Advertisement

ಮಹಾಲಕ್ಷ್ಮೀ ಪ್ರತಿಷ್ಠಾಪನೆ

11:49 AM Sep 07, 2019 | Team Udayavani |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಭಾದ್ರಪದ ಮಾಸದಲ್ಲಿ ಗಣೇಶ ಪ್ರತಿಷ್ಠಾಪನೆಗೊಂಡ 5ನೇ ದಿನಕ್ಕೆ ಪಟ್ಟಣದ ಎಲ್ಲೆಡೆ ಮಹಾಲಕ್ಷ್ಮೀ ಮೂರ್ತಿ ಪ್ರತಿಷ್ಠಾಪಿಸುವುದು ಸಾಮಾನ್ಯ. ಅದರಂತೆ ಪಟ್ಟಣದ ಮುರಘಾ ಮಠ ಹತ್ತಿರದ ಲಕ್ಷ್ಮೀ ನಿವಾಸದಲ್ಲಿ ಮಹಾಲಕ್ಷ್ಮೀ ಮೂರ್ತಿ ಪ್ರತಿಷ್ಠಾಪಿಸಿರುವುದರಿಂದ ಓಣಿಯಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿದೆ.

Advertisement

ಮುರಘಾಮಠ ಓಣಿಯ ಚಿದ್ರಿ ಪರಿವಾರಕ್ಕೆ ಸೇರಿದ ಲಕ್ಷ್ಮೀ ನಿವಾಸದಲ್ಲಿ ಪ್ರತಿಷ್ಠಾಪಿಸುವ ಮಹಾಲಕ್ಷ್ಮೀ ಉತ್ಸವ ಈಗ ಏಳೂವರೆ ದಶಕ ಪೂರೈಸಿದೆ. ಸುಮಾರು ಎರಡು ತಲೆಮಾರಿನಿಂದ ನಡೆಯುತ್ತಿರುವ ಈ ಮಹತ್ವದ ಉತ್ಸವದಲ್ಲಿ ಆರಂಭದಲ್ಲಿ ಕಾಶೀನಾಥರಾವ್‌ ಇಟಗಾಕರ್‌, ದತ್ತಾತ್ರೇಯ ಇಟಗಾಕರ್‌, ರಾಘವೇಂದ್ರ ಪ್ರಕಾಶ ಇಟಗಾಕರ್‌ ನಂತರ ಈಗ ಡಾ|ಶ್ರೀರಂಗರಾವ್‌ ಇಟಗಾಕರ್‌ ಅವರ ಪೌರೋಹಿತ್ಯದಲ್ಲಿ ವಿಶೇಷ ಪೂಜೆ ನೆರವೇರುತ್ತದೆ.

ಉತ್ಸವದ ಅಂಗವಾಗಿ ಬರೀ ಮಹಾಲಕ್ಷ್ಮೀ ಮೂರ್ತಿ ಪ್ರತಿಷ್ಠಾಪಿಸಿ, ಓಣಿ ಮಂದಿಗೆ ದಾಸೋಹ ವ್ಯವಸ್ಥೆ ಮಾಡಿದರೆ ವಿಶೇಷ ಏನೂ ಇರುತ್ತಿರಲಿಲ್ಲ. ಮೂರ್ತಿ ಪ್ರತಿಷ್ಠಾಪನೆ ಜೊತೆಗೆ ಲಕ್ಷ್ಮೀ ನಿವಾಸದ ಪ್ರಾಂಗಣದೆಲ್ಲೆಡೆ ವಸ್ತು ಪ್ರದರ್ಶನ ನಡೆಸಲಾಗುತ್ತದೆ. ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸಲು ಈ ಭಾಗದ ಗ್ರಾಮೀಣ ಪ್ರದೇಶದ ಕೋಲಾಟ ತಂಡ, ಜಾನಪದ ನೃತ್ಯ ತಂಡ, ಗಾಯನ ತಂಡದವರನ್ನು ಆಹ್ವಾನಿಸಿ, ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನ ಆಯೋಜಿಸಲಾಗುತ್ತದೆ. ಎರಡು ವರ್ಷಗಳಿಂದ ಸ್ಥಳೀಯ ಕಲಾವಿದರು ಹಾಗೂ ಬೀದರ್‌, ಕಲಬುರಗಿ ಜಿಲ್ಲಾ ಕೇಂದ್ರಗಳಿಂದ ನಾಟ್ಯ ಶಾಲೆ ಮಕ್ಕಳನ್ನು ಆಹ್ವಾನಿಸಲಾಗುತ್ತದೆ. ಖ್ಯಾತ ಹಾಸ್ಯ ಕಲಾವಿದರನ್ನು ಆಹ್ವಾನಿಸಿ, ದೇವರ ದರ್ಶನ ಜೊತೆಗೆ ಮನರಂಜನೆ ಕಾರ್ಯಕ್ರಮ ಆಯೋಜಿಸಿ ಭಕ್ತರ ಕಣ್ಮನ ತಣಿಸುತ್ತಾರೆ.

ಮಹಾಲಕ್ಷ್ಮೀ ಪ್ರತಿಷ್ಠಾಪನೆ ದಿನ ಪರಿವಾರ ಸದಸ್ಯರು ಮಾತ್ರ ಇದ್ದರೆ ಮಾರನೇ ದಿನ ದಾರ ಕಟ್ಟಿಕೊಳ್ಳುವ ಕಾರ್ಯಕ್ರಮ ನಡೆದ ನಂತರ ಆ ಓಣಿಯಲ್ಲಿ ಜಾತ್ರೆ ಸಂಭ್ರಮ ಇರುತ್ತದೆ. ಪಟ್ಟಣ ಮಾತ್ರವಲ್ಲದೇ ಬೀದರ್‌ ಜಿಲ್ಲೆಯ ವಿವಿಧ ತಾಲೂಕಿನಿಂದ ಸಾವಿರಾರು ಜನ ದರ್ಶನಕ್ಕಾಗಿ ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿರುತ್ತದೆ. ಆ ದಿನ ಸುಮಾರು 2,500 ಜನರಿಗೆ ವಿಶೇಷ ದಾಸೋಹ ವ್ಯವಸ್ಥೆ ಮಾಡುತ್ತಾರೆ. ಶಾಸಕ ರಾಜಶೇಖರ ಪಾಟೀಲ ಸೇರಿದಂತೆ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ, ದರ್ಶನ ಪಡೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next