ಹುಮನಾಬಾದ: ಕಾರ್ಮಿಕ ಇಲಾಖೆಯಿಂದ ಲಭಿಸುವ ವಿವಿಧ ಸಹಾಯಧನ ಸಕಾಲಕ್ಕೆ ಫಲಾನುಭವಿಗಳ ಖಾತೆಗೆ ಬರದಿರುವುದರಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನಿತ್ಯ ತಾಲೂಕು ಕಚೇರಿಗೆ ಅಲೆದು ಸುಸ್ತಾಗಿದ್ದಾರೆ.
Advertisement
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ದೊರೆಯುವ ವಿವಿಧ ಸೌಲಭ್ಯ ಬರಲಿ, ಬಾರದಿರಲಿ ಯೋಜನೆಗಳ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡದಾಗಿ ನಾಮಫಲಕ ಅಳವಡಿಸುವುದು ಮಾತ್ರ ತಪ್ಪುವುದಿಲ್ಲ. ಹಾಗೆ ಅಳವಡಿಸಿದ ನಾಮಫಲಕ ಗಮನಿಸಿ, ಬಡ ಕೂಲಿ ಕಾರ್ಮಿಕರು ಸರ್ಕಾರದಿಂದ ತಮಗೆ ಏನೆಲ್ಲ ಸೌಲಭ್ಯ ಸಿಗಬಹುದೆಂಬ ನಿರೀಕ್ಷೆಯಿಂದ ಇಲಾಖೆ ಕೇಳುವ ನಮೂನೆಯಲ್ಲಿ ಕಾರ್ಮಿಕರ ಗುರುತಿನ ಚೀಟಿ, ಮಕ್ಕಳ ವಿದ್ಯಾರ್ಥಿ ವೇತನ, ವಿವಾಹ ಸಹಾಯಧನ, ಮೃತಪಟ್ಟ ಹಾಗೂ ಅವರ ಅಂತ್ಯಕ್ರಿಯೆ ಸಂಬಂಧ ಸಿಗುವ ಸಹಾಯಧನಕ್ಕಾಗಿ ತಿಂಗಳುಗಟ್ಟಲೇ ಅಲೆಯುತ್ತಿದ್ದಾರೆ.
Related Articles
Advertisement
ಹೀಗೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತ ವಿನಾಕಾರಣ ನಮ್ಮನ್ನು ಅಲೆದಾಡಿಸುತ್ತಿದ್ದಾರೆ ಎಂದು ಕಚೇರಿಗೆ ಕೆಲಸಕ್ಕೆ ಬಂದ ಐಶ್ವರ್ಯ, ಅಂಬೋಜಿ, ದೇವಾನಂದ, ದಿವ್ಯಾ ಮೊದಲಾದವರು ಆರೋಪಿಸಿದ್ದಾರೆ.
ವಿವಾಹ ಆಗುವವರಿಗೆ ನೀಡಲಾಗುವ 50 ಸಾವಿರ ಸಹಾಯಧನದ 50 ಅರ್ಜಿಗಳು, ವಿದ್ಯಾರ್ಥಿ ವೇತನ ಹಿನ್ನೆಲೆಯಲ್ಲಿ 2017-18 ಮತ್ತು 19ನೇ ಸಾಲಿನ ಅರ್ಜಿ ಸೇರಿ ಒಟ್ಟು 1527 ಅರ್ಜಿ ಬಂದಿವೆ. ಮರಣ ಹೊಂದಿರುವ ಕಾರ್ಮಿಕರ ಅವಲಂಬಿತರಿಗೆ ನೀಡಲಾಗುವ 50 ಸಾವಿರ ಮತ್ತು ಅಂತ್ಯಕ್ರಿಯೆ ಸಹಾಯಧನ 4 ಸಾವಿರ ಸೇರಿ ಒಟ್ಟು 54 ಸಾವಿರ ರೂ. ಸಹಾಯಧನಕ್ಕಾಗಿ 10ಕ್ಕೂ ಅಧಿಕ ಅರ್ಜಿ, ಗರ್ಭಿಣಿಯರ ಸಹಾಯಧನ ಕೋರಿ 5 ಅರ್ಜಿ ಬಂದಿವೆ. ಈ ವರೆಗೆ ಮಂಜೂರಿ ಸಿಕ್ಕಿದ್ದು ಮಾತ್ರ ಬೆರಳೆಣಿಕೆ ಕಾರ್ಮಿಕರಿಗೆ.
ಜಿಲ್ಲೆಯ ಬೀದರ, ಭಾಲ್ಕಿ, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳಿಂದ ಬಂದ ಶೇ.90 ಅರ್ಜಿಗಳು ಮಂಜೂರಾಗಿ ಈಗಾಗಲೇ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ. ಈ ವಿಷಯದಲ್ಲಿ ಜಿಲ್ಲಾ ಅಧಿಕಾರಿಗಳು ಹುಮನಾಬಾದ್ ತಾಲೂಕನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ.
ಫಲಾನುಭವಿಗಳಿಗೆ ಸೌಲಭ್ಯಗಳ ಬಗ್ಗೆ ಗೊಂದಲ ಇರದಂತೆ ಸ್ಪಷ್ಟ ಮಾಹಿತಿ ನೀಡುವುದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಕರ್ತವ್ಯ. ಅರ್ಜಿ ಸಲ್ಲಿಕೆ ಸಂದರ್ಭದಲ್ಲೇ ಸಲ್ಲಿಸಬೇಕಾದ ವಿಧಾನ, ಅರ್ಜಿ ಸಲ್ಲಿಕೆಗೆ ಇರುವ ಕಾಲಮಿತಿ, ಇತ್ಯಾದಿಗಳ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡಿ, ಸಕಾಲಕ್ಕೆ ಮೇಲಧಿಕಾರಿಗಳಿಗೆ ಪಟ್ಟಿ ಕಳುಹಿಸಿ ಅಲೆದಾಡುವುದನ್ನು ತಪ್ಪಿಸಬೇಕು. ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆನ್ನುವುದು ಸಹಾಯಧನ ವಂಚಿತ ಕಾರ್ಮಿಕರ ಒತ್ತಾಸೆ.