Advertisement

ಕುತೂಹಲ ಕೆರಳಿಸಿದ ಬೇವಿನ ಮರ ದ್ರವ ಸೋರಿಕೆ

12:05 PM Dec 28, 2019 | Naveen |

ಹುಮನಾಬಾದ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-65ರ ಹುಡಗಿಯ ನಂದಗಾಂವ ಗ್ರಾಮದ ಮಾರ್ಗದಲ್ಲಿ ಬೇವಿನ ಮರವೊಂದರಿಂದ ಸೋರುತ್ತಿರುವ ಹಾಲಿನಂತಹ ದ್ರವ ದೈವೀ ಸ್ವರೂಪದ್ದೆಂದು ನಂಬಿರುವ ಗ್ರಾಮಸ್ಥರು ಗುರುವಾರದಿಂದ ಮರಕ್ಕೆ ಪೂಜೆ ಮಾಡುವ ಮೂಲಕ ಭಕ್ತಿಸೇವೆ ಸಲ್ಲಿಸಲು ತೊಡಗಿದ್ದಾರೆ.

Advertisement

ಮರಗಳಲ್ಲಿ ನೈಸರ್ಗಿಕವಾಗಿ ಈ ರೀತಿ ನಡೆಯುವುದನ್ನು ಹಿಂದಿನಿಂದಲೂ ಕೇಳಿಕೊಂಡು ಬರುತ್ತಿದರೂ ಕೂಡ ಗ್ರಾಮಸ್ತರು ಸಾಕ್ಷರು, ವೈಜ್ಞಾನಿಕ ದೃಷ್ಟಿಯಿಂದ ಕಾಣುವ ಜನ ಅದು ಪ್ರಕೃತಿ ಸಹಜ ಗುಣವೆಂದು ಹೇಳಿದರೂ ನಂಬದೇ ಅದನ್ನು ದೈವವೆಂದೇ ನಂಬಿ ಮರವನ್ನು ತೊಳೆದು, ಸೀರೆಸುತ್ತಿ ಅರಿಶಿಣ, ಕುಂಕಮದಿಂದ ಪೂಜಿಸುವುದರಲ್ಲಿ ತೊಡಗಿದ್ದಾರೆ.

ಇದರಿಂದ ಆ ಮಾರ್ಗದಿಂದ ನಂದಗಾಂವ್‌, ಬೇನಚಿಂಚೋಳಿ, ಮಲ್ಕಾಪುರವಾಡಿ ಮೊದಲಾದ ಗ್ರಾಮಗಳಿಗೆ ತೆರಳುವ ಜನ ಸಹಜ ಕುತೂಹಲದಿಂದ ಕೆಳಗಿಳಿದು ಕೈಮುಗಿಯುತ್ತಿದ್ದಾರೆ. “ಎಲ್ಲರೂ ಪೂಜಿಸಿ ಕೈ ಮುಗಿಯುತ್ತಿರುವಾಗ ಆ ಬಗ್ಗೆ ಇನ್ನಿಲ್ಲದ ಪ್ರಶ್ನೆ ಕೇಳಿ ನಾವೇಕೆ ಗೊಂದಲಕ್ಕೆ ಸಿಲುಕಿಕೊಳ್ಳಬೇಕು. ಅಷ್ಟಕ್ಕೂ ಕೈ ಮುಗಿದರೆ ನಮಗೇನು ನಷ್ಟ? ಒಂದು ವೇಳೆ ಕೈಮುಗಿಯದೇ ಹಾಗೇ ಹೋದರೆ ಏನಾದರೂ ಅನಾಹುತವಾದರೆ ಯಾರು ಹೊಣೆ’ ಎನ್ನುವ ಜನರು, ಅದೇ ಭಯದಿಂದ ನಮಸ್ಕರಿಸಿ ಹೋಗುತ್ತಿದ್ದಾರೆ.

ಕಾಕತಾಳೀಯ ಎಂಬಂತೆ ಬುಧವಾರದ ವರೆಗೂ ಅಷ್ಟಾಗಿ ಕಾಣದ ಹಾಲಿನ ರೂಪದ ದ್ರವ ಗುರುವಾರ ಗ್ರಹಣದ ನಂತರ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ ಎಂಬುದು ಇನ್ನೂ ಹಲವರ ಅಭಿಪ್ರಾಯ.

ಸಕಲ ಜೀವಿಗಳಂತೆ ಮರಗಳಿಗೂ ವಿವಿಧ ನಾಳಗಳಿರುತ್ತವೆ. ಮರದ ಅನ್ನನಾಳ ಹಾನಿಗೊಳಗಾದಾಗ ಈ ರೀತಿ ಹಾಲಿನ ರೂಪದ ದ್ರವ ಸೋರಿಕೆಯಾಗುತ್ತದೆ. ಜನ ತಿಳಿದುಕೊಂಡಂತೆ ಮರದಲ್ಲಿ ದೇವರು ಕಾಣಿಸಿಕೊಳ್ಳುವುದಿಲ್ಲ. ಅನಕ್ಷರಸ್ಥ ಜನರು ಹಾಗೆ ಅಂದುಕೊಂಡರೆ ತಿಳಿಸಿ ಹೇಳುವುದು ಕಷ್ಟಸಾಧ್ಯ. ಒಂದಂತೂ ಸತ್ಯ ಇದು ಕಾಯಿಲೆಯಲ್ಲದೇ ಬೇರೇನಲ್ಲ.
„ಪ್ರೊ| ಎಸ್‌.ವಿ.ಕಲ್ಮಠ್,
ಸಸ್ಯಶಾಸ್ತ್ರ ನಿವೃತ್ತ ಪ್ರಾಧ್ಯಾಪಕರು, ಬೀದರ್‌

Advertisement

ಪ್ರಕೃತಿಯಲ್ಲಿ ಮರಕ್ಕೆ ವಿಶೇಷ ಮಹತ್ವವಿದೆ. ಮನುಷ್ಯನಿಗೆ ಆಮ್ಲಜನಕ ಕೊಡುತ್ತದೆ. ಹಣ್ಣು, ನೆರಳು ಕೊಡುತ್ತದೆ. ಈ ಎಲ್ಲ ಗುಣಗಳಿರುವ ಕಾರಣ ಮರವನ್ನು ದೇವರೆಂದರೇ ಪ್ರತಿಯೊಬ್ಬರೂ
ಒಪ್ಪುತ್ತಾರೆ. ಆದರೆ ಮರದಿಂದ ಹಾಲಿನ ರೂಪದಲ್ಲಿ ದ್ರವ ಸುರಿಯುವುದು ರಾಸಾಯನಿಕ ಪ್ರಕ್ರಿಯೆ ಹೊರತು ಅದು ಖಂಡಿತ ಪವಾಡವಲ್ಲ.
„ಪಂಡಿತ್‌ ಕೆ.ಬಾಳೂರೆ,
ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ

 

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next