Advertisement

ಅನಾರೋಗ್ಯ ಹರಡುತ್ತಿದೆ ಮಲೀನ ನೀರು

10:28 AM Jul 08, 2019 | Naveen |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ
: ಹುಮನಾಬಾದ- ಚಿಟಗುಪ್ಪ ಸೇರಿ 13 ಗ್ರಾಮಗಳಿಗೆ ಕಾರಂಜಾ ಜಲಾಶಯದಿಂದ ಮಲೀನ ನೀರು ಪೂರೈಕೆಯಾಗುತ್ತಿರುವ ಕಾರಣ ಈ ನೀರನ್ನೇ ನಂಬಿದ ಜನರಿಗೆ ಈಗ ರೋಗಭೀತಿ ಎದುರಾಗಿದೆ.

Advertisement

ಸರ್ಕಾರದ ಮೇಲೆ ಒತ್ತಡ ಹೇರಿ ಸುಮಾರು 20 ಕೋಟಿ ರೂ. ಹಣದಲ್ಲಿ ಅಂದಿನ ಶಾಸಕರು ಹಾಗೂ ಹಾಲಿ ಸಚಿವ ರಾಜಶೇಖರ ಪಾಟೀಲ ಅವರು ಯೋಜನೆ ಪೂರ್ಣಗೊಳಿಸಿ, ಹುಮನಾಬಾದ- ಚಿಟಗುಪ್ಪ- ಹಳಿಖೇಡ(ಬಿ) ಪಟ್ಟಣ, ಬೇನಚಿಂಚೋಳಿ, ನಂದಗಾಂವ್‌, ವಡ್ಡನಕೇರಾ, ಮದರಗಾಂವ್‌, ಕಪ್ಪರಗಾಂವ್‌, ಹುಡಗಿ ಸೇರಿ ಒಟ್ಟು 13 ಗ್ರಾಮಗಳ ಜನರು ಈ ಸೌಲಭ್ಯದಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಪದೇಪದೆ ಒಡೆಯುವ ಪೈಪ್‌ಲೈನ್‌: ಯೋಜನೆ ಆರಂಭಗೊಂಡಾಗಿನಿಂದ ವರ್ಷದಲ್ಲಿ ಹತ್ತಾರು ಬಾರಿ ಮುಖ್ಯಪೈಪ್‌ ಒಡೆದು ನೀರು ಪೋಲಾಗುತ್ತಿದೆ. ಆಲ್ಲದೇ ಅದರ ದುರುಸ್ತಿ ಆಗುವವರೆಗೆ ಈ ನೀರನ್ನೇ ಅವಲಂಬಿಸಿರುವ ಜನರು ಪೈಪ್‌ ಒಡೆದಾಗಲೊಮ್ಮೆ ವಾರಗಟ್ಟಲೇ ನೀರಿಗಾಗಿ ಹೈರಾಣು ಆಗುತ್ತಿದ್ದಾರೆ.

ಯೋಜನೆ ಶುರು ಆಗಿದ್ದ ಆರಂಭದಲ್ಲಿ ಕಬೀರಾಬಾದವಾಡಿ ಹತ್ತಿರದ ಜಲಶುದ್ಧೀಕರಣ ಘಟಕದಲ್ಲಿ ಸಂಪೂರ್ಣ ಶುದ್ಧಗೊಂಡ ನಂತರವೇ ನೀರು ಪೂರೈಕೆ ಮಾಡಲಾಗುತ್ತಿತ್ತು. ಇದರಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿ, ಶುದ್ಧ ನೀರು ಪೂರೈಕೆ ಆಗುತ್ತಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಸಂತೃಪ್ತಿ ಮೂಡಿಸಿತ್ತು. ಆದರೆ ಆರಂಭದಲ್ಲಿ ಇದ್ದವ ಉತ್ಸಾಹ ನಂತರದ ದಿನಗಳಲ್ಲಿ ಇಲ್ಲದಾಯಿತು. ಮೂರ್‍ನಾಲ್ಕು ವರ್ಷಗಳಿಂದ ಕಾರಂಜಾ ಜಲಾಶಯದಿಂದ ಮಲೀನ ನೀರು ಪೂರೈಕೆ ಆಗುತ್ತಿದೆ.

