ಹುಮನಾಬಾದ: ತಾಲೂಕಿನ ವಿವಿಧೆಡೆ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಕಟ್ಟಡ ಮತ್ತಿತರ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸುವುದು ಮಾತ್ರವಲ್ಲದೇ ಗುಣಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು. ಆದೇಶ ತಪ್ಪಿದಲ್ಲಿ ಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣರೆಡ್ಡಿ ಕಟ್ಟುನಿಟ್ಟಿನ ಆದೇಶ ನೀಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳುತ್ತಿರುವ ಹುಮನಾಬವಾದ ಟೌನ್‌ಹಾಲ್ ಕಾಮಗಾರಿಯನ್ನು ತೀವ್ರಗತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು. ಜೊತೆಗೆ ಸಿಂದಬಂದಗಿ ಗ್ರಾಮದಲ್ಲಿ ಕೈಗೊಳ್ಳುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಶೀಘ್ರ ನೂತನ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು. ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರೆ ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದಿದ್ದಾರೆ ಎಂದು ಗ್ರಾಮಸ್ತರು ರಮಣರೆಡ್ಡಿ ಅವರ ಎದುರು ದೂರಿದ ಪ್ರಸಂಗ ನಡೆಯಿತು.
ಹಳ್ಳಿಖೇಡ-ಅತಿವಾಳ ರಸ್ತೆ ಕಾಮಗಾರಿ ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮರ್ಕಲ್ ಗ್ರಾಮದಲ್ಲಿ ಕೈಗೊಳ್ಳುತ್ತಿರುವ ಚರಂಡಿ ಕಾಮಗಾರಿ ಕಂಡು ಸಿಡಿಮಿಡಿಗೊಂಡು ಕಾಮಗಾರಿ ಕಳಪೆ ಆದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕಟ್ಟೆಚ್ಚರ ನೀಡಿದರು.
ದುಬಲಗುಂಡಿ ಗ್ರಾಮಕ್ಕೆ ತೆರಳಿದ ಅವರು ದೇವಸ್ಥಾನವೊಂದರ ಕಾಮಗಾರಿ ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಕೈಗೊಳ್ಳುವಂತೆ ಸೂಚಿಸಿದರು. ಗ್ರಾಮಕ್ಕೆ ಸೇವೆ ಒದಗಿಸದೇ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಕಾಮಗಾರಿ ಗುಣಮಟ್ಟ ಪ್ರಶಂಸಿದರು.
ಹುಮನಾಬಾದ ಸರ್ಕಾರಿ ಪದವಿ ಕಾಲೇಜು ಕಟ್ಟಡ ಕಾಮಗಾರಿ ಪರಿಶೀಲಿಸಿದ ನಂತರ ಉದ್ಯಾನದಲ್ಲಿ ನಿರ್ಮಿಸುತ್ತಿರುವ ಟೌನ್‌ಹಾಲ್ ಕಾಮಗಾರಿ ಪರಿಶೀಲಿಸಿ, ಶೀಘ್ರ ಪೂರ್ಣಗೊಳಿಸುವಂತೆ ಆದೇಶಿಸಿದರು. ತಾಲೂಕಿನ ಹುಡಗಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು 15 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿ ಪರಿಶೀಲಿಸಿ, ಗುಣಮಟ್ಟ ಜೊತೆಯಲ್ಲಿ ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಹಾಗೆಂದು ಬೇಕಾಬಿಟ್ಟಿ ಕಾಮಗಾರಿ ಕೈಗೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ಇದೇ ವೇಳೆ ತಾಲೂಕಿನಾದ್ಯಂತ ಅನೈರ್ಮಲ್ಯ ಕಂಡು ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ, ಉಪವಿಭಾಗಾಧಿ ಕಾರಿ ಭಂವರಸಿಂಗ್ ಮೀನಾ, ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವೈಜಪ್ಪ ಫುಲೆ, ಕೆಆರ್‌ಐಡಿಎಲ್ ಜಿಲ್ಲಾ ಉಪನಿದೇಶಕ ಎಸ್.ಬಿ.ಬಿರಾದಾರ, ಪಂಚಾಯತ ರಾಜ್ ಎಂಜಿನಿಯರಿಂಗ ಉಪವಿಭಾಗ ಎಇಇ ವಾಮನರಾವ್, ಲೋಕೋಪಯೋಗಿ ಇಲಾಖೆ ಎಇಇ ಶಶಿಧರ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ದುಬಲಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಪಸಾರ್ಗಿ, ಹುಡಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಭು ಮಾಳ ನಾಯಕ, ಪಿಡಿಒ ಮಲ್ಲಪ್ಪ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ|ವೀರಣ್ಣ ತುಪ್ಪದ್ ಮತ್ತಿತರರು ಹಾಜರಿದ್ದರು.