಗರ ಮಾಣಿಕಪ್ರಭುಗಳ ಪಾದ ಸ್ಪರ್ಶವಾಗುತ್ತಿದ್ದಂತೆ ಸರ್ವಧರ್ಮ ಸಮನ್ವಯತೆ ಪವಿತ್ರ ಕ್ಷೇತ್ರವಾಗಿದೆ ಎಂದು ಮಾಣಿಕಪ್ರಭು ಸಂಸ್ಥಾನ ಕಾರ್ಯದರ್ಶಿ ಚೈತನ್ಯರಾಜ ಪ್ರಭು ಹೇಳಿದರು.
ಮಾಣಿಕನಗರದ ಮಾಣಿಕಪ್ರಭು ದೇವಸ್ಥಾನದಲ್ಲಿ ಮಾಣಿಕಪ್ರಭು 202ನೇ ಜನ್ಮೋತ್ಸವ ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಪ್ರವಚನ ನೀಡಿ ಅವರು ಮಾತನಾಡಿ, ಈ ಕ್ಷೇತ್ರ ಸಾಹಿತ್ಯ, ಸಂಗೀತ ಸೇರಿದಂತೆ ಸಕಲ ಕಲೆ-ಕಲಾವಿದರನ್ನು ಪೋಷಿಸುವ ವಿಶ್ವವಿದ್ಯಾಲಯ ಮಾತ್ರವಲ್ಲದೇ ಭಕ್ತರ ಪಾಲಿಗೆ ಕಲ್ಪವೃಕ್ಷವಾಗಿ ನೆಲೆನಿಂತಿದೆ ಎಂದರು.
ಹಸಿದವರಿಗೆ ಅನ್ನ, ಅನಾಥರು, ನಿರ್ಗತಿಕರಿಗೆ ಆಶ್ರಯ, ಅನ್ನ ದಾಸೋಹ ಜೊತೆಗೆ ಜ್ಞಾನದಾಸೋಹ ನಡೆಸುತ್ತಿರುವ ಕಾರ್ಯ ಪ್ರಭು ಸಂಸ್ಥಾನ ನಡೆಸಿಕೊಂಡು ಬರುತ್ತಿದೆ. ಜಾತಿ ಭೇದ ಪರಿಗಣಿಸದೇ ಎಲ್ಲರನ್ನೂ ಸಮಾನರನ್ನಾಗಿ ಕಾಣಲಾಗುತ್ತಿದೆ. ಪ್ರಭು ಮಹಾರಾಜರು ಪಾದವಿಕ್ಕಿದ ಭೂವಿಯಲ್ಲ ಸಕಲ ಸಂಪತ್ತಿನಿಂದ ಕಂಗೊಳಿಸುತ್ತಿವೆ ಎಂದರು.
ಆನಂದರಾಜ ಪ್ರಭುಗಳ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನೆರವೇರಿದವು. ಅಜಯ ಸೂಗಾಂವಕರ್, ರಾಜುಸಿಂಗ್ ತಿವಾರಿ, ದಿನೇಶ ಕುಲಕರ್ಣಿ ಸೇರಿದಂತೆ ಬೀದರ, ಕಲಬುರಗಿ, ರಾಯಚೂರು ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಆನಂದರಾಜ ಪ್ರಭು, ಮಾಣಿಕ ಪಬ್ಲಿಕ್ ಶಾಲೆ ಪ್ರಾಚಾರ್ಯೆ ಸುಮಂಗಲಾ ಜಹಾಗಿರ್ದಾರ, ಕಿರಣ ಕುಲಕರ್ಣಿ, ಚಿದಾನಂದ, ಲಕ್ಷ್ಮೀಕಾಂತ ಇತರರು ಇದ್ದರು.