ನಿರ್ವಹಣೆ ಕೊರತೆ: ಸಾರ್ವಜನಿಕರ ಪ್ರಕಾರ ಆರಂಭದಲ್ಲಿ ಇದ್ದ ನಿರ್ವಹಣೆ ವ್ಯವಸ್ಥೆ ಈಗ ಅಲ್ಲಿ ಉಳಿದಿಲ್ಲ. ಪೈಪ್‌ ಒಡೆದಾಗ ಜೋಡಿಸಲು, ವಿದ್ಯುತ್‌ ಕಂಬ ಉರುಳಿ ಬಿದ್ದಾಗ ಅಳವಡಿಸುವ ವಿಷಯದಲ್ಲಿ ತೋರಿಸುವ ಆಸಕ್ತಿಯನ್ನು ಶುದ್ಧ ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಪುರಸಭೆ ಆಡಳಿತ ನಿರೀಕ್ಷಿತ ಪ್ರಮಾಣದಲ್ಲಿ ತೋರದಿರುವುದೇ ಅಶುದ್ಧ ನೀರು ಪೂರೈಕೆಗೆ ಪ್ರಮುಖ ಕಾರಣ ಎಂಬುದು ಸಾರ್ವಜನಿಕರ ಆರೋಪ.

Advertisement

ಜನರಿಗೆ ನಿತ್ಯ ವಾಂತಿ-ಬೇಧಿ: ಅಶುದ್ಧ ನೀರು ಪೂರೈಕೆ ಆಗುತ್ತಿರುವ ಕಾರಣ ಹುಮನಾಬಾದ ಪಟ್ಟಣ ಮಾತ್ರವಲ್ಲದೇ ಈ ನೀರನ್ನು ಸೇವಿಸುತ್ತಿರುವ ಎಷ್ಟೋ ಜನರು ಪ್ರತಿನಿತ್ಯ ವಾಂತಿಬೇಧಿಯಿಂದ ನರಳಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದಾರೆ. ವಾಂತಿ-ಬೇಧಿ ಮತ್ತಿತರ ಕಾಯಿಲೆಗಳಿಂದ ನರಳುವ ಸಾವಿರಾರು ಮಂದಿ ಪುರಸಭೆ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರು ಕಾರಿನಲ್ಲಿ ಮಿನರಲ್ ನೀರು ಇಟ್ಟುಕೊಂಡು ಅಲೆದಾಡುವುದು, ಮನೆಯಲ್ಲಿ ಫಿಲ್ಟರ್‌ ಯಂತ್ರವಿರುವ ಕಾರಣ ಬಡವರ ಈ ನೋವು ಅವರಿಗೆ ಅರ್ಥವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳು ಒಂದೊಮ್ಮೆ ತಮ್ಮ ಪರಿವಾರಕ್ಕೂ ಈ ನೀರು ಕುಡಿಸಿದರೆ ಅವರಿಗೂ ಇದರ ಬಿಸಿ ತಟ್ಟುತ್ತದೆ. ಸಾರ್ವಜನಿಕರ ಈ ಸಮಸ್ಯೆ ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಡಳಿತದ ವಿರುದ್ಧ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಕಾರಂಜಾ ಜಲಾಶಯದಿಂದ ಮಲೀನ ನೀರು ಪೂರೈಕೆ ಆಗುತ್ತಿದೆ. ಪರಿಣಾಮ ಮಕ್ಕಳು ಸೇರಿದಂತೆ ಇಡೀ ಪರಿವಾರಕ್ಕೆ ವಾಂತಿಬೇಧಿಯಿಂದ ನರಳುವ ಸ್ಥಿತಿ ಎದುರಾಗಿದೆ. ಫಿಲ್ಟರ್‌ ಬೆಡ್‌ನಿಂದ ಪೂರೈಕೆ ಆಗುವ ನೀರು ಮಳೆ ನೀರಿನಂತೆ ಇರುತ್ತದೆಯೇ. ಊರ ಉದ್ಧಾರ ಮಾಡುವ ವ್ಯಕ್ತಿಗಳು ಜನರ ಜೊತೆಗೆ ಚೆಲ್ಲಾಟ ಆಡದೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು.
ಜೆ.ಎನ್‌.ಮಲ್ಲಿಕಾರ್ಜುನ, ಹುಮನಾಬಾದ ನಿವಾಸಿ

ಮೂರ್‍ನಾಲ್ಕು ತಿಂಗಳಿಂದ ಸಮರ್ಪಕ ನಿರ್ವಹಣೆ ಆಗದ ಕಾರಣ ಅಶುದ್ಧ ನೀರು ಪೂರೈಕೆ ಆಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ವಿಷಯ ಗಮನಕ್ಕೆ ಬಂದಿದೆ. ನಾಳೆ ಎಂದು ಕಾದು ಕುಳಿತುಕೊಳ್ಳದೇ ಈ ಕ್ಷಣವೇ ಅಲ್ಲಿಗೆ ಭೇಟಿನೀಡಿ, ಸಮಸ್ಯೆ ಬಗೆಹರಿಸುತ್ತೇನೆ.
• ಶಂಭುಲಿಂಗ ದೇಸಾಯಿ,ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next