Advertisement

ಅರಳು ಹುರಿಯೋ ಕಾಯಕಕ್ಕೆ ಶತಮಾನದ ಹಿನ್ನೆಲೆ

10:27 AM Aug 05, 2019 | Naveen |

ಶಶಿಕಂತ ಕೆ.ಭಗೋಜಿ
ಹುಮನಾಬಾದ:
ನಾಗರ ಪಂಚಮಿ ಹಬ್ಬದಂದು ನಾಗದೇವತೆಗೆ ಹಾಲು ಎರೆಯಲು ಹಾಲು, ಜೋಳದ ಅರಳು, ಕಡಲೆ, ಅಳ್ದಿಟ್ಟು ಇತ್ಯಾದಿ ಬೇಕೇ ಬೇಕು. ಅಂಥ ಅರಳು ಹುರಿಯೋ ಕಾಯಕಕ್ಕೆ ಪಟ್ಟಣದ ಪುಟಾಣಿ ಗಲ್ಲಿಯ ವಿವಿಧ ಪರಿವಾರಗಳಿಗೆ ಸರಿ ಸುಮಾರು ಶತಮಾನದ ಹಿನ್ನೆಲೆ ಇದೆ.

Advertisement

ನಾಗರ ಪಂಚಮಿ ಹಬ್ಬದಲ್ಲಿ ನಾಗದೇವತೆಗೆ ನೈವೇದ್ಯಕ್ಕೆ ವಿಶೇಷ ಅಡುಗೆ ಸಿದ್ಧಪಡಿಸಿ, ಸಮರ್ಪಿಸುವುದು ವಾಡಿಕೆ. ಕಳವಿ ಅಕ್ಕಿಯನ್ನು ಕೇವಲ ಪೂಜೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು. ಆದರೆ ನಿತ್ಯದ ಆಹಾರವಾಗಿ ಅದನ್ನು ಉಳ್ಳವರು ಮಾತ್ರ ಬಳಸುತ್ತಿದ್ದ ಕಾರಣ ಅಕ್ಕಿ ಬಡವರ ಪಾಲಿಗೆ ಗಗನಕುಸುಮವಾಗಿತ್ತು. ಈ ಭಾಗದ ಆಹಾರ ಪದ್ಧತಿ ಅತ್ಯಂತ ಮಹತ್ವದ ಧಾನ್ಯ ಜೋಳವೇ ಆಗಿರುವುದು ಮತ್ತು ದೇಹದ ಆರೋಗ್ಯಕ್ಕೆ ಅತ್ಯುತ್ತಮ ಎಂಬ ಕಾರಣಕ್ಕೆ ಅತ್ಯಂತ ಪವಿತ್ರವಾದ ಜೋಳದ ಅರಳನ್ನೇ ನೈವೇದ್ಯಕ್ಕೆ ಸಮರ್ಪಿಸಲಾಗುತ್ತಿತ್ತು.

ಬೀದರ್‌ನಲ್ಲೇ ಹೆಚ್ಚು ಪ್ರಚಲಿತ: ಜೋಳವನ್ನು ಬೀದರ್‌ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಯಲಾಗುತ್ತಿತ್ತು. ಹೀಗಾಗಿ ನಾಗರ ಪಂಚಮಿ ಹಬ್ಬದಲ್ಲಿ ಇಲ್ಲಿ ಅಕ್ಕಿ (ಕಳವಿ) ಅಳ್ಳಿನ ಬದಲಿಗೆ ಜೋಳದ ಅಳ್ಳನ್ನೇ ಬಳಕೆ ಮಾಡಲಾಗುತ್ತಿತ್ತು. ಶತ‌ಮಾನದಿಂದ ಅಳ್ಳು ಹುರಿಯುವ ಕಾಯಕ ಮಾಡಿಕೊಂಡು ಬಂದ ಪಟ್ಟಣದ ಪುಟಾಣಿ ಗಲ್ಲಿಯ ಸ್ವಾತಂತ್ರ್ಯ ಹೋರಾಟಗಾರ ದತ್ತುರಾವ್‌ ರಾಗೋಜಿ ಸೂರ್ಯವಂಶಿ ಅವರು ಕಳವಿ ಅರಳು ಹುರಿಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಅಕ್ಕಿ ದುಬಾರಿಯಾಗಿ ಯಾರೂ ತರದೇ ಇರುವ ಕಾರಣ ಈ ಭಾಗದ ಜನ ಜೋಳದ ಅರಳನ್ನೇ ಹುರಿಯಲು ಶುರು ಮಾಡಿದ್ದರು.

ಓಣಿಗೊಂದು ಅರಳಿನ ಭಟ್ಟಿ: ವರ್ಷಕ್ಕೊಮ್ಮೆ ಬರುವ ಈ ಹಬ್ಬದಲ್ಲಿ ಗ್ರಾಹಕರು ಜೋಳದ ಅರಳನ್ನೇ ಹುರಿಸಲು ಬರುತ್ತಿರುವುದನ್ನು ಗಮನಿಸಿದ ಸೂರ್ಯವಂಶಿ ಅವರು ತಮ್ಮ ನಿತ್ಯದ ಭಟ್ಟಿಯಲ್ಲಿ ಹುರಿಯಲು ತೊಂದರೆ ಆಗುತ್ತಿದ್ದ ಕಾರಣ ನಾಗರ ಪಂಚಮಿ ಹಬ್ಬದಲ್ಲಿ ಓಣಿಗೊಂದರಂತೆ ಅರಳಿನ ಭಟ್ಟಿ ಹಾಕುತ್ತಿದ್ದರು. ನಾಲ್ಕೈದು ದಶಕಗಳ ಹಿಂದೆ ಜನ ಹುರಿದ ಅರಳು ಪೂಜೆಗಾಗಿ ಮಾತ್ರವಲ್ಲದೇ ಕನಿಷ್ಟ 6 ತಿಂಗಳಿಗೆ ಬೇಕಾಗುಷ್ಟು ಅರಳನ್ನು ಅದಕ್ಕಾಗಿ ಮೀಸಲಾದ ಕಾಗಿ ಜೋಳ ನೆನೆಸಿ, ಆರಿಸಿ ಹುರಿಸಲು ತರುತ್ತಿದ್ದರು. ಮನೆಗೆ ಬರುವ ಅತಿಥಿಗಳಿಗೂ ನಾಲ್ಕಾರು ತಿಂಗಳ ಕಾಲ ಆ ಜೋಳದ ಅರಳಿನಿಂದ ಚೂಡಾ ಮಾಡಿ ಕೊಡುತ್ತಿದ್ದರು. ಜೊತೆಗೆ ಮನೆಯಲ್ಲೇ ಸಾಕಷ್ಟು ಬೆಲ್ಲ ಇರುತ್ತಿದ್ದ ಕಾರಣ ಜೋಳದರಳು ಮತ್ತು ಬೆಲ್ಲದ ಪಾಕು ಮಿಶ್ರಣ ಮಾಡಿ ಉಂಡಿ ಸಿದ್ಧಪಡಿಸಿ, ತಿಂಗಳುಗಟ್ಟಲೇ ಮಕ್ಕಳಿಗೆ ತಿನ್ನಲು ಕೊಡುತ್ತಿದ್ದರು.

ಈ ಕಾಯಕವನ್ನು ಹಳೆ ತಲೆಮಾರಿನ ದತ್ತುರಾವ್‌ ಜಂಬೂರೆ, ನಂದಕುನಮಾರ ಸೂರ್ಯವಂಶಿ, ಹೀರಾಲಾಲ್ ಸೂರ್ಯ ವಂಶಿ, ಸಂಪತ್‌ ಜಂಬೂರೆ, ಸುರೇಖಾಬಾಯಿ ಜಂಬೂರೆ ಮುಂದುವರಿಸಿಕೊಂಡು ಬಂದರು. ಆದರೆ ಬರುಬರುತ್ತ ಅರಳು ಹುರಿಸುವವರ ಸಂಖ್ಯೆ ಕಡಿಮಡೆಯಾಗಿ ಮಣ ಗಟ್ಟಲೇ ಹುರಿಸುವವರು ಕಿಲೋ ಗ್ರಾಂ ತಲುಪಿದ ಕಾರಣ ಈಗ ಓಣಿಗೊಂದು ಭಟ್ಟಿ ಕಾಣುತ್ತಿಲ್ಲ. ಆಗ ಮಣಗಟ್ಟಲೇ ಹುರಿಸುತ್ತಿದ್ದವರು ಬರುಬರುತ್ತ ಸೇರು, ಕೆಜಿಗೆ ಬಂದರು. ಈಗ ಅದೂ ಮಾಯವಾಗಿ ಈಗ ಪೂಜೆಗೆ ಸೀಂಮಿತಗೊಂಡ ನಂತರ ಅದರ ಪ್ರಮಾಣ ಒಂದೆರಡು ಕೆಜಿ ಸಿದ್ಧ ಜೋಳದ ಅರಳನ್ನೇ ಖರೀದಿಸುತ್ತಿರುವ ಕಾರಣ ಜೋಳದ ಅರಳು ಹುರಿಯುವ ವ್ಯಾಪಾರಿಗಳಿಗೆ ಲಾಭದ ಮಾತು ದೂರ ಭಟ್ಟಿ ಸಿದ್ಧತೆಗೆ ತಗುಲುವ ಹಣವೂ ಕೈಗೆ ಬರದಂತಾಗಿದೆ.

Advertisement

ಲಾಭ-ಹಾನಿ ಲೆಕ್ಕವಿಲ್ಲ: ಜನ ಅರಳು ಹುರಿಸಲಿ ಬಿಡಲಿ ಕನಿಷ್ಟ ಹುರಿಸಿದರೂ ಸರಿ. ಆ ಕಾಯಕದಿಂದ ಆದಾಯ ಸಿಗಲಿ, ಸಿಗದೇ ಇರಲಿ ಶತಮಾನದಿಂದ ಚಾಲ್ತಿಯಲ್ಲಿರುವ ಜೋಳದ ಅರಳು ಹುರಿಯುವ ಕಾಯಕವನ್ನು ಆಯಾ ಪರಿವಾರಗಳ ಹೊಸ ತಲೆಮಾರಿನವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆ ಪೈಕಿ ದಣ್ಣಾರಾಜ ಮೋರೆ, ವೈಷ್ಣವಿ ಲಾಂಡೆ, ನರೇಶ ಮೋರೆ, ರಾಜೇಶ ಮೋರೆ, ದೇವಿದಾಸ ಸೂರ್ಯವಂಶಿ ಮತ್ತಿತರರು ಕಾಯಕ ಮುಂದುವರಿಸಿಕೊಂಡು ಬರುತ್ತಿರುವುದು ಪರಂಪರೆ ಪ್ರಿಯರಿಗೆ ಸಂತಸ ತಂದಿದೆ.

ದತ್ತುರಾವ್‌ ರಾಘೋಜಿ ಸೂರ್ಯವಂಶಿ, ರಾಜೇಶ ಮೋರೆ, ನೀಲೇಶ ಲಾಂಡೆ ಮೊದಲಾದ ಪರಿವಾರಗಳು ಹಾನಿ ಲಾಭದ ಲೆಕ್ಕ ಹಾಕದೇ ಕಿಂಚಿತ್ತೂ ಬೇಸರಪಡದೇ ಪರಂಪರಾಗತ ಅರಳು ಹುರಿಯುವ ಕಾಯಕವನ್ನು ಯಥಾವತ್‌ ಮುಂದುವರಿಸಿಕೊಂಡು ಬರುತ್ತಿರುವುದು ಪ್ರಶಂಸನೀಯ.
ರವಿಕುಮಾರ ಘವಾಳ್ಕರ್‌,
 ಕಾರ್ಮಿಕ ಪಡೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next